ಬಿತ್ತನೆ ಬೀಜ ವಿತರಣೆಯಲ್ಲೂ ಕ್ಯೂಆರ್ ಕೋಡ್ ವ್ಯವಸ್ಥೆ

KannadaprabhaNewsNetwork |  
Published : May 28, 2024, 01:06 AM ISTUpdated : May 28, 2024, 01:07 AM IST
27ಎಚ್‌ಎನ್‌ಎಲ್‌4 | Kannada Prabha

ಸಾರಾಂಶ

ನಕಲಿ ಹಾಗೂ ಕಳಪೆ ಬಿತ್ತನೆ ಬೀಜಗಳ ಮಾರಾಟಕ್ಕೆ ತೆರೆ ಎಳೆಯುವ ಹೊಸ ಕ್ಯೂಆರ್ ಕೋಡ್ ಸ್ಕ್ಯಾನ್ ವ್ಯವಸ್ಥೆ ಬಿತ್ತನೆ ಬೀಜಗಳ ಅಕ್ರಮ ದಾಸ್ತಾನಿಗೂ ಕಂಟಕವಾಗಿದ್ದು, ಈಗ ಎಲ್ಲವೂ ಸ್ವಚ್ಛ ಹಾಗೂ ನಿರಾತಂಕ ಎನಿಸಿದೆ.

ಮಾರುತಿ ಶಿಡ್ಲಾಪೂರಕನ್ನಡಪ್ರಭ ವಾರ್ತೆ ಹಾನಗಲ್ಲ ನಕಲಿ ಹಾಗೂ ಕಳಪೆ ಬಿತ್ತನೆ ಬೀಜಗಳ ಮಾರಾಟಕ್ಕೆ ತೆರೆ ಎಳೆಯುವ ಹೊಸ ಕ್ಯೂಆರ್ ಕೋಡ್ ಸ್ಕ್ಯಾನ್ ವ್ಯವಸ್ಥೆ ಬಿತ್ತನೆ ಬೀಜಗಳ ಅಕ್ರಮ ದಾಸ್ತಾನಿಗೂ ಕಂಟಕವಾಗಿದ್ದು, ಈಗ ಎಲ್ಲವೂ ಸ್ವಚ್ಛ ಹಾಗೂ ನಿರಾತಂಕ ಎನಿಸಿದೆ.ಇಲ್ಲಿನ ಕೃಷಿ ಇಲಾಖೆ ಬಿತ್ತನೆ ಬೀಜಗಳನ್ನು ರಿಯಾಯಿತಿ ದರದಲ್ಲಿ ಒದಗಿಸಲು ಮುಂದಾಗಿದೆ. ತಾಲೂಕಿನ ಹಾನಗಲ್ಲ, ಚಿಕ್ಕಾಂಸಿ ಹೊಸೂರು, ಅಕ್ಕಿಆಲೂರು, ತಿಳವಳ್ಳಿ, ಆಡೂರು, ಬೊಮ್ಮನಹಳ್ಳಿ, ಬೆಳಗಾಲಪೇಟೆ, ಮಾರನಬೀಡ ಹಾಗೂ ವರ್ದಿಯ ೯ ಬಿತ್ತನೆ ಬೀಜ ವಿತರಣಾ ಕೇಂದ್ರಗಳಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಹೊಸ ಡಿಜಿಟಲ್ ವ್ಯವಸ್ಥೆಯ ಬಗೆಗೆ ರೈತರು ಕೂಡ ಸಮಾಧಾನ ಹೊಂದಿ, ಕಳಪೆ ಬೀಜಗಳಿಂದ ಮುಕ್ತಿ ಎಂಬ ಭಾವನೆ ಬಂದಿದೆ. ರೈತರು ಹಣ ಸಂದಾಯ ಮಾಡಿ ಬೀಜ ಪಡೆಯುವ ಮುನ್ನ ಕ್ಯೂಆರ್ ಕೋಡ್ ಮೂಲಕ ಬಿತ್ತನೆ ಬೀಜದ ಚೀಲವನ್ನು ಪರಿಶೀಲಿಸಿ ರೈತರಿಗೆ ನೀಡಲಾಗುತ್ತಿದೆ. ಇದಕ್ಕೂ ಮೊದಲು ಬೀಜಗಳನ್ನು ಕೃಷಿ ಇಲಾಖೆ ದಾಸ್ತಾನು ಮಾಡುವ ಮೊದಲೇ ಕ್ಯೂಆರ್ ಕೋಡ್ ಪರಿಶೀಲಿಸಿ, ತಮಗೆ ಬರಬೇಕಾದ ಸರಿಯಾದ ಬೀಜ ಬಂದಿದೆ ಎಂದು ಪರೀಕ್ಷಿಸಿದ ನಂತರವೇ ದಾಸ್ತಾನು ಮಾಡಲಾಗಿರುತ್ತದೆ. ಹಾನಗಲ್ಲಿನ ಎಪಿಎಂಸಿ ಪ್ರಾಂಗಣದ ಗೋದಾಮಿನಲ್ಲಿ ಬತ್ತನೆ ಬೀಜಗಳನ್ನು ದಾಸ್ತಾನು ಮಾಡಲಾಗಿದೆ. ಅಗತ್ಯಕ್ಕೆ ತಕ್ಕಂತೆ ಹಾನಗಲ್ಲ ತಾಲೂಕಿನ ೯ ಬಿತ್ತನೆ ಬೀಜ ವಿತರಣಾ ಕೇಂದ್ರಕ್ಕೆ ರವಾನೆ ಮಾಡಲಾಗುತ್ತಿದೆ. ಕ್ಯೂಆರ್‌ಕೋಡ್ ವ್ಯವಸ್ಥೆಯಿಂದ ಬಿತ್ತನೆ ಬೀಜಗಳ ಅಕ್ರಮಕ್ಕೆ ತಡೆ ಹಾಕಿದಂತಾಗಿದೆ. ಸ್ಕ್ಯಾನ್ ಆದ ಬಳಿಕವೇ ರೈತರಿಗೆ ಖರೀದಿ ರಸೀದಿ ನೀಡಲಾಗುತ್ತದೆ. ಅಲ್ಲದೆ ರೈತರಿಗೆ ನೀಡಿದ ಬಿತ್ತನೆ ಬೀಜದ ಪ್ಯಾಕೆಟ್‌ನ ಎಲ್ಲ ವಿವರಗಳು ಕಂಪ್ಯೂಟರ್‌ನಲ್ಲಿ ದಾಖಲಾಗುತ್ತವೆ. ರಿಯಾಯಿತಿ ದರದ ಬೀಜಗಳನ್ನು ಹೆಚ್ಚುವರಿಯಾಗಿ ಕೊಡಲು ಸಹ ಇಲ್ಲಿ ಅವಕಾಶವಾಗುವುದಿಲ್ಲ. ಆಯಾ ರೈತರ ಹೆಸರಿನಲ್ಲಿ ಬೀಜ ವಿತರಣೆಯಾಗಿರುವುದು ತಂತ್ರಾಂಶದಲ್ಲಿ ನಮೂದಾಗುತ್ತದೆ. ನಿಗದಿತ ಪ್ರಮಾಣದ ಬೀಜ ರೈತರಿಗೆ ನೀಡಿದ ನಂತರ ತಂತ್ರಾಂಶ ಲಾಕ್ ಆಗುತ್ತದೆ. ಅಲ್ಲದೆ ಬಿತ್ತನೆ ಬೀಜ ವಿತರಣೆ ಸಂದರ್ಭದಲ್ಲಿ ರೈತರಿಂದ ಅಗತ್ಯ ದಾಖಲೆಗಳನ್ನು ಪಡೆದು ಬೀಜ ವಿತರಣೆ ಮಾಡಲಾಗುತ್ತಿದೆ. ಬೀಜಗಳ ಕೊರತೆ ಇಲ್ಲ. ಈಗಿನ ದಾಸ್ತಾನಿಗಿಂತಲೂ ಹೆಚ್ಚುವರಿ ಬೇಕಾದರೆ ಕೂಡಲೆ ತರಿಸಿ ಬೀಜ ವಿತರಿಸುವ ವಿಶ್ವಾಸವನ್ನು ಕೃಷಿ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.ಅಕ್ರಮ ಕಳಪೆ ಬಿತ್ತನೆ ಬೀಜದಿಂದ ರೈತರಿಗಾಗುವ ನಷ್ಟವನ್ನು ತಡೆಯಲು ಇದು ಅತ್ಯುತ್ತಮ ಕ್ರಮವಾಗಿದೆ. ಇದರಿಂದ ರೈತರಿಗೂ ವಿಶ್ವಾಸ ಮೂಡುತ್ತಿದೆ. ಬಿತ್ತನೆ ಬೀಜ ನೀಡಿದ ಸರಬರಾಜು ಕಂಪನಿಯ ಎಲ್ಲ ಮಾಹಿತಿ, ಆ ಬಗ್ಗೆ ಕೃಷಿ ಇಲಾಖೆಯಲ್ಲಿ ಎಲ್ಲ ದಾಖಲೆಗಳು ಇರುವುದರಿಂದ ಹಾಗೂ ಕಳಪೆ ಬೀಜ ನೀಡಿದರೆ ಸರಬರಾಜುದಾರರು ಕಠಿಣ ಕ್ರಮಕ್ಕೆ ಒಳಗಾಗುವ ಭೀತಿಯೂ ಇರುವುದರಿಂದ ಆಕ್ರಮ ಹಾಗೂ ಕಳಪೆ ಬೀಜ ಸರಬರಾಜು ಆಗುವ ಸಾಧ್ಯತೆ ಇಲ್ಲ. ಇದು ರೈತರು ಹಾಗೂ ಅಧಿಕಾರಿಗಳು, ಸರಬರಾಜುದಾರರಿಗೂ ನಿರಾಳವಾದ ವಹಿವಾಟು ಆಗಿದೆ ಎಂದು ಸಹಾಯಕ ಕೃಷಿ ನಿರ್ದೆಶಕ ಕೆ. ಮೋಹನಕುಮಾರ ಹೇಳಿದರು.ರೈತರಿಗೆ ಸರಕಾರ ರಿಯಾಯಿತಿ ದರದಲ್ಲಿ ನೀಡುವ ಬಿತ್ತನೆ ಬೀಜ ಕಳಪೆ ಆಗಿರಬಾರದು ಎಂಬ ಒತ್ತಾಸೆ ನಮ್ಮದು. ಈ ಕ್ಯೂಆರ್ ಕೋಡ ಅಂತಹ ಅಕ್ರಮ, ಕಳಪೆ ಬಿತ್ತನೆ ಬೀಜ ವಿತರಣೆಗೆ ತಡೆ ಹಾಕಿದೆ ಎಂಬ ಭಾವನೆ ನಮ್ಮದಾಗಿದೆ. ಇದು ಹೊಸ ವ್ಯವಸ್ಥೆಯಾಗಿರುವುದರಿಂದ ಕಾದು ನೋಡಬೇಕು. ಮೋಸದ ಜಾಲಕ್ಕೆ ಆಗಾಗ ಸಿಕ್ಕು ಅನ್ಯಾಯಕ್ಕೊಳಗಾಗುವ ರೈತನಿಗೆ ಇಂಥಹ ವ್ಯವಸ್ಥೆ ನ್ಯಾಯ ಒದಗಿಸಬಹುದು ಎಂಬ ವಿಶ್ವಾಸವಿದೆ. ಕಾದು ನೋಡೋಣ ಎಂದು ಸಮ್ಮಸಗಿಯ ಕೃಷಿಕ ಬಸಪ್ಪ ಪೂಜಾರ ಹೇಳಿದರು.

PREV

Latest Stories

ಡಿಕೆಶಿ ಪರ ದಾವಣಗೆರೆಯಲ್ಲಿ 101 ತೆಂಗಿನಕಾಯಿ ಸೇವೆ
ಬೆಂಗಳೂರು-ತುಮಕೂರುಪ್ರಯಾಣ, ಜನ ಹೈರಾಣ
ಸ್ಮಾರ್ಟ್‌ ಮೀಟರ್‌ ವಿವಾದ: ಸಚಿವಜಾರ್ಜ್ ವಿರುದ್ಧ ಬಿಜೆಪಿ ದೂರು