ಬ್ಯಾಡಗಿ: ಗಜೇಂದ್ರಗಡ ಸೊರಬ ರಾಜ್ಯ ಹೆದ್ದಾರಿ- 36 (ಮುಖ್ಯರಸ್ತೆ) ಅಗಲೀಕರಣ ವಿಳಂಬ ಖಂಡಿಸಿ ಅಗಲೀಕರಣ ಹೋರಾಟ ಸಮಿತಿ, ವರ್ತಕರ ಸಂಘ ಹಾಗೂ ವಿವಿಧ ಸಂಘಟನೆಗಳು ಹಮ್ಮಿಕೊಂಡಿದ್ದ ಬ್ಯಾಡಗಿ ಬಂದ್ ಕರೆಗೆ ಅಭೂತಪೂರ್ವ ಬೆಂಬಲ ದೊರೆತಿದ್ದು, ಗುರುವಾರ ಬ್ಯಾಡಗಿ ಅಂತಾರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆ ಸೇರಿದಂತೆ ಪಟ್ಟಣ ಸಂಪೂರ್ಣವಾಗಿ ಸ್ತಬ್ಧವಾಗಿತ್ತು.ಬೆಳಗ್ಗೆ 10 ಗಂಟೆಗೆ ಪಟ್ಟಣದ ಸಿದ್ದೇಶ್ವರ ಕಲ್ಯಾಣಮಂಟಪಕ್ಕೆ ಜಮಾಯಿಸಿದ ಸಾವಿರಾರು ಸಂಖ್ಯೆಯ ಜನರು ಬೃಹತ್ ಪ್ರತಿಭಟನಾ ಮೆರವಣಿಗೆ ಆರಂಭಿಸಿದರು. ಅಗಲೀಕರಣಕ್ಕೆ ಸಮಸ್ಯೆಯಾಗಿರುವ ಮುಖ್ಯರಸ್ತೆಯಲ್ಲೇ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಪ್ರತಿಭಟನಾಕಾರರು ಸರ್ಕಾರ ಸೇರಿದಂತೆ ಅಗಲೀಕರಣಕ್ಕೆ ಅಡ್ಡಿಯಾಗಿರುವ ಕೆಲ ವರ್ತಕರ ವಿರುದ್ಧ ಘೋಷಣೆಗಳನ್ನು ಹಾಕಿದರು.ಸರ್ಕಾರ ಅಗಲೀಕರಣ ಪರ: ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ಪಟ್ಟಣದ ಜನತೆಯ ಹಿತ ಕಾಯುವ ನಿಟ್ಟಿನಲ್ಲಿ ಎರಡೂ ಅವಧಿಯಲ್ಲಿ ಸಾಕಷ್ಟು ಶ್ರಮಿಸಿದ್ದೇನೆ. ಕಳೆದ ಕೆಲ ತಿಂಗಳ ಹಿಂದೆ 30 ಅಡಿ ಅಗಲೀಕರಣಕ್ಕೆ ಒಪ್ಪಿ ರಾಜೀ ಸಂಧಾನ ಮಾಡಿಕೊಂಡಾಗ ಮುಖ್ಯರಸ್ತೆಯಲ್ಲಿನ ನಿವಾಸಿಗಳು ನನ್ನ ಮುಂದೆ ಇಟ್ಟ ಬೇಡಿಕೆ ಈಡೇರಿಸಲು ಬದ್ಧನಾಗಿದ್ದೆ. ಆದರೆ ಒಪ್ಪಿಗೆ ಸೂಚಿಸಿ ಬಳಿಕ ಮೋಸ ಮಾಡಿದ ಅವರು ಮತ್ತೆ ಕೋರ್ಟ್ ಮೆಟ್ಟಿಲೇರಿದ್ದಾರೆ. ಅಲ್ಲಿಯೂ ಅವರಿಗೆ ಮುಖಭಂಗವಾಗಿದ್ದು, ಜನರ ಸಹನೆಯ ಕಟ್ಟೆ ಒಡೆದಿದೆ ಎಂದರು.ಮಾಜಿ ಶಾಸಕ ಸುರೇಶಗೌಡ ಪಾಟೀಲ ಮಾತನಾಡಿ, ರಸ್ತೆ ಅಗಲೀಕರಣ ಉದ್ದೇಶದಿಂದ ಕಳೆದ ಬಾರಿ ಬ್ಯಾಡಗಿ ಬಂದ್ ಹೋರಾಟದ ವೇಳೆ ಪಟ್ಟಣದಲ್ಲಿನ ಗಜಾನನ ಬ್ಯಾಂಕ್ ಕಟ್ಟಡವನ್ನು ತೆರವುಗೊಳಿಸುವುದಾಗಿ ಮಾತು ಕೊಟ್ಟಿದ್ದೆ. ಅದರ ಪ್ರಕಾರ ರಸ್ತೆ ಮಧ್ಯೆಭಾಗದಿಂದ 33 ಅಡಿ ಬಿಟ್ಟು ತೆರವುಗೊಳಿಸಿದ್ದೇನೆ. ನನಗೆ ಪಟ್ಟಣದ ಅಭಿವೃದ್ಧಿ ಮುಖ್ಯ. ಜನರ ಪಾಲಿಗೆ ಕಂಟಕಪ್ರಾಯವಾಗಿರುವ ಮುಖ್ಯರಸ್ತೆಯಲ್ಲಿನ ಅಭಿವೃದ್ಧಿ ವಿರೋಧಿ ಮನಸ್ಥಿತಿಯ ಜನರನ್ನು ಯಾವತ್ತೂ ಕ್ಷಮಿಸುವುದಿಲ್ಲ ಎಂದರು.