ದೇವಸ್ಥಾನ ಜೀರ್ಣೋದ್ಧಾರದಲ್ಲಿ ಪ್ರತಿಯೊಬ್ಬ ಗ್ರಾಮಸ್ಥರ ಕೊಡುಗೆ ಮಹತ್ವದ್ದು: ಅಶೋಕ್ ರೈ

KannadaprabhaNewsNetwork |  
Published : Nov 14, 2026, 02:45 AM IST
ಫೋಟೋ: 12ಪಿಟಿಆರ್-ಇರ್ದೆಮಹೇಶ್ ಭಟ್‌ ಸುದನಡ್ಕ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.  | Kannada Prabha

ಸಾರಾಂಶ

ಪುತ್ತೂರು ತಾಲೂಕಿನ ಇರ್ದೆ ಗ್ರಾಮದ ಬೈಲಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ರು. 2.75 ಕೋಟಿ ರು. ವೆಚ್ಚದಲ್ಲಿ ನಡೆಯುತ್ತಿರುವ ಜೀರ್ಣೋದ್ಧಾರ ಬ್ರಹ್ಮಕಲಶೋತ್ಸವವದ ಹಿನ್ನಲೆಯಲ್ಲಿ ನಡೆದ ಭಕ್ತಾದಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಪುತ್ತೂರು: ದೇವರ ಮತ್ತು ಜನರ ನಡುವೆ ಅವಿನಾಭಾವ ಸಂಬಂಧವಿದ್ದು, ಗ್ರಾಮದ ದೇವಸ್ಥಾನ ಉತ್ತಮವಾಗಿದ್ದರೆ ಮನೆಯೂ ಉತ್ತಮವಾಗಿರುತ್ತದೆ. ಹಲವು ವರ್ಷಗಳ ಬಳಿಕ ಬೈಲಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವಕ್ಕೆ ಸಿದ್ಧತೆಗಳು ನಡೆಯುತ್ತಿದ್ದು, ಜೀರ್ಣೋದ್ಧಾರ ಕಾಮಗಾರಿಗಳು ಅಂತಿಮ ಹಂತ ತಲುಪಿವೆ. ಜೀರ್ಣೋದ್ಧಾರಕ್ಕೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಅವರು ಪುತ್ತೂರು ತಾಲೂಕಿನ ಇರ್ದೆ ಗ್ರಾಮದ ಬೈಲಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ರು. 2.75 ಕೋಟಿ ರು. ವೆಚ್ಚದಲ್ಲಿ ನಡೆಯುತ್ತಿರುವ ಜೀರ್ಣೋದ್ಧಾರ ಬ್ರಹ್ಮಕಲಶೋತ್ಸವವದ ಹಿನ್ನಲೆಯಲ್ಲಿ ನಡೆದ ಭಕ್ತಾದಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಒಗ್ಗಟ್ಟು ಮುಖ್ಯ: ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ರಾಜಕೀಯವನ್ನು ಬದಿಗಿಟ್ಟು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ರಾಜಕೀಯ ಚಟುವಟಿಕೆಗಳನ್ನು ಬ್ರಹ್ಮಕಲಶೋತ್ಸವದ ಬಳಿಕ ಚುನಾವಣಾ ಸಂದರ್ಭದಲ್ಲಿ ಮಾಡಿಕೊಳ್ಳಬಹುದು. ಪ್ರತಿಯೊಂದು ಮನೆಯವರೂ ಆರ್ಥಿಕ ಸಹಕಾರದೊಂದಿಗೆ ಅನ್ನದಾನ, ಕಲಶ ಸೇವೆ ಸೇರಿದಂತೆ ವಿವಿಧ ಸೇವೆಗಳಲ್ಲಿ ತೊಡಗಿಸಿಕೊಂಡು ಬ್ರಹ್ಮಕಲಶೋತ್ಸವದ ಯಶಸ್ಸಿಗೆ ಕೈಲಾದ ಕೊಡುಗೆ ನೀಡಬೇಕು ಎಂದರು.

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ ಜೀರ್ಣೋದ್ಧಾರ ಸಮಿತಿ ಅಸ್ತಿತ್ವಕ್ಕೆ ಬಂದ ಬಳಿಕ ಕಾಮಗಾರಿಗಳಿಗೆ ವೇಗ ದೊರೆತಿದ್ದು, ಶೇ.95ರಷ್ಟು ಜೀರ್ಣೋದ್ಧಾರ ಕಾರ್ಯಗಳು ಪೂರ್ಣಗೊಂಡಿವೆ. ಗರ್ಭಗುಡಿ ಹಾಗೂ ನಮಸ್ಕಾರ ಮಂಟಪಕ್ಕೆ ಹಿತ್ತಾಳೆಯ ಹೊದಿಕೆ, ವಿಶಾಲವಾದ ಮೇಲ್ಛಾವಣಿ, ಅದಕ್ಕೆ ರೂಫಿಂಗ್, ಕದಿಕೆ ಚಾವಡಿ ಅಭಿವೃದ್ಧಿ, ಅನ್ನಛತ್ರ ಮೊದಲಾದ ಕಾಮಗಾರಿಗಳನ್ನು ಅತ್ಯಂತ ಮಿತವ್ಯಯದಲ್ಲಿ ನಡೆಸಲಾಗಿದೆ. ಕಾಮಗಾರಿಗಳಿಗೆ ಸಂಬಂಧಿಸಿದಂತೆ ಎಲ್ಲರಿಗೂ ಹಣ ಪಾವತಿಸಲಾಗಿದೆ. ಒಟ್ಟು ರು. 2.75 ಕೋಟಿ ವೆಚ್ಚದ ಕಾಮಗಾರಿಗಳು ನಡೆಯುತ್ತಿದ್ದು, ಈ ಪೈಕಿ ರು. 1.19 ಕೋಟಿ ಭಕ್ತಾದಿಗಳಿಂದ ದೇಣಿಗೆಯಾಗಿ ಸಂಗ್ರಹವಾಗಿದೆ. ಉಳಿದ ರು.1.50 ಕೋಟಿ ದೇಣಿಗೆ ಸಂಗ್ರಹವಾಗಬೇಕಿದೆ. 23 ವರ್ಷಗಳ ಬಳಿಕ ಬ್ರಹ್ಮಕಲಶೋತ್ಸವ ನಡೆಯುತ್ತಿದ್ದು, ದೇವಸ್ಥಾನಕ್ಕೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಂಡು ಬ್ರಹ್ಮಕಲಶೋತ್ಸವ ನೆರವೇರಿಸಲಾಗುವುದು ಎಂದರು.ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಮತ್ತು ಉಪಸಮಿತಿ ಘೋಷಣೆ ಮಾಡಲಾಯಿತು. ಕ್ಷೇತ್ರದ ಜೀರ್ಣೋದ್ಧಾರ ಕಾರ್ಯದ ಸಂದರ್ಭದಲ್ಲಿ ನಿರಂತರವಾಗಿ ಊಟೋಪಚಾರದ ವ್ಯವಸ್ಥೆ ಮಾಡುತ್ತಿರುವ ಮಹೇಶ್ ಭಟ್ ಸುದನಡ್ಕ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರೂ, ಜೀರ್ಣೋದ್ಧಾರ ಸಮಿತಿ ಕೋಶಾಧಿಕಾರಿಯೂ ಆಗಿರುವ ವಿಠಲ ರೈ ಬಾಲ್ಯೊಟ್ಟುಗುತ್ತು ಹಾಗೂ ಸಂಚಾಲಕ ರಾಧಾಕೃಷ್ಣ ರೈ ಬಾಲ್ಯೊಟ್ಟುಗುತ್ತು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಶುಭಕರ ರೈ ಬಾಲ್ಯೊಟ್ಟುಗುತ್ತು ವಂದಿಸಿದರು. ಅನುಷಾ ರೈ ಬೈಲಾಡಿ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಸರ್ವತೋಮುಖ ಪ್ರಗತಿಗೆ ಶ್ರಮಿಸಿ
ಎಸಿಯಾಗಿ ಪದೋನ್ನತಿ ಹೊಂದಿದ ತಹಸೀಲ್ದಾರ್‌ ಬೋಸಗಿ