ಕನ್ನಡಪ್ರಭ ವಾರ್ತೆ ಪುತ್ತೂರು
ಪುತ್ತೂರಿನ ವಿವೇಕಾನಂದ ಶಿಶುಮಂದಿರ ಮತ್ತು ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿಯ ಆಶ್ರಯದಲ್ಲಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಹಯೋಗದಲ್ಲಿ ೧೬ರಂದು ೨೭ನೇ ವರ್ಷದ ಶ್ರೀಕೃಷ್ಣ ಲೋಕ ಕಾರ್ಯಕ್ರಮ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಮುಂಬಾಗದಲ್ಲಿರುವ ವೇದಿಕೆಯಲ್ಲಿ ನಡೆಯಲಿದೆ.ಕಾರ್ಯಕ್ರಮದಲ್ಲಿ ಶ್ರೀ ಬಾಲಕೃಷ್ಣನ ತೊಟ್ಟಿಲ ಸಂಭ್ರಮ ಮತ್ತು ಶೋಭಾಯಾತ್ರೆ ನಡೆಯಲಿದೆ ಎಂದು ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ಅಧ್ಯಕ್ಷ ಮೋಹನ್ ಕೆ. ಹೇಳಿದರು.ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅಂದು ಬೆಳಗ್ಗೆ ವಿವೇಕಾನಂದ ಶಿಶು ಮಂದಿರದಲ್ಲಿ ಬಾಲಕೃಷ್ಣನ ತೊಟ್ಟಿಲ ಸಂಭ್ರಮ ಕಾರ್ಯಕ್ರಮ ನಡೆಯಲಿದೆ. ೯.೩೦ಕ್ಕೆ ಶೋಭಾಯಾತ್ರೆ ಆರಂಭಗೊಳ್ಳಲಿದೆ. ಪರ್ಲಡ್ಕ ರಸ್ತೆಯಿಂದ ಮುಖ್ಯ ರಸ್ತೆಗೆ ಬಂದು ಶ್ರೀ ಮಹಾಲಿಂಗೇಶ್ವರ ದೇವಳದ ದೇವರಮಾರು ಗದ್ದೆಯಲ್ಲಿ ನಿರ್ಮಿಸಿರುವ ಸಭಾಭವನಕ್ಕೆ ಶೋಭಾಯಾತ್ರೆ ಆಗಮಿಸಲಿದೆ. ೧೨೦೦ಕ್ಕೂ ಅಧಿಕ ಪುಟಾಣಿ ಮಕ್ಕಳು ಶ್ರೀಕೃಷ್ಣನ ವೇಷ ಧರಿಸಿ ಮೆರವಣಿಗೆಯಲ್ಲಿ ಸಾಗಲಿದ್ದಾರೆ. ಮಕ್ಕಳ ಹೆತ್ತವರು ಸಾಂಪ್ರದಾಯಿಕ ಉಡುಗೆಗಳೊಂದಿಗೆ ಭಾಗವಹಿಸಲಿದ್ದಾರೆ ಎಂದರು.ಬಳಿಕ ನಡೆಯಲಿರುವ ಸಭಾ ಕಾರ್ಯಕ್ರಮವನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಉದ್ಘಾಟಿಸಲಿದ್ದಾರೆ. ಅಗಲ್ಪಾಡಿ ಎಸ್‌ಎಪಿಎಚ್‌ಎಸ್ ಅಧ್ಯಾಪಕ ಹರಿನಾರಾಯಣ ಶಿರಂತಡ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾಜ ಸೇವಕ ಅಗಿಲೆ ಯೋಗೀಶ್ ಹಾಸನ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ವಿವೇಕಾನಂದ ಸ್ನಾತಕೋತ್ತರ ಅದ್ಯಯನ ಕೇಂದ್ರದ ಡೀನ್ ಡಾ. ವಿಜಯ ಸರಸ್ವತಿ ಬಿ. ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ಗೌರವಾಧ್ಯಕ್ಷೆ ರಾಜೀ ಬಲರಾಮ ಆಚಾರ್ಯ, ಉಪಾಧ್ಯಕ್ಷೆ ಮಾಲಿನಿ ಕಷ್ಯಪ್, ಸದಸ್ಯ ಉಮೇಶ್ ಕುಮಾರ್, ವಿವೇಕಾನಂದ ಶಿಶು ಮಂದಿರದ ಸಂಚಾಲಕ ಅಕ್ಷಯ ಕುಮಾರ್ ಬಿ.ಎಸ್. ಇದ್ದರು.