ಹುಬ್ಬಳ್ಳಿ: ವಸಂತದ ಸೂರ್ಯ ಮಂಗಳವಾರ ಸಂಜೆ ತನ್ನ ದಿನದ ಪಯಣ ಮುಗಿಸಿ ಅಸ್ತಂಗತನಾಗುತ್ತಿದ್ದಂತೆ ನಗರದ ಹೃದಯ ಭಾಗದಲ್ಲಿರುವ ಇಂದಿರಾ ಗಾಜಿನ ಮನೆಯಲ್ಲಿ ಕವಾಲಿ ಹಾಡುಗಳ ಝೇಂಕಾರ ಶುರುವಾಗಿತ್ತು. ಇಡೀ ಉದ್ಯಾನವನ ಸಮ್ಮೋಹನಗೊಳಿಸುವ ಹಾಡುಗಳು ಮತ್ತೆ ಮತ್ತೆ ಕೇಳಿ ಬಂದವು.
ದೂರದ ನಾಗಪುರದಿಂದ ಬಂದಿದ್ದ ಖ್ಯಾತ ಕವಾಲಿ ಕಲಾವಿದ ಖಾದ್ರಿ ಅರಮಾನ್ ಹಾಗೂ ಸ್ಥಳೀಯ ಕಲಾವಿದ ರೆಹಮಾನ ಜಾವೀದ್ ಅವರು ಕವಾಲಿ ಕಾ ಶಾಂದಾರ ಮುಖಾಬಲಾ ನಡೆಸಿ ಸೇರಿದ್ದ ಜನಸ್ತೋಮವನ್ನು ಸುಮಾರು ಎರಡೂವರೆ ತಾಸುಗಳ ಕಾಲ ಮಂತ್ರಮುಗ್ದಗೊಳಿಸಿದರು.ಗಾಯಕ ಖಾದ್ರಿ ಅರಮಾನ್ ಕವಾಲಿ ಹಾಡುಗಳಿಗೆ ನೆರೆದಿದ್ದ ಜನರು ಮನಸೋತು ತಲೆದೂಗಿದರು. ಸಂವಾದಿ ರೂಪದಲ್ಲಿ ಹಾಡಿದ ಅವರ ಪ್ರತಿ ಹಾಡಿಗೂ ಭಾರೀ ಕರತಾಡಣ ಕೇಳಿಬಂತು. ಸಹ ಕಲಾವಿದರು ಕೂಡ ಅಷ್ಟೇ ಹುಮ್ಮಸ್ಸಿನಿಂದ ಸಾತ್ ನೀಡಿದರು. ಹಾಗಾಗಿ ನಗರದ ಜನತೆಗೆ ಭಾರೀ ಮನರಂಜನೆ ನೀಡಿತು ಈ ಕಾರ್ಯಕ್ರಮ.
ರಂಜಾನ್ ಹಬ್ಬದ ನಿಮಿತ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶಿರಡಿ ನಗರದ ಆರಾಧನಾ ಕಲಾಕುಂಜ ಈ ಕವಾಲಿ ಕಾರ್ಯಕ್ರಮ ಆಯೋಜಿಸಿತ್ತು.ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಸಿದ್ದು ಮೊಗಲಿಶೆಟ್ಟರ್, ಇಂಥ ಕಾರ್ಯಕ್ರಮಗಳು ಹಿಂದೂ-ಮುಸ್ಲಿಂ ಭಾವೈಕ್ಯತೆ ಮತ್ತು ಸೌಹಾರ್ದತೆಗೆ ಪ್ರೇರಣೆಯಾಗಲಿವೆ. ಮೇಲಿಂದ ಮೇಲೆ ಇಂಥ ಖ್ಯಾತ ಗಾಯಕರ ಕವಾಲಿ ಕಾರ್ಯಕ್ರಮಗಳು ನಗರದಲ್ಲಿ ಹೆಚ್ಚು ಹೆಚ್ಚು ನಡೆಯಲಿ ಎಂದು ಆಶಿಸಿದರು.
ಖ್ಯಾತ ವೈದ್ಯ ಡಾ.ಸೋಮಶೇಖರ ಕಡೂರ ಅಧ್ಯಕ್ಷತೆ ವಹಿಸಿದ್ದರು. ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಮಾಜಿ ಸದಸ್ಯ ಮೋಹನ ಹಿರೇಮನಿ, ಆರ್.ಎಂ.ಗೋಗೇರಿ, ಡಾ.ಪ್ರಕಾಶ ಮಲ್ಲಿಗವಾಡ, ಶರಣಪ್ಪ ಕೊಟಗಿ, ಸುವರ್ಣ ಕಲ್ಲಕುಂಟ, ಎಂ.ಎಚ್.ಚಳ್ಳಮರದ, ಸ್ಪಿಪನ್ ಲುಂಜಾಳ ಮತ್ತಿತರರು ಭಾಗವಹಿಸಿದ್ದರು.