ಪುತ್ತೂರು: ಉಪವಿಭಾಗ ಮಟ್ಟದ ಜಾಗೃತಿ, ಉಸ್ತುವಾರಿ ಸಮಿತಿ ಸಭೆ

KannadaprabhaNewsNetwork |  
Published : May 14, 2025, 02:23 AM IST
ಫೋಟೋ: ೧೩ಪಿಟಿಆರ್-ಸಭೆಪುತ್ತೂರು ಉಪವಿಭಾಘ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಭೆ  ನಡೆಯಿತು.  | Kannada Prabha

ಸಾರಾಂಶ

ಪುತ್ತೂರಿನ ತಾಲೂಕು ಆಡಳಿತ ಸೌಧದ ತಹಸೀಲ್ದಾರ್ ಸಭಾಂಗಣದಲ್ಲಿ ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳ (ದೌರ್ಜನ್ಯ ನಿಯಂತ್ರಣ) ಕಾಯ್ದೆ ೧೯೮೯ ಹಾಗೂ ನಿಯಮಗಳು ೧೯೯೫ ತಿದ್ದುಪಡಿ ನಿಯಮಗಳು ೨೦೧೩ ನಿಯಮ ೧(ಎ) ಪ್ರಕಾರ ರಚಿಸಲಾಗಿರುವ ಉಪ ವಿಭಾಗ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯು ಮಂಗಳವಾರ ಸಹಾಯಕ ಆಯುಕ್ತ ಸ್ಟೆಲ್ಲಾ ವರ್ಗೀಸ್ ಅಧ್ಯಕ್ಷತೆಯಲ್ಲಿ ನಡೆಯಿತು.

ಇದು ಕಾಟಾಚಾರದ ಸಭೆಯಲ್ಲ, ಅನುಷ್ಠಾನ ಅಧಿಕಾರಿಗಳು ತಪ್ಪಿಸಿಕೊಳ್ಳುವಂತಿಲ್ಲ: ಎಸಿ ಎಚ್ಚರಿಕೆ

ಕನ್ನಡಪ್ರಭ ವಾರ್ತೆ ಪುತ್ತೂರು

ಉಪವಿಭಾಗದ ಮಟ್ಟದಲ್ಲಿ ನಡೆಯುವ ಈ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯು ಕಾಟಾಚಾರದ ಸಭೆಯಲ್ಲ. ೩ ತಿಂಗಳಿಗೊಮ್ಮ ದೌರ್ಜನ್ಯ ನಿಯಂತ್ರಣ ಕಾಯ್ದೆಯನ್ವಯ ನಡೆಯುವ ಈ ಸಭೆಗೆ ವಿವಿಧ ತಾಲೂಕುಗಳ ತಹಸೀಲ್ದಾರ್, ಇಒ, ಸಮಾಜ ಕಲ್ಯಾಣ ಇಲಾಖೆ, ಪೊಲೀಸ್ ಅಧಿಕಾರಿಗಳು ಭಾಗವಹಿಸಬೇಕಾಗುತ್ತದೆ. ಅನುಷ್ಠಾನ ಅಧಿಕಾರಿಗಳು ಈ ಸಭೆಯಿಂದ ತಪ್ಪಿಸಿಕೊಳ್ಳುವಂತಿಲ್ಲ. ಪೂರ್ವ ಮಾಹಿತಿ ನೀಡದೆ, ಪರ್ಯಾಯವಾಗಿ ಯಾರನ್ನೂ ಸಭೆಗೆ ಕಳುಹಿಸದೆ ಗೈರು ಹಾಜರಾದವರಿಗೆ ನೋಟಿಸ್ ಜಾರಿಗೊಳಿಸುವುದಾಗಿ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಸ್ಟೆಲ್ಲಾ ವರ್ಗೀಸ್ ಎಚ್ಚರಿಸಿದರು.ಪುತ್ತೂರಿನ ತಾಲೂಕು ಆಡಳಿತ ಸೌಧದ ತಹಸೀಲ್ದಾರ್ ಸಭಾಂಗಣದಲ್ಲಿ ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳ (ದೌರ್ಜನ್ಯ ನಿಯಂತ್ರಣ) ಕಾಯ್ದೆ ೧೯೮೯ ಹಾಗೂ ನಿಯಮಗಳು ೧೯೯೫ ತಿದ್ದುಪಡಿ ನಿಯಮಗಳು ೨೦೧೩ ನಿಯಮ ೧(ಎ) ಪ್ರಕಾರ ರಚಿಸಲಾಗಿರುವ ಉಪ ವಿಭಾಗ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯು ಮಂಗಳವಾರ ಸಹಾಯಕ ಆಯುಕ್ತ ಸ್ಟೆಲ್ಲಾ ವರ್ಗೀಸ್ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಪುತ್ತೂರು ಉಪವಿಭಾಗ ವ್ಯಾಪ್ತಿಯ ಪುತ್ತೂರು, ಸುಳ್ಯ, ಬೆಳ್ತಂಗಡಿ ಮತ್ತು ಕಡಬ ತಾಲೂಕುಗಳ ಅಧಿಕಾರಿಗಳು ಭಾಗವಹಿಸಬೇಕಾಗಿತ್ತು. ಆದರೆ ಕೆಲವೊಂದು ಇಲಾಖಾ ಅಧಿಕಾರಿಗಳು ಮಾಹಿತಿ ನೀಡದೆ, ಪರ್ಯಾಯವಾಗಿ ಯಾರನ್ನೂ ಸಭೆಗೆ ಕಳುಹಿಸದೆ ಗೈರು ಹಾಜರಾಗಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಅಂತಹ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡುವುದಾಗಿ ಎಚ್ಚರಿಕೆ ನೀಡಿದರು.ಎಸ್‌ಸಿ ಮತ್ತು ಎಸ್‌ಟಿಗಳಿಗೆ ಸಂಬಂಧಿಸಿ ನೀವೇಶನ ರಹಿತ ಕುಟುಂಬಗಳ ಬಗ್ಗೆ ಚರ್ಚೆ ನಡೆಯಿತು. ಸುಳ್ಯ ತಾಲೂಕಿನಲ್ಲಿ ಎಸ್‌ಸಿ ಮತ್ತು ಎಸ್‌ಟಿಗೆ ಸಂಬಂಧಿಸಿದಂತೆ ಸುಮಾರು ೧೪೧ ಮಂದಿ ನಿವೇಶನ ರಹಿತ ಕುಟುಂಬಗಳಿರುವ ಬಗ್ಗೆ ತಿಳಿಸಲಾಯಿತು. ಸುಳ್ಯ ತಾಲೂಕಿನಲ್ಲಿ ಕೆಲವೊಂದು ಗ್ರಾಮ ಪಂಚಾಯಿತಿಗಳಲ್ಲಿ ಮಾತ್ರ ಎಸ್‌ಸಿ ಮತ್ತು ಎಸ್‌ಟಿಗಳ ನಿವೇಶನಕ್ಕೆ ಜಾಗ ಗುರುತಿಸಲಾಗಿದೆ. ಇಲ್ಲಿ ಅರಣ್ಯ ಪ್ರದೇಶವೇ ಅಧಿಕ ಇರುವ ಕಾರಣ ಉಳಿದ ಕೆಲವು ಕಡೆಗಳಲ್ಲಿ ಜಾಗ ಗುರುತಿಸಲು ಸಾಧ್ಯವಾಗಿಲ್ಲ ಎಂದು ಸುಳ್ಯ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಸಭೆಯಲ್ಲಿ ಮಾಹಿತಿ ನೀಡಿದರು. ಸಹಾಯಕ ಆಯುಕ್ತರು ಮಾತನಾಡಿ, ನಿವೇಶನ ರಹಿತರ ಕುರಿತು ಗ್ರಾ.ಪಂ. ಗಳ ಮೂಲಕ ಪಟ್ಟಿ ಮಾಡಬೇಕು. ನಿಯಮದಂತೆ ಖಾಲಿ ಜಾಗ ಗುರುತಿಸಬೇಕು. ಲಭ್ಯವಿರುವ ಜಾಗದಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಿ ನೀಡಬೇಕು. ಸುಳ್ಯ, ಪುತ್ತೂರು, ಕಡಬ, ಬೆಳ್ತಂಗಡಿ ತಾಲೂಕುಗಳಿಗೆ ಸಂಬಂಧಿಸಿದಂತೆ ಇ.ಒ.ಗಳ ಮೂಲಕ ಮುಂದಿನ ಸಭೆಗೆ ಮೊದಲು ನಿವೇಶನ ರಹಿತರ ಪಟ್ಟಿ ಸಿದ್ಧಪಡಿಸಿ ನೀಡುವಂತೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರ ವ್ಯಾಪ್ತಿಗಳಲ್ಲಿ ಶಾಸಕ ಅಧ್ಯಕ್ಷತೆಯ ಆಶ್ರಯ ಸಮಿತಿಯಲ್ಲಿ ಆಯ್ಕೆ ಮಾಡಬಹುದು. ಗ್ರಾಮಾಂತರದಲ್ಲಿ ಗ್ರಾ.ಪಂ.ಗಳ ಮೂಲಕ ಫಲಾನುಭವಿಗಳ ಆಯ್ಕೆ ಮಾಡಬೇಕು ಎಂದು ತಿಳಿಸಿದರು.ಪೌರ ಕಾರ್ಮಿಕರಿಗೆ ಇಎಸ್‌ಐ, ಪಿ.ಎಫ್. ಪಾವತಿಗೆ ಸಂಬಂಧಿಸಿ ಚರ್ಚೆ ನಡೆದು, ಎಲ್ಲ ತಾಲೂಕುಗಳಲ್ಲಿ ಪೌರ ಕಾರ್ಮಿಕರು ಕಾಯಂ ಹಾಗೂ ನೇರ ಪಾವತಿ ನೆಲೆಯಲ್ಲಿ ದುಡಿಯುತ್ತಿದ್ದು, ಅವರಿಗೆ ಈ ಸೌಲಭ್ಯಗಳು ಲಭಿಸುತ್ತಿವೆ ಎಂದು ಮಾಹಿತಿ ನೀಡಲಾಯಿತು. ಮುಂದಿನ ಸಭೆಗೆ ಪೌರ ಕಾರ್ಮಿಕರಿಗೆ ಇಎಸ್‌ಐ, ಪಿ.ಎಫ್. ಪಾವತಿಯಾಗುತ್ತಿರುವ ಕುರಿತ ೨ ತಿಂಗಳ ಲಿಸ್ಟ್ ನೀಡುವಂತೆ ಸಹಾಯಕ ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದರು.ಸಫಾಯಿ ಕರ್ಮಚಾರಿಗಳಿಗೆ ಸುರಕ್ಷಾ ಕಿಟ್‌ಗಳನ್ನು ನೀಡುತ್ತಿರುವ ಕುರಿತು ದಾಖಲೆಯ ಮಾಹಿತಿ ನೀಡಬೇಕು, ಆರೋಗ್ಯ ತಪಾಸಣೆಗಳನ್ನು ನಡೆಸುತ್ತಿರುವ, ಅವರಿಗೆ ನೀಡಲಾಗುವ ಆಹಾರದ ಮಾಹಿತಿ ನೀಡಬೇಕು, ವಿಶ್ರಾಂತಿ ಕೊಠಡಿ, ಪೌರ ಕಾರ್ಮಿಕ ಗೃಹಭಾಗ್ಯ ಯೋಜನೆ ಪ್ರಗತಿಯ ಕುರಿತು ಮುಂದಿನ ಸಭೆಗೆ ಮಾಹಿತಿ ನಿಡುವಂತೆ ಅಧಿಕಾರಿಗಳಿಗೆ ಎಸಿ ಸೂಚನೆ ನೀಡಿದರು.ಸುಳ್ಯ ನಗರದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಇಲ್ಲದಿರುವ ಕುರಿತು ಪ್ರಸ್ತಾಪಗೊಂಡು ೩ ಎಕ್ರೆ ಜಾಗವನ್ನು ದುಗ್ಗಲಡ್ಕದಲ್ಲಿ ಗುರುತಿಸಿರುವ ಮತ್ತು ಅದಕ್ಕೆ ಅರಣ್ಯ ಇಲಾಖೆ ಹಾಗೂ ಸಥಳೀಯರ ಆಕ್ಷೇಪವಿರುವ ಕುರಿತು ಅಧಿಕಾರಿಗಳು ತಿಳಿಸಿದರು. ಇದಕ್ಕೆ ಉತ್ತರಿಸಿದ ಎಸಿ ಸ್ಟಲ್ಲಾ ವರ್ಗೀಸ್, ಆಕ್ಷೇಪಗಳು ಬಂದೇ ಬರುತ್ತವೆ. ೨೦೦ ಮೀ.ಗಿಂತ ದೂರದಲ್ಲಿ ವಸತಿ ಇದ್ದರೆ, ಕೆರೆ, ಮನೆಗಳು ಇಲ್ಲದಿದ್ದರೆ ಘಟಕ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಬೇರೆ ಪೂರಕ ಜಾಗವಿದ್ದರೆ ಗುರುತಿಸಿ. ಆರಂಭದಲ್ಲಿ ಪರಿಸರ ಇಲಾಖೆಯಿಂದ ವರದಿ ಮಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.ಪುತ್ತೂರು, ಸುಳ್ಯ, ಕಡಬ, ಬೆಳ್ತಂಗಡಿ ತಾಲೂಕುಗಳ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಪುತ್ತೂರು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ವಿನಯ ಕುಮಾರಿ ಸ್ವಾಗತಿಸಿ, ವಂದಿಸಿದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌