ಪುತ್ತೂರು: ತಾಳಮದ್ದಳೆ ಸಪ್ತಾಹ ಸಮಾರೋಪ, ಕುರಿಯ ಪ್ರಶಸ್ತಿ ಪ್ರದಾನ

KannadaprabhaNewsNetwork |  
Published : Jul 07, 2025, 11:48 PM ISTUpdated : Jul 08, 2025, 04:43 PM IST
ಫೋಟೋ: ೭ಪಿಟಿಆರ್-ತಾಳಮದ್ದಳೆತಾಳಮದ್ದಳೆ ಸಪ್ತಾಹದ ಸಮಾರೋಪ ಸಮಾರಂಭ ನಡೆಯಿತು. ಫೋಟೋ: ೭ಪಿಟಿಆರ್-ಶಿವಾನಂದ ಹೆಗಡೆ ಕೆರೆಮನೆ  ಮತ್ತು ಕೊಕ್ಕಡ ಈಶ್ವರ ಭಟ್ಟರಿಗೆ 'ಕುರಿಯ ಪ್ರಶಸ್ತಿ' ನೀಡಿ ಗೌರವಿಸಲಾಯಿತು | Kannada Prabha

ಸಾರಾಂಶ

ಪುತ್ತೂರಿನ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ಮತ್ತು ಉಜಿರೆಯ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಪುತ್ತೂರಿನ ಶ್ರೀ ಸುಕೃತೀಂದ್ರ ಕಲಾ ಮಂದಿರದಲ್ಲಿ ‘ಕುರಿಯ ವಿಠಲ ಶಾಸ್ತ್ರಿ ಪ್ರಶಸ್ತಿ ಹಾಗೂ ತಾಳಮದ್ದಳೆ ಸಪ್ತಾಹ’ ಸಮಾರೋಪ ಭಾನುವಾರ ನೆರವೇರಿತು.

  ಪುತ್ತೂರು :  ಕಲಾವಿದ ಸಮಾಜಮುಖಿಯಾಗಿ, ಕಲಾತ್ಮಕವಾಗಿ ಹೇಗೆ ಬದುಕಬೇಕೆನ್ನುವುದನ್ನು ಹಾಸ್ಯಗಾರ ದಿ.ಪೆರುವಡಿ ನಾರಾಯಣ ಭಟ್ಟರು ಬದುಕಿ ತೋರಿಸಿ ಕೊಟ್ಟಿದ್ದಾರೆ. ಪ್ರಶಸ್ತಿಗೆ ಆಯ್ಕೆಯಾದ ಕಲಾವಿದದ ಬದುಕು ಕೂಡಾ ಆದರ್ಶವಾಗಿರಬೇಕು ಎಂದು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದ್ದಾರೆ. 

ಪುತ್ತೂರಿನ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ಮತ್ತು ಉಜಿರೆಯ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಪುತ್ತೂರಿನ ಶ್ರೀ ಸುಕೃತೀಂದ್ರ ಕಲಾ ಮಂದಿರದಲ್ಲಿ ನಡೆದ ‘ಕುರಿಯ ವಿಠಲ ಶಾಸ್ತ್ರಿ ಪ್ರಶಸ್ತಿ ಹಾಗೂ ತಾಳಮದ್ದಳೆ ಸಪ್ತಾಹ’ ಸಮಾರೋಪದಲ್ಲಿ ಅವರು ಮಾತನಾಡಿದರು.ಇಡಗುಂಜಿ ಮೇಳವು ಪರಂಪರೆ ಮುರಿಯದ ಸಂಘಟನೆ. ದಿ.ಶಂಭು ಹೆಗಡೆ ಕನಸನ್ನು ಅವರ ಚಿರಂಜೀವಿಗಳು ನನಸು ಮಾಡುತ್ತಿದ್ದಾರೆ. 

ಆ ಸಂಘಟನೆಗೆ ನೀಡಿದ ಪ್ರಶಸ್ತಿಗೇ ಗೌರವ ಬಂದಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ.ಟಿ.ಶ್ಯಾಮ ಭಟ್ ಮಾತನಾಡಿ, ನಾಟ್ಯಾಚಾರ್ಯ ಕುರಿಯ ವಿಠಲ ಶಾಸ್ತ್ರಿಗಳು ಯಕ್ಷಗಾನದ ಕ್ರಾಂತಿ ಪುರುಷ. ಅವರು ರಂಗದಲ್ಲಿ ತಂದ ಅನೇಕ ಪ್ರಯೋಗಗಳು ಈಗಲೂ ಪ್ರಸ್ತುತವಾಗಿವೆ. ಅವರು ತನ್ನ ಮನೆಯನ್ನೇ ಗುರುಕುಲವನ್ನಾಗಿ ಮಾಡಿ ಶಿಷ್ಯರನ್ನು ಬೆಳೆಸಿದ ಮಹಾ ಗುರುಗಳು ಎಂದರು.ಕೆರೆಮನೆ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯ ಶಿವಾನಂದ ಹೆಗಡೆ ಕೆರೆಮನೆ ಹಾಗೂ ಹಿರಿಯ ಸ್ತ್ರೀ ವೇಷಧಾರಿ ಕೊಕ್ಕಡ ಈಶ್ವರ ಭಟ್ಟರಿಗೆ ‘ಕುರಿಯ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. 

ಕಲಾ ಪೋಷಕ ಉದ್ಯಮಿ ಆರ್.ಕೆ.ಭಟ್ಟರಿಗೆ ‘ಕುರಿಯ ಸ್ಮೃತಿ’ ಗೌರವ ಪ್ರದಾನಿಸಲಾಯಿತು. ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ಸಂಚಾಲಕ ಉಜಿರೆ ಅಶೋಕ ಭಟ್‌ ಅಭಿನಂದನಾ ನುಡಿಗಳನ್ನಾಡಿದರು. ಹಾಸ್ಯಗಾರ್ ದಿ. ಪೆರುವಡಿ ನಾರಾಯಣ ಭಟ್ಟರ ಕಲಾಯಾನವನ್ನು ಹಿರಿಯ ಅರ್ಥದಾರಿ ವೆಂಕಟರಾಮ ಭಟ್ಟ ಸುಳ್ಯ ಸ್ಮರಿಸಿದರು. ಪುತ್ತೂರಿನ ಉದ್ಯಮಿ ಗೋಪಾಲಕೃಷ್ಣ ಭಟ್ ಮಾತನಾಡಿದರು. ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಡಾ.ಕೆ.ಅಶೋಕ ನಾಮದೇವ ಪ್ರಭು ಉಪಸ್ಥಿತರಿದ್ದರು.ಭಾಗವತ ರಮೇಶ ಭಟ್ ಪುತ್ತೂರು ಸ್ವಾಗತಿಸಿದರು. ಸ್ವಸ್ತಿಕ್ ಪದ್ಯಾಣ ವಂದಿಸಿದರು. ಕಲಾವಿದ ನಾ. ಕಾರಂತ ಪೆರಾಜೆ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಪ್ತಾಹದ ಕೊನೆಯ ತಾಳಮದ್ದಳೆ ‘ಗುರುದಕ್ಷಿಣೆ’ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''