ಕನ್ನಡಪ್ರಭ ವಾರ್ತೆ ವಿಜಯಪುರ
ಸಿಹಿ ಹಂಚುವುದು ಭಾರತೀಯ ಸಂಪ್ರದಾಯ. ಹೀಗಾಗಿ ನರೇಂದ್ರ ಮೋದಿ ಅವರು ಇಟಲಿ ಪ್ರಧಾನಿಗೆ ಚಾಕೋಲೇಟ್ ಕೊಟ್ಟಿದ್ದರಲ್ಲಿ ತಪ್ಪೇನಿದೆ? ಇದೊಂದು ಟೀಕೆ ವಿಷಯವೇ? ವಿಪಕ್ಷಗಳ ಟೀಕೆ ಹತಾಸೆಯಿಂದ ಕೂಡಿದೆ ಎಂದು ಸಂಸದ ರಮೇಶ ಜಿಗಜಿಣಗಿ ವಾಗ್ದಾಳಿ ನಡೆಸಿದರು.ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತೀಯರು ಸಂಭ್ರಮ- ಸಡಗರವನ್ನು, ತಮಗಾದ ಸಂತೋಷವನ್ನು ಸಿಹಿ ಹಂಚುವ ಮೂಲಕ ವ್ಯಕ್ತಪಡಿಸುತ್ತಾರೆ. ವಿದೇಶಾಂಗ ನೀತಿಯನ್ವಯ ಇಟಲಿಗೆ ಹೋದ ಪ್ರಧಾನಿಯವರು ಅಲ್ಲಿನ ಪ್ರಧಾನಿಗೆ ಚಾಕೋಲೇಟ್ ನೀಡಿದ್ದಾರೆ. ಅದೊಂದು ಜಾಗತಿಕ ಸಮಸ್ಯೆ ಎಂಬಂತೆ ಟೀಕಿಸುತ್ತಿರುವುದು ವಿಪಕ್ಷಗಳ ಬುದ್ಧಿಮಟ್ಟವನ್ನು ಪ್ರದರ್ಶನಕ್ಕಿಟ್ಟಿದೆ ಎಂದು ಚಾಟಿ ಬೀಸಿದರು.
ವಿಪಕ್ಷ ನಾಯಕನೋರ್ವ ಇನ್ನೂ ಶಾಲಾ ಬಾಲಕನಂತೆ ಟೀ ಶರ್ಟ್ ಧರಿಸಿ ಸಂಸತ್ತಿಗೆ ಆಗಮಿಸುತ್ತಾನೆ. ಇದನ್ನು ತಡೆಯಲು ಆ ಪಕ್ಷದ ನಾಯಕರಿಗೆ ಆಗುತ್ತಿಲ್ಲ. ಅದು ಸರಿಯಲ್ಲ ಎಂದು ಹೇಳುವ ಧಮ್ ಕೂಡ ಇಲ್ಲ. ಅಂಥದರಲ್ಲಿ ಮೋದಿ ಬಗ್ಗೆ ಮಾತನಾಡುವ ನೈತಿಕತೆ ಏನಿದೆ? ಮೋದಿ ಬಲಿಷ್ಠವಾಗಿ ಬೆಳೆದಿದ್ದಾರೆ. ಅವರಿಗೆ ತೊಂದರೆ ಕೊಡುವುದು ನಿಮ್ಮಿಂದ ಈ ಜನ್ಮದಲ್ಲಿ ಸಾಧ್ಯವಿಲ್ಲ. ನಿವಷ್ಟೇ ಅಲ್ಲ; ಜಗತ್ತಿನಲ್ಲಿ ಯಾರೂ ಏನೂ ಮಾಡಲಾಗಲ್ಲ ಎಂದರು.ನರೇಂದ್ರ ಮೋದಿ ಅವರು ಅಚ್ಛೇ ದೀನ್ ಬರಲಿದೆ ಎಂದು ಹೇಳಿದ್ದು ಖರೆ. ಸದ್ಯ ಜಗತ್ತಿನಲ್ಲಿ ಯುದ್ಧ ಪ್ರಾರಂಭವಾದ ಕಾರಣ ಬೆಲೆಗಳಲ್ಲಿ ಏರಿಳಿತವಾಗುತ್ತಿದೆ. ಭವಿಷ್ಯದಲ್ಲಿ ತೊಂದರೆಯಾಗಲಿಕ್ಕಿಲ್ಲವೆಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಒಂದಂತೂ ಸತ್ಯ ಮೋದಿ ಸ್ಥಾನದಲ್ಲಿ ಕಾಂಗ್ರೆಸ್ ಇದ್ದಿದ್ದರೆ ಇಷ್ಟೊತ್ತಿಗೆ ದೇಶ ದಿವಾಳಿಯಾಗಿರುತ್ತಿತ್ತು ಎಂದರು.
