ಗೇರು ಹಣ್ಣಿನ ಮೌಲ್ಯವರ್ಧಿತ ಉತ್ಪನ್ನಗಳಲ್ಲಿ ಆದ್ಯತೆ ನೀಡಿ: ಕಮಲಾ ಕೆ.

KannadaprabhaNewsNetwork |  
Published : May 23, 2026, 02:45 AM IST
ಫೋಟೋ: ೨೦ಪಿಟಿಆರ್-ಡಿಸಿಆರ್ಪುತ್ತೂರು ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ರಾಷ್ಟ್ರೀಯ ಮಟ್ಟದ ಕಾರ್ಯಾಗಾರ ನಡೆಯಿತು.  | Kannada Prabha

ಸಾರಾಂಶ

ಗೇರು ಕೃಷಿಗೆ ಉತ್ತಮ ಭವಿಷ್ಯವಿದ್ದು, ಗೇರು ರೈತರ ಜೀವನೋಪಾಯ ಸುಧಾರಣೆಗೆ ಪ್ರಾಮುಖ್ಯವಾದ ಬೆಳೆಯಾಗಿದೆ. ಗೇರು ಬೀಜದ ಜೊತೆಗೆ ಗೇರು ಹಣ್ಣಿನ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವ ನಿಟ್ಟಿನಲ್ಲಿ ಆದ್ಯತೆ ನೀಡಬೇಕು ಎಂದು ರಾಜ್ಯ ಗೇರು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಕಮಲಾ ಕೆ. ಹೇಳಿದ್ದಾರೆ.

ಪುತ್ತೂರು: ಗೇರು ಕೃಷಿಗೆ ಉತ್ತಮ ಭವಿಷ್ಯವಿದ್ದು, ಗೇರು ರೈತರ ಜೀವನೋಪಾಯ ಸುಧಾರಣೆಗೆ ಪ್ರಾಮುಖ್ಯವಾದ ಬೆಳೆಯಾಗಿದೆ. ಗೇರು ಬೀಜದ ಜೊತೆಗೆ ಗೇರು ಹಣ್ಣಿನ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವ ನಿಟ್ಟಿನಲ್ಲಿ ಆದ್ಯತೆ ನೀಡಬೇಕು ಎಂದು ರಾಜ್ಯ ಗೇರು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಕಮಲಾ ಕೆ. ಹೇಳಿದ್ದಾರೆ.ಬುಧವಾರ ಪುತ್ತೂರು ತಾಲೂಕಿನ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಗೇರು ಸಂಶೋಧನಾ ನಿರ್ದೇಶನಾಲಯ(ಡಿಸಿಆರ್)ದಲ್ಲಿ ಆಯೋಜನೆಗೊಂಡ ೩ ದಿನಗಳ ರಾಷ್ಟ್ರೀಯ ಮಟ್ಟದ ಸುಸ್ಥಿರ ಗೋಡಂಬಿ ಉತ್ಪಾದನೆ ಮತ್ತು ಮೌಲ್ಯ ಸರಪಳಿ ಅಭಿವೃದ್ಧಿಗಾಗಿ ವೈಜ್ಞಾನಿಕ ಸಮಾನತೆಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ಕರ್ನಾಟಕ ರಾಜ್ಯ ಗೇರು ಅಭಿವೃದ್ಧಿ ಮಂಡಳಿಯಲ್ಲಿ ೨೫ ಸಾವಿರ ಹೆಕ್ಟೇರ್‌ಗೂ ಅಧಿಕ ಭೂಮಿಯಲ್ಲಿ ಗೇರುಕೃಷಿ ಇದೆ. ಆದರೆ ಸುಮಾರು ೪೦ ವರ್ಷಗಳಷ್ಟು ಹಳೆಯ ಮರಗಳಾಗಿರುವ ಕಾರಣ ಇಳುವರಿ ಕಡಿಮೆಯಾಗಿದೆ. ಈ ಗೇರು ನೆಡುತೋಪುಗಳಿಗೆ ಹೊಸ ಹೈಬ್ರೀಡ್ ತಳಿಗಳನ್ನು ಹಾಕುವ ನಿಟ್ಟಿನಲ್ಲಿ ಕಾರ್ಯಯೋಜನೆ ಮಾಡಲಾಗುತ್ತಿದೆ ಎಂದರು.

ರಕ್ಷಿತಾರಣ್ಯಕ್ಕೆ ಸೇರಿದ ಭೂಮಿಯಲ್ಲಿ ಗೇರು ನೆಡುತೋಪುಗಳಿದ್ದು, ಹೆಚ್ಚಿನ ಬಂಡವಾಳ ಬಳಕೆ ಮಾಡಿ ಅಭಿವೃದ್ಧಿ ಮಾಡಲು ತಾಂತ್ರಿಕ ತೊಂದರೆಗಳಿವೆ. ಆದರೂ ಹೆಚ್ಚಿನ ಇಳುವರಿ ಪಡೆಯುವ ಉದ್ದೇಶದಿಂದ ಈಗ ಕಸಿ ಗಿಡಗಳನ್ನು ನೆಡಲಾಗುತ್ತಿದೆ. ಈಗಾಗಲೇ ಗೇರು ಸಂಶೋಧನಾ ನಿರ್ದೇಶನಾಲಯ ಗೇರುಬೀಜ ಮತ್ತು ಹಣ್ಣಿನಿಂದ ಬಿಸ್ಕತ್, ಬೆಲ್ಲ, ಜಾಮ್, ಜ್ಯೂಸ್‌ನಂತಹ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರು ಮಾಡಿದೆ. ಇದನ್ನು ಮಾರುಕಟ್ಟೆ ಮಾಡಲು ಪೇಟೆಂಟ್ ನೀಡುವ ಅವಕಾಶ ಕಲ್ಪಿಸಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಗೇರು ಸಂಶೋಧನಾ ನಿರ್ದೇಶನಾಲಯದ ನಿರ್ದೇಶಕ ಡಾ.ಜೆ.ದಿನಕರ ಅಡಿಗ ಮಾತನಾಡಿ, ಪ್ರಸ್ತುತ ಮಾರುಕಟ್ಟೆಯಲ್ಲಿ ೧ ಕೆ.ಜಿ. ಗೇರು ಬೀಜಕ್ಕೆ ರು.೧೫೦ ದರವಿದ್ದರೆ ಗೇರು ಹಣ್ಣಿನ ಮೌಲ್ಯವರ್ಧಿತ ಉತ್ಪನ್ನಕ್ಕೂ ಗಮನಹರಿಸಿದರೆ ರು.೬೫೦ ರಷ್ಟು ಮೌಲ್ಯ ಪಡೆಯಲು ಸಾಧ್ಯವಿದೆ. ಸಂಶೋಧನೆಗಳ ಮೂಲಕ ಸುಮಾರು ೧೭ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು.

ಕೇರಳ ಕೊಚ್ಚಿಯ ಡಿಸಿಸಿಡಿ ಉಪನಿರ್ದೇಶಕ ದಾದಾಸಾಹೇಬ್ ದೇಸಾಯಿ ಮಾತನಾಡಿ, ಗೇರು ಬೆಳೆ ಪ್ರಸ್ತುತ ದೇಶದಲ್ಲಿ ಕಠಿಣ ಪರಿಸ್ಥಿತಿ ಎದುರಿಸುತ್ತಿದೆ. ಬೇಡಿಕೆಗೆ ಅನುಗುಣವಾಗಿ ಉತ್ಪಾದನೆ ಸಾಧ್ಯವಾಗುತ್ತಿಲ್ಲ. ಹಾಗಾಗಿ ೧೧ ಲಕ್ಷ ಮೆಟಿಕ್ ಟನ್ ಗೇರುಬೀಜ ಆಮದು ಮಾಡಿಕೊಳ್ಳುತ್ತಿದ್ದೇವೆ. ಐವರಿಕೋಸ್ಟ, ಗಾನ ಮತ್ತು ನೈಝೀರಿಯಾ ದೇಶಗಳು ಮಧ್ಯಪ್ರಾಚ್ಯ ದೇಶಗಳಲ್ಲಿನ ಯುದ್ಧದ ಪರಿಣಾಮ ರಪ್ತು ಮಾಡುವುದನ್ನು ನಿಲ್ಲಿಸಿದ ಕಾರಣ ನಾವು ಊಹಿಸಲು ಸಾಧ್ಯವಾಗದಷ್ಟು ಬೆಲೆ ಏರಿಕೆ ಕಾಣುತ್ತಿದ್ದೇವೆ ಎಂದರು.

ಡಿಸಿಆರ್ ಪ್ರಧಾನ ವಿಜ್ಞಾನಿ ಈರದಾಸಪ್ಪ ಸ್ವಾಗತಿಸಿದರು. ಶರಣ್ಯ ಪ್ರಾರ್ಥಿಸಿದರು. ವಿಜ್ಞಾನಿ ಅಶ್ವಥಿ ಚಂದ್ರಶೇಖರ್ ವಂದಿಸಿದರು. ಎನ್‌ಪ್ರೊಪೆಷನಲ್ ಮಂಜು ಮ್ಯಾನಿವಲ್ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಟಲಿ ಪ್ರಧಾನಿಗೆ ಚಾಕೋಲೇಟ್ ಕೊಟ್ಟಿದ್ದರಲ್ಲಿ ತಪ್ಪೇನಿದೆ?
ಅನಧಿಕೃತ ಹೋಂ ಸ್ಟೇ ವಿರುದ್ಧ ಕಾನೂನು ಕ್ರಮ