ಪುತ್ತೂರು: 5ರಂದು ‘ಹಿಂದೂ ಧರ್ಮ ಶಿಕ್ಷಣ’ ಆರಂಭ

KannadaprabhaNewsNetwork |  
Published : May 01, 2025, 12:45 AM IST
ಫೋಟೋ: ೩೦ಪಿಟಿಆರ್-ಪ್ರೆಸ್ಸುದ್ಧಿಗೋಷ್ಠಿಯಲ್ಲಿ ದಂಬೆಕಾನ ಸದಾಶಿವ ರೈ ಮಾತನಾಡಿದರು.  | Kannada Prabha

ಸಾರಾಂಶ

೫ರಂದು ಅಪರಾಹ್ನ ಶೃಂಗೇರಿ ಮಠದಲ್ಲಿ ಹಿಂದೂ ಧರ್ಮ ಶಿಕ್ಷಣ ತರಗತಿಗೆ ಚಾಲನೆ ನೀಡಲಾಗುವುದು. ಶೃಂಗೇರಿ ಮಠಾಧಿಪತಿ ಶ್ರೀ ವಿಧುಶೇಖರ ಸ್ವಾಮೀಜಿ ತರಗತಿ ಉದ್ಘಾಟಿಸಲಿದ್ದಾರೆ ಎಂದು ಪುತ್ತೂರು ತಾಲೂಕು ಧರ್ಮ ಶಿಕ್ಷಣ ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.

ಶೃಂಗೇರಿ ಪೀಠಾಧಿಪತಿಗಳಿಂದ ಹಿಂದೂ ಸಮಾಜಕ್ಕೆ ಮಾರ್ಗದರ್ಶನ । ದೇಶಾದ್ಯಂತ ಯೋಜನೆ ವಿಸ್ತರಣೆ

ಕನ್ನಡಪ್ರಭ ವಾರ್ತೆ ಪುತ್ತೂರು

ಹಿಂದೂ ಮಕ್ಕಳಿಗೆ ಬಾಲ್ಯದಲ್ಲಿಯೇ ಧಾರ್ಮಿಕ ಶಿಕ್ಷಣ ನೀಡುವ ಯೋಜನೆ ಹಮ್ಮಿಕೊಳ್ಳಲಾಗುತ್ತಿದ್ದು, ೫ರಂದು ಅಪರಾಹ್ನ ಶೃಂಗೇರಿ ಮಠದಲ್ಲಿ ಹಿಂದೂ ಧರ್ಮ ಶಿಕ್ಷಣ ತರಗತಿಗೆ ಚಾಲನೆ ನೀಡಲಾಗುವುದು. ಶೃಂಗೇರಿ ಮಠಾಧಿಪತಿ ಶ್ರೀ ವಿಧುಶೇಖರ ಸ್ವಾಮೀಜಿ ತರಗತಿ ಉದ್ಘಾಟಿಸಲಿದ್ದಾರೆ ಎಂದು ಪುತ್ತೂರು ತಾಲೂಕು ಧರ್ಮ ಶಿಕ್ಷಣ ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.

ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಮಿತಿಯ ಅಧ್ಯಕ್ಷ ದಂಬೆಕಾನ ಸದಾಶಿವ ರೈ, ಉಪಾಧ್ಯಕ್ಷ ಆರ್.ಸಿ. ನಾರಾಯಣ ಮತ್ತು ಸಂಯೋಜಕ ಕಾವು ಹೇಮನಾಥ ಶೆಟ್ಟಿ ಅವರು ಈಗಿನ ಕಾಲದಲ್ಲಿ ಉಂಟಾಗುತ್ತಿರುವ ಧರ್ಮಗ್ಲಾನಿ ತಡೆಯಲು ಶೃಂಗೇರಿ ಪೀಠಾಧಿಪತಿಗಳು ಹಿಂದೂ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ. ದೇಶದಾದ್ಯಂತ ಹಿಂದೂ ಮಕ್ಕಳಿಗೆ ಹಿಂದೂ ಧರ್ಮ ಶಿಕ್ಷಣ ಒದಗಿಸಲು ಮುಂದಾಗಿದ್ದಾರೆ. ಇದಕ್ಕಾಗಿ ಪಠ್ಯ ಕ್ರಮ ವ್ಯವಸ್ಥೆಗಳನ್ನು ರೂಪಿಸಲಾಗುತ್ತಿದೆ ಎಂದರು.

ಪುತ್ತೂರು ಮತ್ತು ಕಡಬ ತಾಲೂಕುಗಳಲ್ಲಿ ಹಿಂದೂ ಧರ್ಮ ಶಿಕ್ಷಣ ಗ್ರಾಮ ಸಮಿತಿಗಳ ನೇತೃತ್ವದಲ್ಲಿ ಧರ್ಮ ಶಿಕ್ಷಣ ಕಲಿಕೆ ನಡೆಯಲಿದೆ. ಇದಕ್ಕಾಗಿ ಈಗಾಗಲೇ ೩೦ಕ್ಕೂ ಅಧಿಕ ಕಡೆಗಳಲ್ಲಿ ಗ್ರಾಮ ಸಮಿತಿ ರಚನೆ ಮಾಡಲಾಗಿದೆ. ಮುಂದೆ ಅವಿಭಜಿತ ಪುತ್ತೂರು ತಾಲೂಕಿನ ಎಲ್ಲಾ ಗ್ರಾಮಗಳಲ್ಲಿಯೂ ಗ್ರಾಮ ಸಮಿತಿ ರಚನೆಗೊಂಡು ಬಳಿಕ ಶಿಕ್ಷಣ ಆರಂಭಗೊಳ್ಳಲಿದೆ ಎಂದರು.

ದೇಶದಲ್ಲಿಯೇ ಮೊತ್ತ ಮೊದಲ ಬಾರಿಗೆ ಪುತ್ತೂರಿನಲ್ಲಿ ಹಿಂದೂ ಧರ್ಮ ಶಿಕ್ಷಣ ಜಾರಿಗೊಳಿಸಲಾಗುತ್ತಿದೆ. ಪುತ್ತೂರಿನ ಶ್ರಿ ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ವತಿಯಿಂದ ಈ ಹಿಂದೆ ಧರ್ಮ ಶಿಕ್ಷಣ ನೀಡುವ ಕಾರ್ಯ ಆರಂಭಗೊಂಡಿತ್ತು. ಇದೀಗ ಅದನ್ನು ಜೋಡಿಸಿಕೊಂಡು ಮುಂದುವರಿಯಲಾಗುತ್ತಿದೆ. ಜ.೧೨ರಂದು ದೇವಳದ ಎದುರಿನ ನಟರಾಜ ವೇದಿಕೆಯಲ್ಲಿ ಹಿಂದೂ ಧರ್ಮಗಳ ವಿವಿಧ ಸಮಾಜದ ಸಭೆ ನಡೆದು ಗ್ರಾಮ ಸಮಿತಿ ನಿರ್ಮಾಣ ಹಾಗೂ ಸಂಚಾಲಕರನ್ನು ನೇಮಿಸುವ ಬಗ್ಗೆ ನಿರ್ಣಯಿಸಲಾಗಿತ್ತು ಎಂದು ಮಾಹಿತಿ ನೀಡಿದರು.

ಹಿಂದೂ ಧರ್ಮ ಶಿಕ್ಷಣ ತರಗತಿಗಳ ಉದ್ಘಾಟನೆಯನ್ನು ಶೃಂಗೇರಿ ಮಠದ ವಿಧುಶೇಖರ ಸ್ವಾಮೀಜಿ ೫ರಂದು ಅಪರಾಹ್ನ ೩ ಗಂಟೆಗೆ ಶೃಂಗೇರಿ ಮಠದಲ್ಲಿ ನಡೆಸಿಕೊಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ತಾಲೂಕು ಸಮಿತಿಯ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಬೋರ್ಕರ್, ಕೋಶಾಧಿಕಾರಿ ಮಾಧವ ಸ್ವಾಮಿ, ಧರ್ಮಶಿಕ್ಷಣ ಸಮಿತಿಯ ಪೂರ್ಣಾವಧಿ ಕಾರ್ಯಕರ್ತ ದಿನೇಶ್ ಜೈನ್ ಇದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...