ಹೊಸಪೇಟೆ-ಮಂಗಳೂರು ರೈಲು ಆರಂಭಿಸಲು ಒತ್ತಾಯ

KannadaprabhaNewsNetwork |  
Published : Jan 03, 2025, 12:34 AM IST
2ಎಚ್‌ಪಿಟಿ2- ಈ ಈ ಭಾಗದ ರೈಲ್ವೆ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ರೈಲ್ವೆ ನಿಲ್ದಾಣದಲ್ಲಿ ನೈರುತ್ಯ ರೈಲ್ವೆ ವಲಯ ಪ್ರಧಾನ ವ್ಯವಸ್ಥಾಪಕ ಅರವಿಂದ ಶ್ರೀವಾತ್ಸವ್ ಅವರಿಗೆ ಗುರುವಾರ ಮನವಿ ಪತ್ರ ಸಲ್ಲಿಸಲಾಯಿತು. | Kannada Prabha

ಸಾರಾಂಶ

ವಿಜಯನಗರ ಜಿಲ್ಲೆ ವ್ಯಾಪ್ತಿಯ ರೈಲ್ವೆ ಬೇಡಿಕೆಗಳನ್ನು ಈಡೇರಿಸಬೇಕು ಎಂದು ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ನಗರದ ರೈಲ್ವೆ ನಿಲ್ದಾಣದಲ್ಲಿ ನೈಋತ್ಯ ರೈಲ್ವೆ ವಲಯ ಪ್ರಧಾನ ವ್ಯವಸ್ಥಾಪಕ ಅರವಿಂದ ಶ್ರೀವಾತ್ಸವ್ ಅವರಿಗೆ ಗುರುವಾರ ಮನವಿ ಪತ್ರ ಸಲ್ಲಿಸಿದರು.

ಹೊಸಪೇಟೆ: ಈ ಭಾಗದ ರೈಲ್ವೆ ಬೇಡಿಕೆಗಳನ್ನು ಈಡೇರಿಸಬೇಕು ಎಂದು ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ನಗರದ ರೈಲ್ವೆ ನಿಲ್ದಾಣದಲ್ಲಿ ನೈಋತ್ಯ ರೈಲ್ವೆ ವಲಯ ಪ್ರಧಾನ ವ್ಯವಸ್ಥಾಪಕ ಅರವಿಂದ ಶ್ರೀವಾತ್ಸವ್ ಅವರಿಗೆ ಗುರುವಾರ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ನೈಋತ್ಯ ರೈಲ್ವೆ ವಲಯ ಬಳಕೆದಾರರ ಸಲಹಾ ಸಮಿತಿ ಹಿರಿಯ ಸದಸ್ಯ ಬಾಬುಲಾಲ್ ಜೈನ್ ಮಾತನಾಡಿ, ಹೊಸಪೇಟೆಯಿಂದ ಕೊಟ್ಟೂರು ಮಾರ್ಗವಾಗಿ ಬಂದರು ನಗರ ಮಂಗಳೂರಿಗೆ ನೂತನ ರೈಲು ಆರಂಭಿಸುವ ಅಗತ್ಯವಿದೆ. ಇದರಿಂದ ವಿಶ್ವ ಪಾರಂಪರಿಕ ತಾಣವಾದ ಹಂಪಿ ಹಾಗೂ ಪ್ರಮುಖ ಪ್ರವಾಸಿ ತಾಣಗಳಾದ ಹಾಸನ, ಶ್ರವಣಬೆಳಗೊಳ, ಬೇಲೂರು, ಹಳೇಬೀಡು ಮತ್ತು ಧಾರ್ಮಿಕ ಕೇಂದ್ರಗಳಾದ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳಕ್ಕೆ ನೇರ ಸಂಪರ್ಕ ದೊರೆಯುತ್ತದೆ. ಅಲ್ಲದೇ ಬೃಹತ್ ಶೈಕ್ಷಣಿಕ ಮತ್ತು ಆಸ್ಪತ್ರೆ ಕೇಂದ್ರಗಳಾದ ಉಡುಪಿ, ಮಣಿಪಾಲಗಳ ನಡುವೆ ಸಂಪರ್ಕ ದೊರೆಯುತ್ತದೆ. ಬಂದರು ನಗರ ಮಂಗಳೂರಿಗೆ ಸಂಪರ್ಕ ದೊರೆಯುವುದರಿಂದ ಕರಾವಳಿ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಪ್ರವಾಸೋದ್ಯಮ ಮತ್ತು ಆರ್ಥಿಕ ಚಟುವಟಿಕೆ ಬೆಳವಣಿಗೆಗೆ ಅನುಕೂಲವಾಗುತ್ತದೆ ಎಂದರು.

ಈಗಾಗಲೇ ಅಮೃತ್ ಭಾರತ್ ಯೋಜನೆ ಅಡಿ ಹೊಸಪೇಟೆ ರೈಲ್ವೆ ನಿಲ್ದಾಣ ಅಭಿವೃದ್ಧಿಯಾಗುತ್ತಿದ್ದು, ಹೆಚ್ಚುವರಿಯಾಗಿ ಎರಡು ನೂತನ ಪ್ಲಾಟ್‌ಫಾರಂಗಳನ್ನು ನಿರ್ಮಿಸಬೇಕು. ಹೊಸಪೇಟೆಯಲ್ಲಿ ಪ್ಯಾಸೆಂಜರ್ ಕೋಚ್‌ಗಳ ನಿರ್ವಹಣೆ ಮತ್ತು ಇಲ್ಲಿಂದ ನೂತನ ಪ್ಯಾಸೆಂಜರ್ ರೈಲುಗಳ ಆರಂಭಕ್ಕೆ ಅನುಕೂಲವಾಗುವಂತೆ ಪಿಟ್‌ಲೈನ್ ವ್ಯವಸ್ಥೆ ಹಾಗೂ ಪ್ರಯಾಣಿಕರಿಗೆ ಅಗತ್ಯವಾದ ಮೂಲಸೌಕರ್ಯಗಳನ್ನು ಕಲ್ಪಿಸಬೇಕು. ನಗರದ ಹೊರ ವಲಯದಲ್ಲಿರುವ ಚಿತ್ತವಾಡ್ಗಿ ಮತ್ತು ಮಾಗಾಣಿ ಪ್ರದೇಶಗಳಿಂದ ನಗರಕ್ಕೆ ಬರುವ ರೈತರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ವಿಳಂಬವಿಲ್ಲದೇ ಸುರಕ್ಷಿತವಾಗಿ ನಗರಕ್ಕೆ ಬಂದು ಹೋಗಲು ಅನುಕೂಲವಾಗುವಂತೆ ರೈಲ್ವೆ ಎಲ್.ಸಿ. ಗೇಟ್ ನಂ. 4ಕ್ಕೆ ಮೇಲ್ಸೇತುವೆ ನಿರ್ಮಿಸಬೇಕು. ವಿಜಯನಗರ ಜಿಲ್ಲೆಯ ಉತ್ತರ ತಾಲೂಕುಗಳಿಂದ ಬೆಂಗಳೂರಿಗೆ ಹೋಗಲು ಅನುಕೂಲವಾಗುವಂತೆ ಹೊಸಪೇಟೆ-ತುಮಕೂರು ನಡುವೆ ಡೆಮೋ ರೈಲು ಸಂಚಾರ ಆರಂಭಿಸಬೇಕು ಎಂದು ಆಗ್ರಹಿಸಿದರು.

ಮನವಿಗೆ ಪ್ರತಿಕ್ರಿಯಿಸಿದ ಪ್ರಧಾನ ವ್ಯವಸ್ಥಾಪಕರು, ಪ್ರಸ್ತುತ ಹುಬ್ಬಳ್ಳಿ ಮಾರ್ಗವಾಗಿ ಸಂಚರಿಸುತ್ತಿರುವ ವಿಜಯಪುರ-ಮಂಗಳೂರು ರೈಲು ವಾರದಲ್ಲಿ ಮೂರು ದಿನ ಹೊಸಪೇಟೆ-ಕೊಟ್ಟೂರು ಮಾರ್ಗವಾಗಿ ಸಂಚರಿಸುವ ಬಗ್ಗೆ ಪರಿಶೀಲಿಸಲಾಗುವುದು. ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಕುಂಭಮೇಳದ ಮುಕ್ತಾಯದ ಆನಂತರ ರದ್ದಾಗಿರುವ ಬೆಳಗಾವಿ-ಹೈದರಾಬಾದ್-ಮಂಗಳೂರು ರೈಲು ಹಾಗೂ ಹುಬ್ಬಳ್ಳಿ-ತಿರುಪತಿ ರೈಲುಗಳನ್ನು ಪುನರ್ ಆರಂಭಿಸಲಾಗುವುದು ಎಂದರು.

ಇಲಾಖೆಯ ಹಿರಿಯ ಅಧಿಕಾರಿಗಳಾದ ಸಂತೋಷ್ ಕುಮಾರ್ ಹೆಗಡೆ, ಸುನೀಲ್, ಪ್ರವೀಣ್ ಕುಮಾರ್, ಹುಡಾ ಮಾಜಿ ಅಧ್ಯಕ್ಷ ಅಶೋಕ್ ಜೀರೆ, ಮುಖಂಡರಾದ ವೈ. ಯಮುನೇಶ್, ಮಹೇಶ್ ಕುಡುತಿನಿ, ಉಮಾ ಮಹೇಶ್ವರ್, ಟಿ.ಆರ್. ತಿಪ್ಪೇಸ್ವಾಮಿ, ಡಿ. ರಾಮಕೃಷ್ಣ, ನಜೀರ್ ಸಾಬ್, ಕೆ. ಗೋಪಿನಾಥ್, ಜಿ. ದೇವರೆಡ್ಡಿ, ಜೆ. ವರುಣ್ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರಲ್ಲಿ ಬಸವಣ್ಣ ಜೀವ ವೈವಿಧ್ಯ ಉದ್ಯಾನವನ
ಕೆಎಂಎಫ್‌ನಲ್ಲಿ ಉದ್ಯೋಗದ ನೆಪದಲ್ಲಿ50 ಲಕ್ಷ ವಂಚನೆ:ಇಬ್ಬರ ವಿರುದ್ಧ ಕೇಸ್‌