ಕಪ್ಪಗಲ್ಲು, ಮೋಕದಲ್ಲಿ ಸ್ವಚ್ಛತೆಯೇ ಸೇವೆ ಅಭಿಯಾನಕ್ಕೆ ಚಾಲನೆ
ಕನ್ನಡಪ್ರಭ ವಾರ್ತೆ ಬಳ್ಳಾರಿಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಸೆ. 17ರಿಂದ ಅ. 2ರ ವರೆಗೆ ಸರ್ಕಾರದ ನಿರ್ದೇಶನದಂತೆ ಸ್ವಚ್ಛತೆಯೇ ಸೇವೆ ಅಭಿಯಾನಕ್ಕೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಬಳ್ಳಾರಿ ಜಿಪಂ, ಬಳ್ಳಾರಿ ತಾಪಂ ಹಾಗೂ ಕಪ್ಪಗಲ್ಲು ಮತ್ತು ಮೋಕ ಗ್ರಾಮ ಪಂಚಾಯಿತಿ ಸಹಭಾಗಿತ್ವದಲ್ಲಿ ಕಪ್ಪಗಲ್ಲು ಮತ್ತು ಮೋಕ ಗ್ರಾಮಗಳಲ್ಲಿ ಚಾಲನೆ ನೀಡಲಾಯಿತು.
ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದ ಜಿಪಂ ಸಿಇಒ ಮಹಮ್ಮದ್ ಹಾರೀಸ್ ಸುಮೈರ್, ಸ್ವಚ್ಛತಾ ಕಾರ್ಯ ತುಂಬಾ ಮಹತ್ತರ ಕಾರ್ಯವಾಗಿದ್ದು, ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ.ವೈಯಕ್ತಿಕ ಸ್ವಚ್ಛತೆ, ಗ್ರಾಮದ ಸ್ವಚ್ಛತೆ, ತ್ಯಾಜ್ಯ ನಿರ್ವಹಣೆ, ಜಲಮೂಲಗಳ ಸುತ್ತ ಸ್ವಚ್ಛತೆ ಕಾಯ್ದುಕೊಳ್ಳುವಿಕೆ ಕುರಿತು ವಿವಿಧ ಚಟುವಟಿಕೆ ಹಮ್ಮಿಕೊಳ್ಳಲಾಗುತ್ತಿದ್ದು, ಸಾರ್ವಜನಿಕರು ಸಹ ಕೈಜೋಡಿಸಬೇಕು ಎಂದು ಹೇಳಿದರು.
ಜಿಪಂ ಉಪ ಕಾರ್ಯದರ್ಶಿ ಶಶಿಕಾಂತ ಶಿವಪೂರೆ, ಸಾರ್ವಜನಿಕರು ಸ್ವಚ್ಛತೆ ಮತ್ತು ಶುಚಿತ್ವದ ಬಗ್ಗೆ ಅರಿವು ಹೊಂದಬೇಕು. ಇದರಿಂದ ಯಾವುದೇ ರೋಗ-ರುಜಿನಗಳು ಹತ್ತಿರ ಸುಳಿಯುವುದಿಲ್ಲ ಎಂದರು.ಕಸ ಕ್ಯೂಆರ್ ಕೋಡ್:
ಗ್ರಾಮೀಣ ಪ್ರದೇಶದಲ್ಲಿ ಘನ ತ್ಯಾಜ್ಯ ನಿರ್ವಹಣೆ ಕುರಿತು ಪ್ರತಿ ನಿತ್ಯ ಮನೆಯ ಹಂತದಲ್ಲಿ ಕಸ ಸಂಗ್ರಹಣೆ ಮತ್ತು ಇದನ್ನು ಜಿಲ್ಲಾ ಹಂತದಲ್ಲಿ ಪರಿಶೀಲನೆ ನಡೆಸಲು ಪ್ರಾಯೋಗಿಕವಾಗಿ ಮೋಕ ಮತ್ತು ಕಪ್ಪಗಲ್ಲು ಗ್ರಾಮ ಪಂಚಾಯಿತಿಗಳಲ್ಲಿ ಕಸ ಕ್ಯೂಆರ್ ಕೋಡ್ ಆ್ಯಪ್ ಬಿಡುಗಡೆಗೊಳಿಸಲಾಯಿತು.ಸಮರ್ಪಕ ತ್ಯಾಜ್ಯ ವಿಲೇವಾರಿ ಮಾಡಲು ಕಸ ಕ್ಯೂಆರ್ ಕೋಡ್ ಅಳವಡಿಸಲು ಜಿಪಂ ಚಿಂತನೆ ನಡೆಸಿದ್ದು, ಈಗಾಗಲೇ ಯೋಜನೆ ರೂಪಿಸಲಾಗಿದೆ. ಪ್ರಾಯೋಗಿಕವಾಗಿ ಮೋಕ ಮತ್ತು ಕಪ್ಪಗಲ್ಲು ಗ್ರಾಮಗಳಲ್ಲಿ ಜಾರಿಗೊಳಿಸಲಾಗಿದೆ.
ಈ ಕ್ಯೂಆರ್ ಕೋಡ್ ಅನ್ನು ಪ್ರತಿ ನಿತ್ಯ ಸ್ಕ್ಯಾನ್ ಮಾಡಿದಾಗ ವಾರ್ಡ್‌ವಾರು ವಾಹನ ಮತ್ತು ಸಿಬ್ಬಂದಿ ಕಾರ್ಯ ನಿರ್ವಹಿಸುವ ಕುರಿತು ಪರಿಶೀಲನೆ ನಡೆಸಲು ಅನುಕೂಲವಾಗಲಿದೆ. ಪ್ರಾಯೋಗಿಕ ಹಂತದ ಈ ಗ್ರಾಮ ಪಂಚಾಯಿತಿಗಳಲ್ಲಿ ಯಶಸ್ವಿಯಾದಲ್ಲಿ ಜಿಲ್ಲೆಯ ಎಲ್ಲ ಗ್ರಾಪಂಗಳಲ್ಲಿ ಕಸ ಕ್ಯೂಆರ್ ಕೋಡ್‌ಗಳನ್ನು ಅಳವಡಿಸಲು ಕ್ರಮ ವಹಿಸಲಾಗುವುದು ಎಂದು ಜಿಪಂ ಸಿಇಒ ಮಹಮ್ಮದ್ ಹ್ಯಾರೀಸ್ ಸುಮೇರ್ ತಿಳಿಸಿದರು.ಇದೇ ವೇಳೆ ಕಸ ಕ್ಯೂಆರ್ ಕೋಡ್ ಆ್ಯಪ್ ಮತ್ತು ಸ್ವಚ್ಛತಾ ಕಾರ್ಯದ ಕುರಿತು ಮಾಹಿತಿ ಭಿತ್ತಿಪತ್ರ ಬಿಡುಗಡೆಗೊಳಿಸಿದರು.
ಬಳ್ಳಾರಿ ತಾಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಧರ ಬಾರಿಕರ್ ಇತರರಿದ್ದರು.