ವಕೀಲರ ವಾಹನಗಳಿಗೆ ಶೀಘ್ರ ಕ್ಯೂ ಆರ್‌ ಕೋಡ್‌ ಸ್ಟಿಕ್ಕರ್‌!

KannadaprabhaNewsNetwork |  
Published : Jun 02, 2025, 12:17 AM ISTUpdated : Jun 02, 2025, 08:06 AM IST
advocate logo | Kannada Prabha

ಸಾರಾಂಶ

ವಕೀಲರಲ್ಲದವರು ತಮ್ಮ ವಾಹನಗಳ ಮೇಲೆ ಅಳವಡಿಸಿರುವ ವಕೀಲರ ಸ್ಟಿಕ್ಕರ್‌ (ಚಿಹ್ನೆ) ತೆಗೆಸಲು ಈಗಾಗಲೇ ಕಾರ್ಯೋನ್ಮುಖವಾಗಿರುವ ಕರ್ನಾಟಕ ವಕೀಲರ ಪರಿಷತ್‌, ಇದೀಗ ಸ್ವತಃ ತಾನೇ ಸ್ಟಿಕ್ಕರ್‌ ವಿನ್ಯಾಸ ಹಾಗೂ ಮುದ್ರಣ ಮಾಡಿ ವಕೀಲರಿಗೆ ವಿತರಿಸಲು ನಿರ್ಧರಿಸಿದೆ.

ವೆಂಕಟೇಶ್‌ ಕಲಿಪಿ

 ಬೆಂಗಳೂರು : ವಕೀಲರಲ್ಲದವರು ತಮ್ಮ ವಾಹನಗಳ ಮೇಲೆ ಅಳವಡಿಸಿರುವ ವಕೀಲರ ಸ್ಟಿಕ್ಕರ್‌ (ಚಿಹ್ನೆ) ತೆಗೆಸಲು ಈಗಾಗಲೇ ಕಾರ್ಯೋನ್ಮುಖವಾಗಿರುವ ಕರ್ನಾಟಕ ವಕೀಲರ ಪರಿಷತ್‌, ಇದೀಗ ಸ್ವತಃ ತಾನೇ ಸ್ಟಿಕ್ಕರ್‌ ವಿನ್ಯಾಸ ಹಾಗೂ ಮುದ್ರಣ ಮಾಡಿ ವಕೀಲರಿಗೆ ವಿತರಿಸಲು ನಿರ್ಧರಿಸಿದೆ.

ವಿಶೇಷವೆಂದರೆ ಉದ್ದೇಶಿತ ಸ್ಟಿಕ್ಕರ್‌ನಲ್ಲಿ ಕ್ಯೂ ಆರ್‌ ಕೋಡ್‌ ಅನ್ನೂ ಅಳವಡಿಸಲಾಗುತ್ತದೆ. ಇದನ್ನು ಸ್ಕ್ಯಾನ್‌ ಮಾಡಿದರೆ ಸ್ಟಿಕ್ಕರ್‌ ಹೊಂದಿರುವ ವಕೀಲರ ಹೆಸರು, ಪೋಟೋ, ವಾಹನ ಸಂಖ್ಯೆ, ವಿಳಾಸ, ಇ-ಮೇಲ್‌ ವಿಳಾಸ, ರಕ್ತದ ಗುಂಪು, ಮೊಬೈಲ್‌ ಸಂಖ್ಯೆ, ವಕೀಲರ ಪರಿಷತ್‌ ಲೋಗೋ, ವಕೀಲರ ಸನ್ನದು ನೋಂದಣಿ ಸಂಖ್ಯೆ, ಅದರ ನೋಂದಣಿ ದಿನಾಂಕ, ಕಾನೂನು ಪದವಿ ಪಡೆದಿರುವ ವಿಶ್ವವಿದ್ಯಾಲಯದ ಹೆಸರು ಸೇರಿ ಇನ್ನಿತರ ವಿವರ ಸಿಗಲಿದೆ. 2025ರ ಆಗಸ್ಟ್‌ 15ರಿಂದ ಸ್ಟಿಕ್ಕರ್‌ ವಿತರಿಸಲು ಪರಿಷತ್‌ ಉದ್ದೇಶಿಸಿದೆ.

ಸಿಒಪಿ ನೀಡಿದರಿಗೆ ಸ್ಟಿಕ್ಕರ್‌:

ರಾಜ್ಯದಲ್ಲಿ ಒಟ್ಟು 1.25 ಲಕ್ಷ ವಕೀಲರಿದ್ದಾರೆ. ಅವರಲ್ಲಿ ಸುಮಾರು 65 ಸಾವಿರ ವಕೀಲರು ತಾವು ವಕೀಲಿಕೆ ನಡೆಸುತ್ತಿರುವುದನ್ನು ದೃಢೀಕರಿಸಿ ಪ್ರಮಾಣ ಪತ್ರವನ್ನು (ಸಿಒಪಿ ) ಪರಿಷತ್‌ಗೆ ನೀಡಿದ್ದಾರೆ. ಉಳಿದ 60 ಸಾವಿರ ವಕೀಲರು ಸಿಒಪಿ ನೀಡಿಲ್ಲ. ಇದರಿಂದ ಸಿಒಪಿ ನೀಡಿದ ಮತ್ತು ತಮ್ಮ ಹೆಸರಿನಲ್ಲಿ ವಾಹನ ಹೊಂದಿರುವ ವಕೀಲರಿಗೆ ಮಾತ್ರ ಸ್ಟಿಕ್ಕರ್‌ ನೀಡಲು ನಿರ್ಧರಿಸಲಾಗಿದೆ.

ಮನವಿ ಬೆನ್ನಲ್ಲೇ ದೂರು:

ಸದ್ಯ ವಕೀಲರಲ್ಲದವರು ಅಕ್ರಮವಾಗಿ ಸ್ಟಿಕ್ಕರ್‌ ಅಳವಡಿಸಿಕೊಂಡಿರುವುದು ಗಮನಕ್ಕೆ ಬಂದರೆ ಆ ಕುರಿತು ಪರಿಷತ್‌ಗೆ ಇ-ಮೇಲ್‌ ಮೂಲಕ ದೂರು ಸಲ್ಲಿಸಲು ವಕೀಲರು ಹಾಗೂ ಸಾರ್ವಜನಿಕರಲ್ಲಿ ಪರಿಷತ್‌ ಇತ್ತೀಚೆಗೆ ಮನವಿ ಮಾಡಿತ್ತು. ಅದರಂತೆ ಕೆಲ ದೂರುಗಳೂ ಬಂದಿವೆ. ಇದರಿಂದ ಪರಿಷತ್‌ ಅಧ್ಯಕ್ಷ ಎಸ್‌.ಎಸ್‌.ಮಿಟ್ಟಲಕೋಡ ಅವರು ರಾಜ್ಯ ಸಾರಿಗೆ ಮತ್ತು ಗೃಹ ಸಚಿವರಿಗೆ ಪತ್ರ ಬರೆದು, ಚೆಕ್‌ಪೋಸ್ಟ್‌ನಲ್ಲಿ ವಾಹನಗಳ ಪರಿಶೀಲನೆ ವೇಳೆ ವಕೀಲರ ಸ್ಟಿಕ್ಕರ್ ಇರುವುದು ಕಂಡು ಬಂದರೆ, ಆ ವಾಹನದ ಮಾಲೀಕರು ವಕೀಲರೋ ಅಥವಾ ಅಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಅದಕ್ಕಾಗಿ ವಾಹನ ಮಾಲೀಕರಿಂದ ಪರಿಷತ್‌ನಿಂದ ವಕೀಲರಿಗೆ ವಿತರಿಸಿರುವ ಗುರುತಿನ ಚೀಟಿ ಪಡೆದು ಖಚಿತಪಡಿಸಿಕೊಳ್ಳಬೇಕು. ಇಲ್ಲವೇ ಪರಿಷತ್‌ನ ಅಧಿಕೃತ ವೆಬ್‌ಸೈಟ್‌ ಮೂಲಕ ಪರಿಶೀಲಿಸಬೇಕು ಎಂದು ಕೋರಿದ್ದಾರೆ.

ಒಂದೊಮ್ಮೆ ವಾಹನ ಮಾಲೀಕರು ವಕೀಲರಲ್ಲದಿದ್ದರೆ, ಕೂಡಲೇ ಅವರ ವಾಹನಕ್ಕೆ ಅಳವಡಿಸಿರುವ ಸ್ಟಿಕ್ಕರ್‌ ತೆಗೆಸಬೇಕು. ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಪ್ರಾದೇಶಿಕ ಸಾರಿಗೆ ಆಯುಕ್ತರು (ಆರ್‌ಟಿಒ) ಮತ್ತು ಪೊಲೀಸರಿಗೆ ನಿರ್ದೇಶನ ನೀಡಬೇಕು ಎಂದು ಪತ್ರದಲ್ಲಿ ಸಚಿವರಿಗೆ ಮಿಟ್ಟಲಕೋಡ ಮನವಿ ಮಾಡಿದ್ದಾರೆ.

ನಿಯಮ, ನಿಯಂತ್ರಣ ಇಲ್ಲ:

ವಕೀಲರು ತಮ್ಮ ವಾಹನಗಳ ಮೇಲೆ ನೆಕ್‌ಬ್ಯಾಂಡ್‌ ಚಿಹ್ನೆ, ಕೆಳಗಡೆ ವಕೀಲ (ಅಡ್ವೋಕೇಟ್‌) ಎಂಬುದಾಗಿ ಬರೆದಿರುವ ಸ್ಟಿಕ್ಕರ್‌ ಅಂಟಿಸುವುದು ಸಾಮಾನ್ಯ. ಈ ಸ್ಟಿಕ್ಕರ್‌ ಅನ್ನು ಸಾರ್ವಜನಿಕವಾಗಿ ಮುದ್ರಿಸಿ ಮಾರಾಟ ಮಾಡಲಾಗುತ್ತಿದೆ. ಅದರಲ್ಲಿ ವಕೀಲರ ಹೆಸರು, ವಾಹನ ಸಂಖ್ಯೆ, ಪೋಟೋ ಇನ್ನಿತರ ಮಾಹಿತಿ ಇರುವುದಿಲ್ಲ. ಅದರ ಮುದ್ರಣ ಹಾಗೂ ಮಾರಾಟಕ್ಕೆ ಯಾವುದೇ ನಿಯಮಗಳೂ ಇಲ್ಲ. ಅದರ ಮೇಲೆ ವಕೀಲರ ಪರಿಷತ್‌, ವಕೀಲರ ಸಂಘ, ರಾಜ್ಯ ಸರ್ಕಾರ ಅಥವಾ ಹೈಕೋಟ್‌ನ ನಿಯಂತ್ರಣವಿಲ್ಲ. ಯಾರೂ ಬೇಕಾದರೂ ಸ್ಟಿಕ್ಕರ್‌ ಅಂಗಡಿಗೆ ಹೋಗಿ ಪಡೆಯಬಹುದು. ಆನ್‌ಲೈನ್‌ನಲ್ಲೂ ಖರೀದಿಸಬಹುದು. ಹಾಗಾಗಿ, ಸುಲಭವಾಗಿ ಸಿಗುವುದರಿಂದ ಯಾರೂ ಬೇಕಾದರೂ ವಕೀಲರ ಸ್ಟಿಕ್ಕರ್‌ ಪಡೆದು ವಾಹನಕ್ಕೆ ಅಳವಡಿಸಿಕೊಳ್ಳಬಹುದಾಗಿದೆ. ಇಂಥ ಅನೇಕ ಪ್ರಕರಣಗಳು ಕಂಡುಬಂದಿದ್ದು, ವಕೀಲರ ಸ್ಟಿಕ್ಕರ್‌ ದುರುಪಯೋಗ ಆಗುತ್ತಿದೆ ಮತ್ತು ವಕೀಲರ ಸಮುದಾಯಕ್ಕೆ ಅವಮಾನವಾಗುತ್ತಿದೆ ಎಂದು ಪರಿಷತ್‌ ಕಳವಳ ವ್ಯಕ್ತಪಡಿಸಿದೆ.

ವಕೀಲ ಸ್ಟಿಕ್ಕರ್‌ ದುರುಪಯೋಗ ತಡೆಯಲು ಪರಿಷತ್‌ ತಾನೇ ಅಧಿಕೃತವಾಗಿ ಸ್ಟಿಕ್ಕರ್‌ ಅನ್ನು ವಿನ್ಯಾಸ ಹಾಗೂ ಮುದ್ರಣ ಮಾಡಿ ವಕೀಲರಿಗೆ ವಿತರಿಸಲು ಉದ್ದೇಶಿಸಲಾಗಿದೆ. ಈಗಾಗಲೇ ಸ್ಟಿಕ್ಕರ್‌ ನಿಯಮಗಳು ಮತ್ತು ಅದರಲ್ಲಿ ಒದಗಿಸಬಹುದಾದ ಮಾಹಿತಿ, ಅದರ ವಿನ್ಯಾಸದ ಬಗ್ಗೆ ತಜ್ಞರೊಂದಿಗೆ ಚರ್ಚಿಸಲಾಗುತ್ತಿದೆ. ಈ ವಿಚಾರದಲ್ಲಿ ಯಾರಾದರೂ ತಮ್ಮ ಅಭಿಪ್ರಾಯ ಹಾಗೂ ಮಾರ್ಗದರ್ಶನ ನೀಡಬೇಕೆನಿಸಿದರೆ, ಪರಿಷತ್‌ನ ಇ-ಮೇಲ್‌ ವಿಳಾಸವಾದ ‘kar_barcouncil@yahoo.com’ಗೆ ಕಳುಹಿಸಬಹುದು.

- ಎಸ್‌.ಎಸ್‌.ಮಿಟ್ಟಲಕೋಡ, ಅಧ್ಯಕ್ಷರು, ಕರ್ನಾಟಕ ವಕೀಲರ ಪರಿಷತ್‌

PREV
Read more Articles on

Recommended Stories

ರಾಜ್ಯದಲ್ಲಿ 3 ದಿನ ಭಾರೀ ಮಳೆ: 15 ಜಿಲ್ಲೆಗೆ ಯೆಲ್ಲೋ ಅಲರ್ಟ್‌
ವರ್ಗಾವಣೆ ಬಳಿಕ ಪೊಲೀಸರು ವರದಿ ಮಾಡಿಕೊಳ್ಳದಿದ್ದರೆ ಸಂಬಳ ಕಟ್‌ : ವೈದ್ಯಕೀಯ ರಜೆಗೆ ಬ್ರೇಕ್