ಪುತ್ತೂರು: ಪರಮಾನ್ನ, ಅನ್ನದಾನ ಸೇವೆ ಮಾಡಿಸಲು ವಿಶೇಷ ಅವಕಾಶ

KannadaprabhaNewsNetwork | Published : Jan 3, 2025 12:34 AM

ಸಾರಾಂಶ

ಒಂದು ದಿನದ ಪರಮಾನ್ನ ಸೇವೆಗೆ ೧೦ ಸಾವಿರ ರು. ಮತ್ತು ಒಂದು ದಿನದ ಮಹಾ ಅನ್ನದಾನ ಸೇವೆಗೆ ೨೫ ಸಾವಿರ ರು. ಸೇವಾ ರಶೀದಿ ಮಾಡಲಾಗಿದೆ. ಭಕ್ತರು ದೇವಳದ ಸೇವಾ ಕೌಂಟರ್ ಅಥವಾ ಆಡಳಿತ ಕಚೇರಿ ಮೂಲಕ ಸೇವಾ ರಶೀದಿ ಪಡೆಯಬಹುದು ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಪುತ್ತೂರು

ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಿತ್ಯ ಪರಮಾನ್ನ ಅನ್ನದಾನ ಸೇವೆ ಮತ್ತು ಮಹಾ ಅನ್ನದಾನ ಸೇವಾ ಯೋಜನೆಯ ಮೂಲಕ ಭಕ್ತರಿಗೆ ಪರಮಾನ್ನ ಮತ್ತು ಅನ್ನದಾನ ಸೇವೆ ಮಾಡಿಸುವ ವಿಶೇಷ ಅವಕಾಶ ಕಲ್ಪಿಸಲಾಗಿದೆ. ಇದರ ಜೊತೆಗೆ ಜ.೧ರಿಂದ ನಿತ್ಯ ಪಾಯಸ ಪ್ರಸಾದವೂ ಆರಂಭಿಸಿರುವುದಾಗಿ ದೇವಳದ ವ್ಯವಸ್ಥಾಪನಾ ಸಮಿತಿಯ ನೂತನ ಸದಸ್ಯರ ಪ್ರಥಮ ಸಭೆಯಲ್ಲಿ ನಿರ್ಣಯಿಸಲಾಗಿದೆ.

ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರ ಪ್ರಥಮ ಸಭೆ ನಡೆಯಿತು. ಸಭೆಯಲ್ಲಿ ದೇವಳದ ಇತರ ಅಭಿವೃದ್ದಿ ವಿಚಾರದಲ್ಲಿ ಚರ್ಚಿಸಲಾಯಿತು. ದೇವಳಕ್ಕೆ ಬಂದಿರುವ ವಿವಿಧ ದೂರು ಅರ್ಜಿಗಳನ್ನು ಪರಿಶೀಲಿಸಲಾಯಿತು.ಸಭೆಯ ಬಳಿಕ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಅವರು ಮಾದ್ಯಮದೊಂದಿಗೆ ಮಾತನಾಡಿ ಭಕ್ತರ ಆಶಯದಂತೆ ದೇವಳದಲ್ಲಿ ಪರಮಾನ್ನ ಅನ್ನದಾನ ಮತ್ತು ಮಹಾ ಅನ್ನದಾನ ಸೇವೆಯನ್ನು ಆರಂಭಿಸುವ ಕುರಿತು ನಿರ್ಣಯಿಸಲಾಗಿದೆ. ಶ್ರೀ ದೇವರಿಗೆ ಅರ್ಪಿಸಿದ ನೈವೇದ್ಯವನ್ನು ಒಂದು ದಿನದ ಪರಮಾನ್ನ ಅನ್ನದಾನ ಸೇವೆಯಾಗಿ ಮತ್ತು ಒಂದು ದಿನ ಮಹಾ ಅನ್ನದಾನ ಸೇವೆಯನ್ನು ಆರಂಭಿಸಲಾಗುವುದು. ಒಂದು ದಿನದ ಪರಮಾನ್ನ ಸೇವೆಗೆ ೧೦ ಸಾವಿರ ರು. ಮತ್ತು ಒಂದು ದಿನದ ಮಹಾ ಅನ್ನದಾನ ಸೇವೆಗೆ ೨೫ ಸಾವಿರ ರು. ಸೇವಾ ರಶೀದಿ ಮಾಡಲಾಗಿದೆ. ಭಕ್ತರು ದೇವಳದ ಸೇವಾ ಕೌಂಟರ್ ಅಥವಾ ಆಡಳಿತ ಕಚೇರಿ ಮೂಲಕ ಸೇವಾ ರಶೀದಿ ಪಡೆಯಬಹುದು ಎಂದು ತಿಳಿಸಿದರು.

ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಅವರು ದೇವಳದ ಪ್ರಧಾನ ಅರ್ಚಕರ ಮೂಲಕ ಪ್ರಥಮ ಸೇವಾರ್ಥವಾಗಿ ಸೇವಾ ರಶೀದಿಯನ್ನು ಪಡೆದರು. ಸಭೆಯಲ್ಲಿ ಸದಸ್ಯರಾದ ಮಹಾಬಲ ರೈ ವಳತ್ತಡ್ಕ, ನಳಿನಿ ಪಿ ಶೆಟ್ಟಿ, ಸುಭಾಷ್ ರೈ ಬೆಳ್ಳಿಪ್ಪಾಡಿ, ದಿನೇಶ್ ಪಿ.ವಿ., ಈಶ್ವರ ಬೇಡೆಕರ್, ವಿನಯ ಸುವರ್ಣ, ಕೃಷ್ಣವೇಣಿ, ಪ್ರಧಾನ ಅರ್ಚಕರು ಮತ್ತು ಸದಸ್ಯರೂ ಆಗಿರುವ ವೇ.ಮೂ. ವಸಂತ ಕೆದಿಲಾಯ ಸಭೆಯಲ್ಲಿ ಉಪಸ್ಥಿತರಿದ್ದರು. ದೇವಳದ ಕಾರ್ಯನಿರ್ವಹಣಾಧಿಕಾರಿ ಕೆ.ವಿ ಶ್ರೀನಿವಾಸ್ ಸಭಾ ನಡಾವಳಿ ನಡೆಸಿದರು. ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ ಉಪಸ್ಥಿತರಿದ್ದರು.

Share this article