ಕನ್ನಡಪ್ರಭ ವಾರ್ತೆ ಬೀಳಗಿ

ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದ ಸರ್ಕಾರವಾಗಿದ್ದು, ಎಲ್ಲ ಸಮುದಾಯ ಮತ್ತು ಧರ್ಮದವರಿಗೆ ತಾರತಮ್ಯ ಮಾಡದೇ ಪಂಚ ಗ್ಯಾರಂಟಿ ಯೋಜನೆಯನ್ನು ಜಾರಿಗೊಳಿಸಿದ ಶ್ರೇಯಸ್ಸು ಸಿಎಂ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ ಎಂದು ಶಾಸಕ ಜೆ. ಟಿ. ಪಾಟೀಲ ಹೇಳಿದರು.

ತಾಲೂಕಿನ ಬಿಸನಾಳ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ವತಿಯಿಂದ 2025-26ನೇ ಸಾಲಿನ ಮುಖ್ಯಮಂತ್ರಿಯವರ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆ ಸಿ.ಎಂ.ಐ.ಡಿ.ಪಿ) ₹20 ಲಕ್ಷ ಅನುದಾನದಲ್ಲಿ ಅಮೋಘ ಸಿದ್ಧೇಶ್ವರ ಸಮುದಾಯ ಭವನ ನಿರ್ಮಾಣ ಕಾಮಗಾರಿ ಮತ್ತು 2024-25ನೇ ಸಾಲಿನ ಮುಜರಾಯಿ ಇಲಾಖೆಯ ದೇವಸ್ಥಾನಗಳ ಅಭಿವೃದ್ಧಿ ಯೋಜನೆಗಳ ಅಡಿಯಲ್ಲಿ ಅಂದಾಜು ₹5 ಲಕ್ಷ ವೆಚ್ಚದಲ್ಲಿ ಜರುಗಲಿರುವ ಕಾಳಮ್ಮದೇವಿ ದೇವಸ್ಥಾನ ಜೀರ್ಣೋದ್ಧಾರದ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಯೋಜನಾ ವರದಿ ಪ್ರಕಾರ ಗುಣಮಟ್ಟದ ಕೆಲಸವಾಗಬೇಕು. ಕಾಲಮಿತಿಯಲ್ಲಿ ಕೆಲಸ ಪೂರ್ಣಗೊಳಿಸಬೇಕು. ಗ್ರಾಮಸ್ಥರು ಮುಂದೆ ನಿಂತು ಕೆಲಸ ತೆಗೆದುಕೊಳ್ಳಬೇಕೆಂದು ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಅಮೋಘ ಸಿದ್ಧೇಶ್ವರ ದೇವಾಲಯದ ಅರ್ಚಕ ಲಕ್ಷ್ಮಣ ಪೂಜಾರಿ, ಜಿಪಂ ಕೆಡಿಪಿ ಸದಸ್ಯ ಗೋವಿಂದಗೌಡ ಪಾಟೀಲ, ತಾಪಂ ಮಾಜಿ ಅಧ್ಯಕ್ಷೆ ಪ್ರೇಮಾ ಹಲಗಲಿ, ತಾಪಂ ಮಾಜಿ ಉಪಾಧ್ಯಕ್ಷೆ ರೇಖಾ ಕಟ್ಟೆಪ್ಪನವರ, ವೆಂಕಟೇಶ ನಾಯಿಕ, ರಾಮಣ್ಣ ನಾಯಿಕ, ಸಿದ್ದು ಸಂಕನ್ನವರ, ರಾಮಣ್ಣ ಆನಿಕೇರಿ, ಶಿವಾನಂದ ಬಿಸನಾಳ, ಹನುಮಂತ ಕಟ್ಟೆಪ್ಪನ್ನವರ, ವಿಠ್ಠಲ ಕಂಬಾರ, ಶ್ರೀಶೈಲ ಜೋಗೆನ್ನವರ, ಮಹಿಬೂಬಸಾಬ ಅಲ್ಲಾಡಿ, ಮಹಿಬೂಬಸಾಬ ಬಬಲೇಶ್ವರ, ರುದ್ರಪ್ಪ ಕಡಪಟ್ಟಿ, ರಮೇಶ ನಾಯ್ಕರ ಮತ್ತಿತರಿದ್ದರು.