ವ್ಯಕ್ತಿಯ ಜೀವ ಬಲಿಪಡೆದ ರಸ್ತೆ ಅಭಿವೃದ್ಧಿ ಕಾಮಗಾರಿ!

KannadaprabhaNewsNetwork |  
Published : Jun 05, 2025, 11:50 PM ISTUpdated : Jun 05, 2025, 11:51 PM IST
21ಎಚ್‌ಯುಬಿ22ಕಿಲ್ಲಾ ಓಣಿಯಲ್ಲಿ ಬಟ್ಟೆಯಲ್ಲಿ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸುತ್ತಿರುವುದು. | Kannada Prabha

ಸಾರಾಂಶ

ಇದು ಹುಬ್ಬಳ್ಳಿಯ ಕೇಂದ್ರಭಾಗ ಸಿಬಿಟಿಯ ಕಿಲ್ಲಾ 1ನೇ ಕ್ರಾಸ್‌ನ ದುಸ್ಥಿತಿ. ಈ ಪ್ರದೇಶದ ಯಾರಿಗಾದರೂ ಅನಾರೋಗ್ಯವುಂಟಾದರೆ ಅವರನ್ನು ಆಸ್ಪತ್ರೆಗೆ ಸಾಗಿಸಲು ವಾಹನಗಳು ಒಳಪ್ರವೇಶಿಸುವುದಿಲ್ಲ. ಮೂರರಿಂದ ನಾಲ್ಕು ಜನ ಸೇರಿ ಅವರನ್ನು ಮುಖ್ಯ ರಸ್ತೆಯಲ್ಲಿ ನಿಂತಿರುವ ವಾಹನದ ವರೆಗೆ ಸಾಗಿಸಬೇಕಾದ ಅನಿವಾರ್ಯತೆ ಇದೆ.

ಮಹಮ್ಮದ ರಫೀಕ್‌ ಬೀ‍ಳಗಿ

ಹುಬ್ಬಳ್ಳಿ: ಒಬ್ಬ ವ್ಯಕ್ತಿಯನ್ನು ಬಟ್ಟೆಯಲ್ಲಿ ಎತ್ತಿಕೊಂಡು ಹೀಗೆ (ಚಿತ್ರದಲ್ಲಿ) ಆಸ್ಪತ್ರೆಗೆ ಸಾಗಿಸುತ್ತಿರುವುದು ನೋಡಿ ಯಾವುದೊ ಕಾಡಿನ ದೃಶ್ಯ ಅಂತ ಅಂದುಕೊಂಡಿರಾ? ಇದು ಕಾಡಿನ ದೃಶ್ಯವಲ್ಲ. ಸ್ಮಾರ್ಟ್‌ಸಿಟಿ, ರಾಜ್ಯದ ಎರಡನೆಯ ದೊಡ್ಡ ನಗರ, ವಾಣಿಜ್ಯನಗರಿ ಎಂದೆಲ್ಲ ಹೆಸರು ಪಡೆದಿರುವ ಹುಬ್ಬಳ್ಳಿಯಲ್ಲಿನ ದುಸ್ಥಿತಿ..!

ಕಾಡಿನಲ್ಲಿರುವ ಗ್ರಾಮಗಳ ಜನರಿಗೆ ಅನಾರೋಗ್ಯವುಂಟಾದಾಗ ನಾಲ್ಕು ಜನ ಬಟ್ಟೆ ಅಥವಾ ಕಟ್ಟಿಗೆಗಳ ಆಸರೆಯಿಂದ ಆರೋಗ್ಯ ಕೇಂದ್ರಗಳಿಗೆ ಸಾಗಿಸುವುದನ್ನು ನಾವು ಕೇಳಿದ್ದೇವೆ, ನೋಡಿದ್ದೇವೆ. ಆದರೆ, ಅಂತಹ ಸ್ಥಿತಿ ನಮ್ಮ ಸ್ಮಾರ್ಟ್‌ ಸಿಟಿ ಹುಬ್ಬಳ್ಳಿಯಲ್ಲೂ ಇದೆ ಎಂದರೆ ನಂಬುತ್ತೀರಾ?.

ಇದನ್ನು ನಂಬಲೇಬೇಕು. ಇದು ಹುಬ್ಬಳ್ಳಿಯ ಕೇಂದ್ರಭಾಗ ಸಿಬಿಟಿಯ ಕಿಲ್ಲಾ 1ನೇ ಕ್ರಾಸ್‌ನ ದುಸ್ಥಿತಿ. ಈ ಪ್ರದೇಶದ ಯಾರಿಗಾದರೂ ಅನಾರೋಗ್ಯವುಂಟಾದರೆ ಅವರನ್ನು ಆಸ್ಪತ್ರೆಗೆ ಸಾಗಿಸಲು ವಾಹನಗಳು ಒಳಪ್ರವೇಶಿಸುವುದಿಲ್ಲ. ಮೂರರಿಂದ ನಾಲ್ಕು ಜನ ಸೇರಿ ಅವರನ್ನು ಮುಖ್ಯ ರಸ್ತೆಯಲ್ಲಿ ನಿಂತಿರುವ ವಾಹನದ ವರೆಗೆ ಸಾಗಿಸಬೇಕಾದ ಅನಿವಾರ್ಯತೆ ಇದೆ.

ಸುಮಾರು 15 ದಿನಗಳ ಹಿಂದೆ ವ್ಯಕ್ತಿಯೊಬ್ಬರಿಗೆ ಹೃದಯದ ತೊಂದರೆ ಎದುರಾಗಿತ್ತು. ಈ ವೇಳೆ ಅವರನ್ನು ತಾವು ವಾಸಿಸುವ ಅಪಾರ್ಟ್‌ಮೆಂಟ್‌ನಿಂದ ಕಷ್ಟಪಟ್ಟು ಆ್ಯಂಬುಲೆನ್ಸ್‌ ನಿಂತಿದ್ದ ಮುಖ್ಯ ರಸ್ತೆ ವರೆಗೆ ಸಾಗಿಸುವಷ್ಟರಲ್ಲಿ ಅವರ ಪ್ರಾಣ ಪಕ್ಷಿ ಹಾರಿಹೋಗಿತ್ತು. ಇತ್ತೀಚಿಗಷ್ಟೇ ಮಹಿಳೆಯೊಬ್ಬರಿಗೆ ಅನಾರೋಗ್ಯವುಂಟಾದಾಗ ಅವರನ್ನು ನಾಲ್ಕು ಜನ ಬಟ್ಟೆಯಲ್ಲಿ ಎತ್ತಿಕೊಂಡು ಹೋಗಿ ಆ್ಯಂಬುಲೆನ್ಸ್‌ಗೆ ಹತ್ತಿಸಿದ್ದಾರೆ.

ಯಾಕೆ ಅವ್ಯವಸ್ಥೆ?: 2023ರಲ್ಲಿ ಇಲ್ಲಿಯ ರಸ್ತೆ ಕಾಮಗಾರಿ ಆರಂಭಿಸಲಾಗಿದೆ. ರಸ್ತೆಯ ಪಕ್ಕ ಎರಡೂ ಬದಿಯಲ್ಲಿ ಚರಂಡಿ ನಿರ್ಮಿಸಲಾಗಿದೆ. ಆದರೆ, ರಸ್ತೆಯ ಮಧ್ಯದಲ್ಲಿ ಮೊಣಕಾಲು ಉದ್ದದ ಮ್ಯಾನ್ ಹೋಲ್‌ಗಳಿವೆ. ಒಳಚರಂಡಿ ನಿರ್ಮಿಸಿ ಹಾಗೇ ಬಿಟ್ಟಿರುವುದು ಸಮಸ್ಯೆ ಆಗಿ ಪರಿಣಮಿಸಿದೆ. ಇಲ್ಲಿ ಪಾದಚಾರಿಗಳೇ ಕಷ್ಟಪಟ್ಟು ಸಂಚರಿಸಬೇಕು. ಇನ್ನು ವಾಹನಗಳ ಸಂಚಾರ ದೂರದ ಮಾತು. ರಸ್ತೆ ಇವತ್ತು ಆಗುತ್ತದೆ, ನಾಳೆ ಆಗುತ್ತದೆ ಎಂದು ಜನ ಕಾಯುತ್ತಿದ್ದಾರೆ. ಆದರೆ, ಪಾಲಿಕೆ ಸದಸ್ಯರು ಇತ್ತ ತಲೆ ಹಾಕಿಲ್ಲ. ಮಳೆಯಾದರೆ ಕೆಸರಿನಿಂದ ತುಂಬಿಕೊಳ್ಳುವ ರಸ್ತೆಯಲ್ಲಿ ಎಲ್ಲಿ ತಗ್ಗುಗಳಿವೆ ಎಂಬುದು ತಿಳಿಯದೇ ಅದೆಷ್ಟೋ ಮಂದಿ ಬಿದ್ದು ಗಾಯಮಾಡಿಕೊಂಡಿದ್ದಾರೆ. ಅಲ್ಲದೆ, ಮಕ್ಕಳು ಈ ರಸ್ತೆಯಿಂದಾಗಿ ಮನೆಯಿಂದ ಹೊರಬರದಂತಾಗಿದೆ. ವಯೋವೃದ್ಧರ ಪಾಡಂತೂ ಹೇಳತೀರದು.

ರಸ್ತೆ ಅಗೆದು ಹಾಗೇ ಬಿಡಲಾಗಿದೆ. ಬಹುತೇಕ 2 ವರ್ಷವಾದರೂ ಕಾಮಗಾರಿ ಮುಗಿದಿಲ್ಲ. ಇದರಿಂದ ಇಲ್ಲಿನ ಜನ ಪರಿತಪಿಸುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಬಾಕಿ ಇರುವ ರಸ್ತೆ ಕಾಮಗಾರಿಯನ್ನು ಮತ್ತಷ್ಟು ವಿಳಂಬ ಮಾಡದೆ ಪೂರ್ಣಗೊಳಿಸಬೇಕು ಎಂದ ಸ್ಥಳೀಯರು ಒತ್ತಾಯಿಸಿದ್ದಾರೆ.

ಮನೆ ಯಜಮಾನನ ಜೀವಪಡೆದ ರಸ್ತೆ: ಎಎಂ ಫೋರ್ಟ್ ಅಪಾರ್ಟ್‌ಮೆಂಟ್‌ನ ನಿವಾಸಿ ರಾಮ್‌ ಚವ್ಹಾಣ್‌ ಅವರು ಹೃದಯ ಕಾಯಿಲೆಯಿಂದ ಬಳಲುತ್ತಿದ್ದರು. ಆರೋಗ್ಯ ಏಕಾಏಕಿ ಬಿಗಡಾಯಿಸಿದ್ದರಿಂದ ಪತ್ನಿ ಮತ್ತು ಇಬ್ಬರು ಹೆಣ್ಣುಮಕ್ಕಳು ಅವರನ್ನು ನೆಲಮಹಡಿಗೆ ತಲುಪಿಸಿದ್ದಾರೆ. ಆದರೆ, ರಸ್ತೆಯ ದುಸ್ಥಿತಿಯಿಂದಾಗಿ ಯಾವುದೇ ಆಂಬ್ಯುಲೆನ್ಸ್ ಅಥವಾ ವಾಹನ ಸಮಯಕ್ಕೆ ಸರಿಯಾಗಿ ಆ ಪ್ರದೇಶವನ್ನು ತಲುಪಲು ಸಾಧ್ಯವಾಗಲಿಲ್ಲ. ಹೀಗಾಗಿ, ಅವರು ಪ್ರಾಣ ಕಳೆದುಕೊಂಡರು. ರಸ್ತೆ ಸರಿ ಇದ್ದಿದ್ದರೆ ಆ್ಯಂಬುಲೆನ್ಸ್‌ ಅಥವಾ ಬೇರೆ ವಾಹನಗಳಲ್ಲಿ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದರೆ ಬದಕುತ್ತಿದ್ದರು ಎನ್ನುತ್ತಾರೆ ಸ್ಥಳೀಯರು. ಸ್ಥಳಕ್ಕೆ ವಾಹನಗ‍ಳು ಬಾರದೆ ಅವರು ಪ್ರಾಣ ಕಳೆದುಕೊಂಡರು. ಕುಟುಂಬದಲ್ಲಿ ದುಡಿಯುವ ವ್ಯಕ್ತಿಯೇ ಮೃತಪಟ್ಟಿದ್ದರಿಂದ ಆ ಕುಟುಂಬವೀಗ ಅನಾಥವಾಗಿದೆ.

ಈ ಕಿಲ್ಲಾ ಬರುವುದು ವಾರ್ಡ್‌ ನಂ. 64ರಲ್ಲಿ. ವಾರ್ಡ್‌ ಸದಸ್ಯೆ ಪೂಜಾ ಶೇಜವಾಡ್ಕರ್‌. ಇವರು ವಾಸಿಸುವುದು ಕೇಶ್ವಾಪುರದಲ್ಲಿ. ಅದೆಷ್ಟೋ ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ವಾರ್ಡ್‌ನ ಜನತೆ ಬಗ್ಗೆ ಕಿಂಚಿತ್ತೂ ಕಾಳಜಿ ತೋರಿಸುತ್ತಿಲ್ಲ. ಹುಬ್ಬಳ್ಳಿಯಂತಹ ನಗರದಲ್ಲಿ ರಸ್ತೆಗಳು ಕೆಟ್ಟ ಸ್ಥಿತಿಯಲ್ಲಿರುವುದು ಆಘಾತಕಾರಿ ಎಂದು ಕಾಂಗ್ರೆಸ್‌ ಮುಖಂಡ ವಾದಿರಾಜ ಕುಲಕರ್ಣಿ ಹೇಳಿದರು.

ಒಳಚರಂಡಿ ಮತ್ತು ಕುಡಿಯುವ ನೀರಿನ ಪೈಪ್‌ಲೈನ್‌ ಅ‍ಳವಡಿಕೆಗೆ ದೀರ್ಘ ಸಮಯ ತೆಗೆದುಕೊಂಡಿದ್ದರಿಂದ ರಸ್ತೆ ನಿರ್ಮಾಣ ತಡವಾಗಿದೆ. ಮೇ 30ರಂದು ಪೈಪ್‌ಲೈನ್‌ ಕಾಮಗಾರಿ ಮುಗಿದಿದೆ. ಈಗ ಅಗೆದಿರುವ ಮಣ್ಣು ಗಟ್ಟಿಯಾಗಿ ಕುಳಿತುಕೊಳ್ಳುವವರೆಗೆ ರಸ್ತೆ ನಿರ್ಮಾಣ ಅಸಾಧ್ಯ. ವಾರದ ನಂತರ ಕಾಮಗಾರಿ ಆರಂಭಿಸಿ ಶೀಘ್ರದಲ್ಲೇ ಪೂರ್ಣಗೊ‍‍ಳಿಸಲಾಗುವುದು ಎಂದು ಗುತ್ತಿಗೆದಾರ ಅಬ್ದುಲ್‌ ರಸೀದ್‌ ಬೋಲಾಬಾಯಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌