ಮಣ್ಣು ಗಣಿಗಾರಿಕೆಗೆ ಬಲಿ ಆಗಲಿದೆಯೇ ವಿದ್ಯುತ್ ಟವರ್?

KannadaprabhaNewsNetwork | Published : Jan 3, 2025 12:34 AM

ಸಾರಾಂಶ

ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಮಣ್ಣು ಮತ್ತು ಗ್ರಾವೆಲ್ ಗಣಿಗಾರಿಕೆಯಿಂದಾಗಿ ಹಲವು ಜಿಲ್ಲೆಗಳಿಗೆ ವಿದ್ಯುತ್ ಸರಬರಾಜು ಮಾಡುವ ಟವರ್‌ಗಳ ಭದ್ರತೆಗೆ ಗಂಭೀರ ಅಪಾಯ ಎದುರಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿಕೃಷ್ಣಪ್ಪ ಸ್ಥಪಿತ) ತಾಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಹರಿಹರದಲ್ಲಿ ಆರೋಪಿಸಿದ್ದಾರೆ.

- ವಿದ್ಯುತ್‌ ಸಮಸ್ಯೆ, ಆರ್ಥಿಕ ನಷ್ಟ ತಪ್ಪಿಸಲು ದಸಂಸ ಮುಖಂಡ ಮಹಾಂತೇಶ್‌ ಒತ್ತಾಯ- - - ಕನ್ನಡಪ್ರಭ ವಾರ್ತೆ ಹರಿಹರ ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಮಣ್ಣು ಮತ್ತು ಗ್ರಾವೆಲ್ ಗಣಿಗಾರಿಕೆಯಿಂದಾಗಿ ಹಲವು ಜಿಲ್ಲೆಗಳಿಗೆ ವಿದ್ಯುತ್ ಸರಬರಾಜು ಮಾಡುವ ಟವರ್‌ಗಳ ಭದ್ರತೆಗೆ ಗಂಭೀರ ಅಪಾಯ ಎದುರಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿಕೃಷ್ಣಪ್ಪ ಸ್ಥಪಿತ) ತಾಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಆರೋಪಿಸಿದ್ದಾರೆ.

ತಾಲೂಕಿನ ನದಿ ದಡ ಹಾಗೂ ವಿವಿಧ ಗ್ರಾಮಗಳಲ್ಲಿನ ಜಮೀನುಗಳಲ್ಲಿನ ಮಣ್ಣನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ. ಹಣದ ಆಸೆಗೆ ವಿದ್ಯುತ್ ಟವರ್‌ಗಳ ಸುತ್ತಲೂ ಕೆಲವು ಅಡಿಗಳಷ್ಟು ಮಾತ್ರವೇ ಜಾಗಬಿಟ್ಟು ಮಣ್ಣು ಗಣಿಗಾರಿಕೆ ನಡೆಸಲಾಗಿದೆ. ಇದು ಟವರ್‌ಗಳ ಭದ್ರತೆಗೆ ಕಂಟಕ ತಂದೊಡ್ಡಿದೆ ಎಂದಿದ್ದಾರೆ.

ಹರಿಹರ ಸಮೀಪದ ಗುತ್ತೂರಿನ 400 ಕೆ.ವಿ. ವಿದ್ಯುತ್ ಸ್ವೀಕರಣ ಕೇಂದ್ರಕ್ಕೆ ವಿದ್ಯುತ್ ಬರುವ ಹಾಗೂ ಕೇಂದ್ರದಿಂದ ವಿದ್ಯುತ್ ಹೋಗಲು ಈ ಟವರ್‌ಗಳೇ ಆಧಾರವಾಗಿವೆ. ಕೈಗಾದ ನ್ಯೂಕ್ಲಿಯರ್ ಹಾಗೂ ಬಳ್ಳಾರಿ ಜಿಂದಾಲ್‍ನ ಉತ್ಪಾದನಾ ಕೇಂದ್ರಗಳಿಂದ ಇಲ್ಲಿಗೆ ವಿದ್ಯುತ್ ಸರಬರಾಜು ಆಗುತ್ತಿದೆ. ಕ್ರಮೇಣ ಮಣ್ಣು ಶಿಥಿಲಗೊಂಡು ಈ ಟವರ್‌ಗಳು ನೆಲಕ್ಕೆ ಉರುಳಿದರೆ ಅದರ ಲೈನ್‍ಗಳಲ್ಲಿ ಹರಿಯುವ 4000 ವೋಲ್ಟ್ ವಿದ್ಯುತ್ ಭೂ ಸ್ಪರ್ಶವಾಗಿ ಅಪಾರ ಪ್ರಾಣ ಹಾನಿಗೆ ಕಾರಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಜೊತೆಗೆ ಮಧ್ಯ ಕರ್ನಾಟಕದ ದಾವಣಗೆರೆ, ಹಾವೇರಿ, ಚಿತ್ರದುರ್ಗ ಸೇರಿದಂತೆ ಸುತ್ತಲಿನ ಜಿಲ್ಲೆಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ಹಲವು ದಿನಗಳ ಕಾಲ ವ್ಯತ್ಯಯವಾಗಬಹುದು. ವಿದ್ಯುತ್‌ ಸಮಸ್ಯೆ ಮೂರ್ನಾಲ್ಕು ಜಿಲ್ಲೆಗಳ ವ್ಯಾಪಾರ, ವಹಿವಾಟಿನ ಮೇಲೆ ತೀವ್ರ ದುಷ್ಪರಿಣಾಮ ಬೀರಬಹುದು ಎಂದಿದ್ದಾರೆ.

ಹಲವು ಕೋಟಿ ರು. ನಷ್ಟ:

ಈಚೆಗೆ ಜಿಲ್ಲಾಧಿಕಾರಿ ಮಾಧ್ಯಮದವರೊಂದಿಗೆ ಮಾತನಾಡಿ, ಹರಿಹರದಲ್ಲಿ ಮಣ್ಣು ಗಣಿಗಾರಿಕೆ ಮಾಡುವವರಿಂದ ₹12 ಲಕ್ಷದಷ್ಟು ರಾಜಧನ, ದಂಡ ವಸೂಲಿ ಮಾಡಲಾಗಿದೆ. ಅನುಮತಿ ಪಡೆದು ಗಣಿಗಾರಿಕೆ ನಡೆಸುತ್ತಿದ್ದಾರೆಂದು ಉತ್ತರಿಸಿದ್ದಾರೆ. ಈ ವಿದ್ಯುತ್ ಟವರ್‌ಗಳು ನೆಲಕ್ಕೆ ಉರುಳಿದರೆ ಸರ್ಕಾರದ ಖಜಾನೆಗೆ ₹12 ಕೋಟಿಯಷ್ಟು ವೆಚ್ಚ ತಗುಲುವುದದು. ಆದ್ದರಿಂದ ಈ ಅಪಾಯ ತಪ್ಪಿಸುವ ಬಗ್ಗೆ ಚಿಂತನೆ ಮಾಡುವ ಅಗತ್ಯವಿದೆ ಎಂದು ಜಿಲ್ಲಾಡಳಿತಕ್ಕೆ ಸಲಹೆ ನೀಡಿದ್ದಾರೆ. ಅಲ್ಲದೆ, ಕೆಪಿಟಿಸಿಎಲ್‍ನ ಟ್ರಾನ್ಸ್‌ಮಿಷನ್ ಲೈನ್ ಮೆಂಟೆನೆನ್ಸ್ ಶಾಖೆ ಅಧಿಕಾರಿಗಳು ಕಚೇರಿಯನ್ನು ಬಿಟ್ಟು ಸಂಚರಿಸಿ, ತಾಲೂಕಿನ ಟವರ್‌ಗಳ ಭದ್ರತೆ ಪರಿಶೀಲಿಸಬೇಕು ಎಂದಿದ್ದಾರೆ.

- - - -01ಎಚ್‍ಆರ್‍ಆರ್01.ಜೆಪಿಜಿ:

ಗುತ್ತೂರು ಬಳಿ ನದಿ ದಡದ ಜಮೀನಲ್ಲಿರುವ ವಿದ್ಯುತ್ ಟವರ್ ಸುತ್ತ ಮಣ್ಣು ಗಣಿಗಾರಿಕೆ ನಡೆದಿರುವುದು.

Share this article