ಪುತ್ತೂರು: ತಾಲೂಕು ಧರ್ಮ ಶಿಕ್ಷಣ ಸಮಿತಿ ಸಭೆ

KannadaprabhaNewsNetwork | Published : May 4, 2025 1:33 AM

ಸಾರಾಂಶ

ತೆಂಕಿಲದಲ್ಲಿರುವ ಸ್ವಾಮಿ ಕಲಾ ಮಂದಿರದಲ್ಲಿ ಧರ್ಮ ಶಿಕ್ಷಣ ಪುತ್ತೂರು ತಾಲೂಕು ಸಮಿತಿಯ ಸಭೆ ನಡೆಯಿತು.

ಧರ್ಮ ಶಿಕ್ಷಣ ಉದ್ಘಾಟನೆಗೆ ಸಹಸ್ರಾರು ಮಂದಿ ಭಾಗಿಯಾಗಬೇಕು: ಬೋರ್ಕರ್

ಕನ್ನಡಪ್ರಭ ವಾರ್ತೆ ಪುತ್ತೂರು

ಶೃಂಗೇರಿ ಜಗದ್ಗುರುಗಳಾದ ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರ ನಿರ್ದೇಶನ ಹಾಗೂ ಮಾರ್ಗದರ್ಶನದಲ್ಲಿ ದೇಶದಲ್ಲಿ ನಡೆಸಲು ಉದ್ದೇಶಿಸಲಾಗಿರುವ ಹಿಂದೂ ಧರ್ಮ ಶಿಕ್ಷಣ ವ್ಯವಸ್ಥೆ ಮೊದಲು ಪುತ್ತೂರಿನಲ್ಲಿ ಜಾರಿಗೊಳ್ಳುತ್ತಿರುವುದು ಹೆಮ್ಮೆಯ ವಿಚಾರ. ಇಂತಹ ಮಹೋನ್ನತ ಹಾಗೂ ಐತಿಹಾಸಿಕ ಘಟನೆಗೆ ಪುತ್ತೂರಿನ ನಾಗರಿಕ ಸಮಾಜ ಸಾಕ್ಷಿಯಾಗುತ್ತಿದೆ ಎಂದು ತಾಲೂಕು ಧರ್ಮ ಶಿಕ್ಷಣ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಬೋರ್ಕರ್ ಹೇಳಿದರು.

ಅವರು ನಗರದ ತೆಂಕಿಲದಲ್ಲಿರುವ ಸ್ವಾಮಿ ಕಲಾ ಮಂದಿರದಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಧರ್ಮ ಶಿಕ್ಷಣ ತಾಲೂಕು ಸಮಿತಿಯ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಮೇ ೫ರಂದು ಶೃಂಗೇರಿ ಜಗದ್ಗುರುಗಳು ಧರ್ಮ ಶಿಕ್ಷಣ ತರಗತಿಗಳನ್ನು ಶೃಂಗೇರಿಯಲ್ಲಿ ಉದ್ಘಾಟಿಸುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ಪುತ್ತೂರು ಹಾಗೂ ಕಡಬ ತಾಲೂಕಿನ ಪ್ರತಿಯೊಂದು ಗ್ರಾಮಗಳಿಂದಲೂ ಹಿಂದೂ ಬಂಧುಗಳು ಭಾಗಿಯಾಗಬೇಕು. ಈ ಹಿನ್ನೆಲೆಯಲ್ಲಿ ತಾಲೂಕು ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಪ್ರತಿಯೊಂದು ಗ್ರಾಮದಲ್ಲೂ ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.

ತಾಲೂಕು ಧರ್ಮ ಶಿಕ್ಷಣ ಸಮಿತಿಯ ಅಧ್ಯಕ್ಷ ದಂಬೆಕಾನ ಸದಾಶಿವ ರೈ ಮಾತನಾಡಿ, ಧರ್ಮ ಶಿಕ್ಷಣ ಸಮಿತಿಯು ಹಿಂದೂ ಸಮಾಜದ ಎಲ್ಲ ವರ್ಗದವರನ್ನು ಒಳಗೊಂಡಿದ್ದು, ಯಾವುದೇ ರಾಜಕೀಯ ಈ ಸಮಿತಿಯೊಳಗೆ ನುಸುಳುವುದಿಲ್ಲ. ಎಲ್ಲ ಪಕ್ಷದ, ಎಲ್ಲ ಚಿಂತನೆಯ ಹಿಂದೂ ಬಾಂಧವರನ್ನು ಒಗ್ಗೂಡಿಸಿಕೊಂಡು ಈ ಸಮಿತಿ ಮುನ್ನಡೆಯಲಿದೆ. ನಮ್ಮ ಮುಂದಿನ ತಲೆಮಾರಿಗೆ ಧರ್ಮ ಶಿಕ್ಷಣ ದೊರಕುವಂತಾಗಬೇಕಾದದ್ದು ಅತ್ಯಂತ ಮುಖ್ಯ ವಿಚಾರ ಎಂದರು.

ತಾಲೂಕು ಧರ್ಮ ಶಿಕ್ಷಣ ಸಮಿತಿ ಸಂಚಾಲಕ ಸುಬ್ರಮಣ್ಯ ನಟ್ಟೋಜ ಮಾತನಾಡಿ, ಇದೊಂದು ಪುಣ್ಯದ ಕಾರ್ಯ. ಎಲ್ಲರೂ ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗಿರಿಸಿ ಕೇವಲ ಧರ್ಮದ ಉಳಿವಿಗಾಗಿ ತಮ್ಮ ಸಮಯವನ್ನು ನೀಡುತ್ತಿದ್ದಾರೆ. ಪುತ್ತೂರಿನ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ರಾಜಕೀಯ, ಜಾತಿಗಳನ್ನು ಮೀರಿದ ವ್ಯವಸ್ಥೆಯೊಂದು ಶೃಂಗೇರಿ ಜಗದ್ಗುರುಗಳ ಆಶೀರ್ವಾದದಿಂದಾಗಿ ಮೂಡಿಬಂದಿದೆ. ಮೇ ೫ರ ಕಾರ್ಯಕ್ರಮಕ್ಕೆ ಪುತ್ತೂರಿನಿಂದ ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿ ಗುರುಗಳ ಆಶೀರ್ವಾದ ಪಡೆಯಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ತಾಲೂಕು ಧರ್ಮ ಶಿಕ್ಷಣ ಸಮಿತಿಯ ಪದಾಧಿಕಾರಿಗಳು, ಗ್ರಾಮ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು, ಕಾರ್ಯಕರ್ತರು ಹಾಜರಿದ್ದರು.

Share this article