ನೀರಿನ ಟ್ಯಾಂಕ್‌ಗೆ ಹಾರಿ ಪುತ್ತೂರು ನಗರಸಭೆ ಸದಸ್ಯ ಆತ್ಮಹತ್ಯೆ!

KannadaprabhaNewsNetwork |  
Published : Jun 05, 2025, 11:52 PM IST
ರಮೇಶ್ ರೈ ನೆಲ್ಲಿಕಟ್ಟೆ | Kannada Prabha

ಸಾರಾಂಶ

ಪುತ್ತೂರು ನಗರಸಭಾ ಸದಸ್ಯ ರಮೇಶ್ ರೈ ನೆಲ್ಲಿಕಟ್ಟೆ (55) ಪಾಣೆಮಂಗಳೂರು ನೇತ್ರಾವತಿ ನದಿ ಕಿನಾರೆಯಲ್ಲಿರುವ ಕುಡಿಯುವ ನೀರಿನ ಟ್ಯಾಂಕ್‌ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ನಡೆದಿದೆ.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಪುತ್ತೂರು ನಗರಸಭಾ ಸದಸ್ಯ ರಮೇಶ್ ರೈ ನೆಲ್ಲಿಕಟ್ಟೆ (55) ಪಾಣೆಮಂಗಳೂರು ನೇತ್ರಾವತಿ ನದಿ ಕಿನಾರೆಯಲ್ಲಿರುವ ಕುಡಿಯುವ ನೀರಿನ ಟ್ಯಾಂಕ್‌ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ನಡೆದಿದೆ.ಬೆಳಗ್ಗೆ ಸುಮಾರು 11 ಗಂಟೆಗೆ ಪುತ್ತೂರಿನಿಂದ ಬೈಕಿನಲ್ಲಿ ಬಂದ ರಮೇಶ್ ರೈ ಪಾಣೆಮಂಗಳೂರು ಹಳೆಯ ಸೇತುವೆ ಕೆಳಭಾಗದಲ್ಲಿ ಬೈಕ್ ನಿಲ್ಲಿಸಿ, ಶರ್ಟ್ ಕಳಚಿ, ಪರ್ಸ್, ಚಪ್ಪಲಿ ಹಾಗೂ ಮೊಬೈಲ್ ಬಿಟ್ಟು ಕಾಣೆಯಾಗಿದ್ದರು.

ಅನಾಥವಾಗಿದ್ದ ಬೈಕ್ ಹಾಗೂ ಮೊಬೈಲ್‌ನ್ನು ಕಂಡು ಸ್ಥಳೀಯರು ಬಂಟ್ವಾಳ ನಗರ ಪೋಲೀಸರಿಗೆ ಮಾಹಿತಿ ನೀಡಿದ್ದರು.ಸ್ಥಳಕ್ಕೆ ಆಗಮಿಸಿದ ಪೋಲೀಸರು ಮೊಬೈಲ್ ಫೋನ್ ಆಧಾರದ ಮೇಲೆ ಪೋನ್ ಮಾಡಿದಾಗ ನೆಲ್ಲಿಕಟ್ಟೆ ರಮೇಶ್ ರೈ ಅವರ ಬೈಕ್ ಎಂಬುದು ‌ಖಚಿತವಾದ ಬಳಿಕ ಅವರ ಕುಟುಂಬ ಮೂಲಗಳಿಗೆ ಮಾಹಿತಿ ನೀಡಲಾಗಿದೆ.ಮನೆಯವರು ಸ್ಥಳಕ್ಕೆ ಬಂದ ಬಳಿಕ ಪೋಲೀಸರ ಜೊತೆ ಸ್ಥಳೀಯ ಈಜುಗಾರರ ತಂಡದೊಂದಿಗೆ ನದಿ ಹಾಗೂ ಸ್ಥಳೀಯ ಭಾಗದಲ್ಲಿ ಹುಡುಕಲು ಪ್ರಾರಂಭಿಸಿದ್ದಾರೆ‌. ಬಂಟ್ವಾಳ ಅಗ್ನಿಶಾಮಕ ದಳದವರು ಕೂಡ ಆಗಮಿಸಿದ್ದರು.ಸಂಜೆ 4.30ರ ವೇಳೆಗೆ ಬೈಕ್ ನಿಲ್ಲಿಸಿದ ಸಮೀಪದಲ್ಲಿ ಇರುವ ಪುರಸಭೆ ಇಲಾಖೆಗೆ ಸೇರಿದ ಕುಡಿಯುವ ನೀರಿನ ಟ್ಯಾಂಕ್ ನೊಳಗೆ ಮೃತದೇಹ ತೇಲಾಡುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇವರು ಅಂಗಿ ತೆಗೆದು ಮೊಬೈಲ್ ಸಹಿತ ಇತರ ಸೊತ್ತುಗಳನ್ನು ಅಲ್ಲಿ ಬಿಟ್ಟು ಟ್ಯಾಂಕ್ ಒಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ‌ಪೋಲೀಸರಿಗೆ ಶಂಕಿಸಿದ್ದಾರೆ.

ಆತ್ಮಹತ್ಯೆ ‌ಮಾಡಿಕೊಳ್ಳಲು ಸ್ಪಷ್ಟ ಕಾರಣ ತಿಳಿದುಬಂದಿಲ್ಲ.

ಇವರು ಸುಮಾರು ವರ್ಷಗಳಿಂದ ಸುಳ್ಯ ಪುತ್ತೂರು ಭಾಗದಲ್ಲಿ ಡ್ರೈವಿಂಗ್ ಸ್ಕೂಲ್ ನಡೆಸುತ್ತಿದ್ದರು. ಬಿಜೆಪಿ ಸಕ್ರೀಯ ಕಾರ್ಯಕರ್ತನಾಗಿದ್ದು. ಒಂದು ಬಾರಿ ಪುರಸಭೆ ಸದಸ್ಯನಾಗಿ ಮತ್ತು ಇದೀಗ ಎರಡನೇ ಬಾರಿ ನಗರ ಸಭಾ ಸದಸ್ಯನಾಗಿ ಆಯ್ಕೆಯಾಗಿದ್ದರು.ಕಾಂಗ್ರೆಸ್ ಸದಸ್ಯ ಶಕ್ತಿ ಸಿನ್ಹ ಮೃತಪಟ್ಟ ಕಾರಣಕ್ಕಾಗಿ ಅವರ ತೆರವಾದ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಇವರು ಸ್ಪರ್ಧಿಸಿ ಗೆದ್ದಿದ್ದರು. ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದು ಜನಪ್ರಿಯ ಪಡೆದಿದ್ದರು.

ಪತ್ನಿ, ಒಂದು ಗಂಡು ಮತ್ತು ಒಬ್ಬಳ‍ು ಹೆಣ್ಣು ಮಗಳನ್ನು ಅಗಲಿದ್ದಾರೆ. ಮಗಳು ವಿದ್ಯಾರ್ಥಿನಿಯಾಗಿದ್ದು ಮಗ ಟೌನ್ ಬ್ಯಾಂಕ್ ಉದ್ಯೋಗಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!