ಬೆಳೆವಿಮೆ ಪರಿಹಾರ ಸಾಲದ ಬಾಕಿಗೆ ಹೊಂದಾಣಿಕೆ ಮಾಡಬೇಡಿ: ಈಶ್ವರಕುಮಾರ

KannadaprabhaNewsNetwork |  
Published : May 28, 2024, 01:06 AM ISTUpdated : May 28, 2024, 01:07 AM IST
ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆ ನಡೆಯಿತು. | Kannada Prabha

ಸಾರಾಂಶ

ಸಾಲದ ಅರ್ಜಿಗಳನ್ನು ಬ್ಯಾಂಕ್ ಅಧಿಕಾರಿಗಳು ಕೂಲಂಕಷವಾಗಿ ಪರಿಶೀಲಿಸಿ, ದಾಖಲೆಗಳ ಕೊರತೆಯಿದ್ದಲ್ಲಿ ಸಮರ್ಪಕ ದಾಖಲೆಗಳನ್ನು ಅರ್ಜಿದಾರರಿಂದ ಪಡೆದು ಸಾಲ ಮಂಜೂರು ಮಾಡುವಂತೆ ಹಾಗೂ ಸಣ್ಣಪುಟ್ಟ ಕಾರಣಗಳಿಗೆ ಅರ್ಜಿಗಳನ್ನು ತಿರಸ್ಕೃತಗೊಳಿಸದಂತೆ ಬ್ಯಾಂಕ್‌ಗಳ ಅಧಿಕಾರಿಗಳಿಗೆ ಜಿಪಂ ಸಿಇಒ ಈಶ್ವರಕುಮಾರ ಕಾಂದೂ ತಿಳಿಸಿದರು.

ಕಾರವಾರ: ಜಿಲ್ಲೆಯ ರೈತರ ಖಾತೆಗಳಿಗೆ ಜಮಾವಣೆಯಾಗಿರುವ ಬೆಳೆ ಪರಿಹಾರದ ಮೊತ್ತವನ್ನು ಯಾವುದೇ ಕಾರಣಕ್ಕೂ ರೈತರು ಬ್ಯಾಂಕ್‌ಗಳಿಂದ ಪಡೆದ ಇತರೆ ಸಾಲದ ಮೊತ್ತಕ್ಕೆ ಸರಿಹೊಂದಿಸಿಕೊಳ್ಳದಂತೆ ಎಲ್ಲ ಬ್ಯಾಂಕ್ ಅಧಿಕಾರಿಗಳಿಗೆ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಈಶ್ವರಕುಮಾರ ಕಾಂದೂ ಸೂಚಿಸಿದರು.

ಜಿಪಂ ಸಭಾಂಗಣದಲ್ಲಿ ಸೋಮವಾರ ನಡೆದ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ರೈತರು ವಿವಿಧ ಬ್ಯಾಂಕ್‌ಗಳಲ್ಲಿ ಸಾಲ ಪಡೆದಿದ್ದು, ಈ ಸಾಲದ ಮೊತ್ತಕ್ಕೆ ರೈತರ ಖಾತೆಗೆ ಜಮಾವಣೆಯಾದ ಬೆಳೆ ಪರಿಹಾರದ ಮೊತ್ತವನ್ನು ಯಾವುದೇ ಕಾರಣಕ್ಕೂ ಸಾಲದ ಮೊತ್ತಕ್ಕೆ ಸರಿಹೊಂದಿಸದಂತೆ ಮುಖ್ಯಮಂತ್ರಿ ಬರ ನಿರ್ವಹಣೆ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ನೀಡಿರುವ ನಿರ್ದೇಶನವನ್ನು ಎಲ್ಲ ಬ್ಯಾಂಕ್‌ಗಳ ಅಧಿಕಾರಿಗಳು ಪಾಲಿಸುವಂತೆ ತಿಳಿಸಿದರು.

ಸರ್ಕಾರದ ವಿವಿಧ ಯೋಜನೆಗಳು ಯಶಸ್ವಿಯಾಗಬೇಕಾದರೆ ಬ್ಯಾಂಕ್‌ಗಳು ಅರ್ಹ ಫಲಾನುಭವಿಗಳಿಗೆ ಸಾಲ ನೀಡಬೇಕು. ಫಲಾನುಭವಿಗಳು ಬ್ಯಾಂಕ್‌ಗಳಿಗೆ ಸಲ್ಲಿಸುವ ಸಾಲದ ಅರ್ಜಿಗಳನ್ನು ಬ್ಯಾಂಕ್ ಅಧಿಕಾರಿಗಳು ಕೂಲಂಕಷವಾಗಿ ಪರಿಶೀಲಿಸಿ, ದಾಖಲೆಗಳ ಕೊರತೆಯಿದ್ದಲ್ಲಿ ಸಮರ್ಪಕ ದಾಖಲೆಗಳನ್ನು ಅರ್ಜಿದಾರರಿಂದ ಪಡೆದು ಸಾಲ ಮಂಜೂರು ಮಾಡುವಂತೆ ಹಾಗೂ ಸಣ್ಣಪುಟ್ಟ ಕಾರಣಗಳಿಗೆ ಅರ್ಜಿಗಳನ್ನು ತಿರಸ್ಕೃತಗೊಳಿಸದಂತೆ ಬ್ಯಾಂಕ್‌ಗಳ ಅಧಿಕಾರಿಗಳಿಗೆ ತಿಳಿಸಿದರು.

ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನಕ್ಕಾಗಿ ಬ್ಯಾಂಕ್‌ಗಳ ಮೂಲಕ ಸಾಲ ಪಡೆಯಲು ಅರ್ಜಿ ಸಲ್ಲಿಸುವ ಫಲಾನುಭವಿಗಳಿಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸರ್ಕಾರಿ ಯೋಜನೆಯ ಹಾಗೂ ಸಾಲ ಪಡೆಯಲು ಇರಬೇಕಾದ ಅರ್ಹತೆಗಳ ಬಗ್ಗೆ ವಿವರವಾದ ಮಾಹಿತಿ ನೀಡಬೇಕು. ಅರ್ಜಿಗಳ ಜತೆ ಸಲ್ಲಿಸಿದ ಪೂರಕ ದಾಖಲೆಗಳನ್ನು ಮತ್ತೊಮ್ಮೆ ಪರಿಶೀಲಿಸಿ ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳ ಪ್ರಯೋಜನ ದೊರೆಯುವಂತೆ ನೋಡಿಕೊಳ್ಳಬೇಕು. ಈ ಸಂಬಂಧ ಬ್ಯಾಂಕ್ ಮತ್ತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸಿ, ಸರ್ಕಾರಿ ಯೋಜನೆಗಳ ಸಂಪೂರ್ಣ ಯಶಸ್ವಿಗೆ ಕಾರ್ಯನಿರ್ವಹಿಸಬೇಕು ಎಂದರು.

ಜಿಲ್ಲೆಯ ಬ್ಯಾಂಕ್‌ಗಳಲ್ಲಿ ಸಾಲ ಮತ್ತು ಠೇವಣಿ ಅನುಪಾತವು ನಿಗದಿತ ಗುರಿಗಿಂತ ಕಡಿಮೆಯಿದ್ದು, ಸಾಲ ಮತ್ತು ಠೇವಣಿ ಅನುಪಾತವು ಹೆಚ್ಚಿಸಲು ಹೆಚ್ಚಿನ ಸಂಖ್ಯೆಯಲ್ಲಿ ಸಾಲಗಳನ್ನು ವಿತರಿಸುವಂತೆ ತಿಳಿಸಿದ ಅವರು, ಪಶುಪಾಲನೆ ಮತ್ತು ಮೀನುಗಾರಿಕಾ ಇಲಾಖೆ ವತಿಯಿಂದ ನೀಡುವ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ಹೆಚ್ಚಿನ ಸಂಖ್ಯೆಯಲ್ಲಿ ಸಾಲ ವಿತರಿಸುವಂತೆ ಹಾಗೂ ಪಿಎಂ ಸ್ವ ನಿಧಿ ಯೋಜನೆಯಡಿಯಲ್ಲಿ ಜಿಲ್ಲೆಯ ಎಲ್ಲ ಬೀದಿಬದಿ ವ್ಯಾಪಾರಸ್ಥರಿಗೆ ಸಾಲ ನೀಡುವಂತೆ ಸೂಚಿಸಿದರು.

ಪ್ರಧಾನ ಮಂತ್ರಿ ಉದ್ಯೋಗ ಸೃಜನಾ ಯೋಜನೆಯಡಿ ಸ್ವಯಂ ಉದ್ಯೋಗ ಕೈಗೊಳ್ಳುವವರಿಗೆ, ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ವಿವರವಾದ ಮಾಹಿತಿ ನೀಡಿ, ಈ ಬಗ್ಗೆ ಅರಿವು ಕಾರ್ಯಕ್ರಮಗಳನ್ನು ಆಯೋಜಿಸಿ, ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ದಿಗೆ ಪೂರಕವಾದ ಚಟುವಟಿಕೆಗಳಿಗೆ ಆದ್ಯತೆಯಲ್ಲಿ ಸಾಲ ವಿತರಿಸುವಂತೆ ತಿಳಿಸಿದರು.

ಆರ್‌ಬಿಐ ಮ್ಯಾನೇಜರ್ ಅಲೋಕ ಕುಮಾರ್ ಸೀನ್ಹಾ, ಜಿಲ್ಲೆಯ ಎಲ್ಲ ಬ್ಯಾಂಕ್‌ಗಳು ಪ್ರತಿ ತಿಂಗಳು ತಮ್ಮ ವ್ಯಾಪ್ತಿಯ ಗ್ರಾಹಕರೊಂದಿಗೆ ತಪ್ಪದೇ ಸಭೆ ನಡೆಸುವಂತೆ ಮತ್ತು ಗ್ರಾಹಕರಿಗೆ ಆನ್‌ಲೈನ್ ವಂಚನೆಗಳ ಬಗ್ಗೆ ಎಚ್ಚರದಿಂದಿರುವ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಆನ್‌ಲೈನ್ ವಂಚನೆಗಳ ಬಗ್ಗೆ ಸೈಬರ್ ಕ್ರೈಂ ಹೆಲ್ಪ್‌ಲೈನ್ ಸಂಖ್ಯೆ 1930ಕ್ಕೆ ಮಾಹಿತಿ ನೀಡುವಂತೆ ತಿಳಿಸಿದರು.

ಕೆನರಾ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕಿ ಬಿ.ಎಸ್. ಶುಭಾ ಮಾತನಾಡಿ, ಜಿಲ್ಲೆಯಲ್ಲಿ ಕಳೆದ ತ್ರೆಮಾಸಿಕ ಅವಧಿಯಲ್ಲಿ ₹7824 ಕೋಟಿ ಸಾಲ ವಿತರಣೆ ಗುರಿಗೆ ₹7748 ಕೋಟಿ ಸಾಲ ವಿತರಿಸಿ ಶೇ. 99.02ರಷ್ಟು ಸಾಧನೆ ಮಾಡಲಾಗಿದೆ. ಕೃಷಿ ವಲಯಕ್ಕೆ ₹2824 ಕೋಟಿ, ಮಧ್ಯಮ ಮತ್ತು ಸಣ್ಣ ವಲಯಕ್ಕೆ ₹2616 ಕೋಟಿ ಸಾಲ ವಿತರಿಸಲಾಗಿದೆ. ಗೃಹ ನಿರ್ಮಾಣ ಮತ್ತು ಶೈಕ್ಷಣಿಕ ಸಾಲ ವಿತರಣೆಯಲ್ಲಿ ಬ್ಯಾಂಕ್‌ಗಳು ಇನ್ನೂ ಹೆಚ್ಚಿನ ಪ್ರಗತಿ ಸಾಧಿಸಬೇಕಿದೆ. ಜಿಲ್ಲೆಯ ಸಾಲ ಮತ್ತು ಠೇವಣಿ ಅನುಪಾತ ಕಳೆದ ಸಾಲಿಗೆ ಹೋಲಿಸಿದಲ್ಲಿ ಪ್ರಗತಿಯಾಗಿದ್ದು, ಸಾಲ ನೀಡಿಕೆ ಪ್ರಮಾಣ ಇನ್ನೂ ಹೆಚ್ಚಳವಾಗಬೇಕಿದೆ ಎಂದರು.

ಲೀಡ್ ಬ್ಯಾಂಕ್ ಮ್ಯಾನೇಜರ್ ರೇವತಿ ಸುಧಾಕರ್, ನಬಾರ್ಡ್ ಡಿಡಿಎಂ ಸುಶೀಲ್ ನಾಯ್ಕ, ಜಿಪಂ ಮುಖ್ಯ ಲೆಕ್ಕಾಧಿಕಾರಿ ಆನಂದಸಾ ಹಬೀಬ್, ಮುಖ್ಯ ಯೋಜನಾಧಿಕಾರಿ ವಿನೋದ ಅಣ್ವೇಕರ, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಬ್ಯಾಂಕ್ ಗಳ ಅಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣದ ಜೊತೆಗೆ ವೃತ್ತಿಪರ ಕೌಶಲ್ಯ ಅಗತ್ಯ
ಪಂ.ದೀನದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನದ ಯೋಜನಾ ಸಭೆ