ಪುತ್ತೂರು: ಪೊಲೀಸರು ಹಿಂದೂ ಸಂಘಟನೆಯನ್ನು ದಮನ ಮಾಡುವ ಗುತ್ತಿಗೆ ಕೆಲಸ ಮಾಡುತ್ತಿದ್ದು, ಸರ್ಕಾರಕ್ಕೆ ಬಕೆಟ್ ಹಿಡಿಯುವ ಕೆಲಸದಲ್ಲಿ ನಿರತರಾಗಿದ್ದಾರೆ. ಕಾಂಗ್ರೆಸ್ ರಾಜಕಾರಣಿಗಳನ್ನು ಮೆಚ್ಚಿಸಲು ಚಮಚಾಗಿರಿ ಮಾಡುತ್ತಿರುವ ಪೊಲೀಸರು ನಿಮ್ಮ ಖಾಕಿ ಕಳಚಿಟ್ಟು ನಡೆಯಿರಿ. ಪೊಲೀಸ್ ರಾಜ್ಯ ನಿಲ್ಲುವ ತನಕ ನಮ್ಮ ಹೋರಾಟ ಮುಂದುವರಿಯಲಿದೆ. ಪೋಲೀಸರ ಲಾಠಿ ಬೂಟು ಕೇಸು ನಮಗೆ ದೊಡ್ಡದಲ್ಲ ಎಂದು ಹಿಂದೂ ಜಾಗರಣ ವೇದಿಕೆಯ ಪ್ರಾಂತ ಕಾರ್ಯಕಾರಿಣಿ ಸದಸ್ಯ ಶ್ರೀಕಾಂತ್ ಶೆಟ್ಟಿ ಹೇಳಿದರು.
ಕೇವಲ ಮಾದ್ಯಮಗಳೊಂದಿಗೆ ಮಾತನಾಡಿದ ಕಾರಣಕ್ಕಾಗಿ ಜಗದೀಶ್ ಕಾರಂತ್, ಡಾ.ಕಲ್ಲಡ್ಕ ಪ್ರಭಾಕರ ಭಟ್ ವಿರುದ್ದ ಕೇಸು ದಾಖಲಿಸುವ ಪೊಲೀಸರು ಪುತ್ತೂರಿನಲ್ಲಿ ಅಂಗಡಿ ಮೇಲೆ ದಾಳಿ ಮಾಡಿ, ಮಹಿಳೆಗೆ ಹಲ್ಲೆ ನಡೆಸಿದ ಹಾಗೂ ಪೊಲೀಸ್ ಜೀಪಿನೊಳಗೆ ನುಗ್ಗಿ ಹಲ್ಲೆ ಮಾಡಿದ ಆರೋಪಿಗಳಿಗೆ ಯಾವುದೇ ಕೇಸು ದಾಖಲಿಸಿಲ್ಲ. ಹೊಡೆದವರು ರಾಜರೋಷವಾಗಿ ನಡೆಯುತ್ತಿದ್ದಾರೆ. ಜಿಲ್ಲಾ ಪೊಲೀಸ್ ಅಧಿಕಾರಿಗಳು ತಾನು ಓರ್ವ ಪ್ರಾಮಾಣಿಕ, ಕಟ್ಟುನಿಟ್ಟಿನ ಅಧಿಕಾರಿ ಎಂದು ಹೆಸರು ಗಳಿಸಲು ಹಿಂದೂಗಳ ದಮನನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಜಿಲ್ಲೆಯಲ್ಲಿ ಹಿಂದೂ ಸಮಾಜಕ್ಕೆ ಆಗುವ ಅನ್ಯಾಯವನ್ನು ಎದುರಿಸಲು ಯಾವುದೇ ಅಧಿಕಾರಿ ಇದ್ದರೂ ಹಿಂದೂ ಕಾರ್ಯಕರ್ತರರು ಸಿದ್ಧವಾಗಿದ್ದಾರೆ. ಗಲಭೆಗೆ ಕಾರಣರಾದ ಗ್ರಾಹಕರು ನಾವು ಕೇಸ್ ವಾಪಾಸು ಪಡೆಯುವುದಾಗಿ ಹೇಳಿಕೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ತಕ್ಷಣವೇ ದಾಖಲಿಸಿರುವ ಕೇಸು ಹಿಂತೆಗೆಯಬೇಕು. ಅಲ್ಲದೆ ಗಲಭೆ ನಡೆಸಿದ ನಿಷೇಧಿತ ಪಿಎಫ್‌ಐ ಕಾರ್ಯಕರ್ತರು ಎನ್ನಲಾದವರ ಮೇಲೆ ಕೋಕಾ ಕಾಯ್ದೆಯಡಿ ಕೇಸು ದಾಖಲಿಸಿ ಬಂಧಿಸಬೇಕು. ಘಟನೆ ಬಳಿಕ ಪ್ರಕರಣ ದಾಖಲಿಸಲು ವಿಳಂಬ ಮಾಡಿದ ಪುತ್ತೂರು ಪೊಲೀಸರ ಮೇಲೂ ಕೇಸು ದಾಖಲಿಸಬೇಕು. ಜಿಲ್ಲೆಯಲ್ಲಿ ಪೊಲೀಸ್ ರಾಜ್ಯ ನಿಲ್ಲಬೇಕು. ಈ ಕಾರ್ಯ ನಡೆಯದಿದ್ದಲ್ಲಿ ನಾವು ತಿಂಗಳಿಗೊಂದು ಚಲೋ ಕಾರ್ಯಕ್ರಮ ನಡೆಸಲಿದ್ದೇವೆ ಎಂದು ಎಚ್ಚರಿಸಿದರು.ಪ್ರಸ್ತಾವಿಕವಾಗಿ ಹಿಂದೂ ಜಾಗರಣಾವೇದಿಕೆ ಪುತ್ತೂರು ಜಿಲ್ಲಾ ಸಂಯೋಜಕ ಮೋಹನ್‌ದಾಸ್ ಕಾಣಿಯೂರು ಮಾತನಾಡಿ, ಹಿಂದೂಗಳಿಗೆ ನ್ಯಾಯ ಒದಗಿಸಲು ಹಿಂದೂ ಸಮಾಜ ಯಾವತ್ತೂ ಸಿದ್ಧವಿದೆ. ಸದಾಶಿವ ಪೈ ಮತ್ತು ಅಂಜನಾ ಪೈ ಮೇಲೆ ಪಿಎಫ್‌ಐಯಲ್ಲಿ ಗುರುತಿಸಿಕೊಂಡಿದ್ದ ೧೫೦ಕ್ಕೂ ಅಧಿಕ ಮಂದಿಯ ತಂಡ ದಾಳಿ ನಡೆಸಿದ್ದು, ಹಲ್ಲೆಗೊಳಗಾದ ಕುಟುಂಬದ ಮೇಲೆಯೇ ಪ್ರಕರಣ ದಾಖಲಿಸಲಾಗಿದೆ. ಕಾನೂನಿಗೆ ಅಧಿಕಾರಿಗಳು ಬೆಲೆ ನೀಡಿಲ್ಲ. ಈ ತನಕ ಪ್ರಕರಣದಲ್ಲಿ ಹಿಂದೂಗಳಿಗೆ ನ್ಯಾಯ ಸಿಕ್ಕಿಲ್ಲ. ನ್ಯಾಯ ಸಿಗುವ ತನಕ ನಾವು ವಿರಮಿಸುವುದಿಲ್ಲ. ಈ ಪ್ರಕರಣಕ್ಕೆ ನಾವು ಅಂತ್ಯ ಮಾಡಬೇಕೋ. ನೀವು ಮಾಡುತ್ತೀರಾ ನೋಡೋಣ ಎಂದು ಸವಾಲು ಹಾಕಿದರು.ಸ್ವಾಗತಿಸಿ ಮಾತನಾಡಿದ ವಿಶ್ವಹಿಂದೂ ಪರಿಷತ್ ಪುತ್ತೂರು ಜಿಲ್ಲಾಧ್ಯಕ್ಷ ಡಾ.ಕೃಷ್ಣಪ್ರಸನ್ನ ಅವರು ಮಾತನಾಡಿ, ಪುತ್ತೂರು ಒಡೆಯ ಮಹಾಲಿಂಗೇಶ್ವರನ ಮಣ್ಣು. ಈ ಮಣ್ಣಿನಲ್ಲಿ ಅನಾಚಾರ, ಅನ್ಯಾಯ ಮಾಡಿದವರಿಗೆ ಉಳಿಗಾಲವಿಲ್ಲ. ಮಹಿಳೆಯರ ಮೇಲೆ ದಾಳಿ ಮಾಡಿ ದುರಂಹಕಾರ ವರ್ತನೆ ತೋರಿದವರಿಗೆ ಇಲ್ಲಿ ಶಿಕ್ಷೆ ಖಂಡಿತಾ ಆಗುತ್ತದೆ ಎಂದರು. ಬಜರಂಗದಳ ಮಂಗಳೂರು ಪ್ರಾಂತ ಸಂಯೋಜಕ ಪುನೀತ್ ಅತ್ತಾವರ ಉಪಸ್ಥಿತರಿದ್ದರು.