ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ವಾರ್ಷಿಕ ಜಾತ್ರೋತ್ಸವ ಸಂಪನ್ನ

KannadaprabhaNewsNetwork | Published : Apr 20, 2025 1:45 AM

ಸಾರಾಂಶ

ಶುಕ್ರವಾರ ಸಂಜೆ ದೇವಾಲಯದಿಂದ ಸಾವಿರಾರು ಭಕ್ತರೊಂದಿಗೆ ಕಾಲ್ನಡಿಗೆಯ ಮೂಲಕ ಅವಭೃತ ಸ್ನಾನಕ್ಕೆ ವೀರಮಂಗಲಕ್ಕೆ ತೆರಳಿದ ದೇವರ ಸವಾರಿಯು ಶನಿವಾರ ಬೆಳಗ್ಗೆ ೧೩ ಕಿ.ಮೀ. ದೂರದ ವೀರಮಂಗಲ ಕುಮಾರಧಾರ ನದಿಗೆ ತಲುಪಿತು. ಅಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಅವಭೃತ ಸ್ನಾನ ಮುಗಿಸಿ ಶನಿವಾರ ಬೆಳಗ್ಗೆ ೧೦.೧೫ಕ್ಕೆ ದೇವಾಲಯಕ್ಕೆ ಮರಳಿತು.

ಕನ್ನಡಪ್ರಭ ವಾರ್ತೆ ಪುತ್ತೂರು

ಇತಿಹಾಸ ಪ್ರಸಿದ್ಧ ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ವಾರ್ಷಿಕ ಜಾತ್ರೋತ್ಸವ ಶನಿವಾರ ಬೆಳಗ್ಗೆ ೧೦.೪೦ಕ್ಕೆ ಧ್ವಜಾವರೋಹಣದೊಂದಿಗೆ ಸಮಾಪನಗೊಂಡಿತು.

ಶುಕ್ರವಾರ ಸಂಜೆ ದೇವಾಲಯದಿಂದ ಸಾವಿರಾರು ಭಕ್ತರೊಂದಿಗೆ ಕಾಲ್ನಡಿಗೆಯ ಮೂಲಕ ಅವಭೃತ ಸ್ನಾನಕ್ಕೆ ವೀರಮಂಗಲಕ್ಕೆ ತೆರಳಿದ ದೇವರ ಸವಾರಿಯು ಶನಿವಾರ ಬೆಳಗ್ಗೆ ೧೩ ಕಿ.ಮೀ. ದೂರದ ವೀರಮಂಗಲ ಕುಮಾರಧಾರ ನದಿಗೆ ತಲುಪಿತು. ಅಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಅವಭೃತ ಸ್ನಾನ ಮುಗಿಸಿ ಶನಿವಾರ ಬೆಳಗ್ಗೆ ೧೦.೧೫ಕ್ಕೆ ದೇವಾಲಯಕ್ಕೆ ಮರಳಿತು.ಬೆಳಗ್ಗೆ ವೀರಮಂಗಲ ವಿಷ್ಣುಮೂರ್ತಿ ದೇವಾಲಯಕ್ಕೆ ತಲುಪಿ ಅಲ್ಲಿ ಕಟ್ಟೆಪೂಜೆ ಸ್ವೀಕರಿಸಿದ ದೇವರು ಬಳಿಕ ಕುಮಾರಧಾರಾ ನದಿಯ ತಟದಲ್ಲಿರುವ ಕಟ್ಟೆಯಲ್ಲಿ ಪುಷ್ಪ ಕನ್ನಡಿ ತೆರವು ಮಾಡಿ ನದಿಗೆ ಅವಭೃತ ಸ್ನಾನಕ್ಕೆ ಇಳಿದರು. ಅದಕ್ಕೂ ಮುನ್ನ ದಾರಿಯುದ್ದಕ್ಕೂ ಕಟ್ಟೆಪೂಜೆಗಳು, ಸುಮಾರು ೧೦,೦೦೦ಕ್ಕೂ ಹೆಚ್ಚು ಹಣ್ಣುಕಾಯಿ ಸೇವೆಯನ್ನು ಸ್ವೀಕರಿಸಿದರು. ದೇವರ ಸವಾರಿ ಮರಳಿ ಬರುವ ಸಂದರ್ಭದಲ್ಲಿ ವಿವಿಧ ವಾಹನಗಳಲ್ಲಿ ವಾದ್ಯಘೋಷ, ಶ್ರೀ ಮಹಾಲಿಂಗೇಶ್ವರ ದೇವರ ಭಕ್ತಿ ಗೀತೆ, ಭಕ್ತರಿಂದ ಶಿವನಾಮ ಸ್ಮರಣೆ ನಡೆಯಿತು.

ಶುಕ್ರವಾರ ಸಂಜೆ ಶ್ರೀ ದೇವರೊಂದಿಗೆ ಅವಭೃತ ಸ್ನಾನಕ್ಕೆ ಬರಿಗಾಲಿನಲ್ಲಿ ಭಕ್ತಿ, ಶ್ರದ್ಧೆಯೊಂದಿಗೆ ತೆರಳಿದ ಸಾವಿರಾರು ಭಕ್ತರು ವೀರಮಂಗಲ ಕುಮಾರಧಾರ ನದಿಯಲ್ಲಿ ದೇವರೊಂದಿಗೆ ಸ್ನಾನ ಮುಗಿಸಿ ಮರಳಿ ದೇವರೊಂದಿಗೆ ದೇವಾಲಯಕ್ಕೆ ಆಗಮಿಸಿದರು. ದೇವರ ಮೂಲ ಉತ್ಸವ ಮೂರ್ತಿಯೊಂದಿಗೆ ಸವಾರಿಯು ದೇವಾಲಯದ ಒಳಾಂಗಣ ಪ್ರವೇಶಿಸಿತು. ಒಂದು ಸುತ್ತು ಉತ್ಸವ ನಡೆದು ಬಳಿಕ ಧ್ವಜಾವರೋಹಣ ನಡೆಯಿತು.ಜಾತ್ರೋತ್ಸವದ ಆರಂಭದಿಂದ ಹಿಡಿದು ಧ್ವಜಾವರೋಹಣದ ವರೆಗೆ ಸುಮಾರು ೨೦೦ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿರಂತರ ಬಂದೋಬಸ್ತ್ ನಡೆಸಿದರು. ಅವಭೃತ ಸವಾರಿಯ ಉದ್ದಕ್ಕೂ ಹಾಗೂ ದೇವರ ವೀರಮಂಗಲ ಅವಭೃತ ಸ್ನಾನದ ಬಳಿ ಭಕ್ತರು ಅಪಾಯಕಾರಿ ಸ್ಥಳದಲ್ಲಿ ನೀರಿಗೆ ಇಳಿಯದಂತೆ ಪೊಲೀಸರು ನಿಗಾ ವಹಿಸಿದರು.ದೈವಗಳ ನೇಮ:ಎ.೧೦ ರಂದು ಧ್ವಜಾರೋಹಣದೊಂದಿಗೆ ಜಾತ್ರೆ ಆರಂಭಗೊಂಡು ಏ.೧೯ರಂದು ಧ್ವಜಾವರೋಹಣದೊಂದಿಗೆ ಜಾತ್ರೋತ್ಸವ ಸಮಾಪನ ನಡೆಯಲಿದೆ. ಬಳಿಕ ಎರಡು ದಿನ ದೈವಗಳ ನೇಮ, ಚೂರ್ಣೋತ್ಸವ, ವಸಂತಕಟ್ಟೆ ಪೂಜೆ ನಡೆಯುತ್ತದೆ. ಶನಿವಾರ ರಾತ್ರಿ ಹುಲಿಭೂತ, ರಕ್ತೇಶ್ವರಿ ನೇಮ ನಡೆದು ಮಂತ್ರಾಕ್ಷತೆ, ಅಂಙಣತ್ತಾಯ, ಪಂಜುರ್ಲಿ ವಗೈರೆ ದೈವಗಳ ನೇಮ ಜರುಗಿತು.

Share this article