ಮುಂಡರಗಿ: ರಾಜ್ಯ ಸರ್ಕಾರ ಜನತೆಗೆ ನೀಡಿದ ಭರವಸೆಯಂತೆ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗಿದೆ. ಗೃಹಲಕ್ಷ್ಮೀ ಯೋಜನೆಯಡಿ 4 ತಿಂಗಳಿಂದ ಹಣ ವರ್ಗಾವಣೆ ಸ್ಥಗಿತಗೊಂಡಿದ್ದು, ಮೊದಲು ಕೇಂದ್ರಿಕೃತ ಮೂಲಕ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡಲಾಗುತ್ತಿತ್ತು .ಇದೀಗ ಆಯಾ ತಾ.ಪಂ. ಮಟ್ಟದಿಂದಲೇ ಫಲಾನುಭವಿಗಳಿಗೆ ಹಣ ವರ್ಗಾವಣೆ ಮಾಡುವ ಪ್ರಕ್ರಿಯೆ ನಡೆದಿದೆ ಎಂದು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಡಿ.ಡಿ. ಮೊರನಾಳ ಹೇಳಿದರು.
ಪಟ್ಟಣದ ತಾ.ಪಂ.ಸಾಮರ್ಥ್ಯ ಸೌಧದಲ್ಲಿ ಶುಕ್ರವಾರ ಜರುಗಿದ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಮಾಸಿಕ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತಾಂತ್ರಿಕ ಕಾರಣದಿಂದ ತಡವಾಗಿದೆ ಇನ್ನೊಂದು ವಾರದೊಳಗೆ ಗೃಹಲಕ್ಷ್ಮೀ ಹಣ ಜಮೆ ಆಗಲಿದೆ ಎಂದರು.ಯೋಜನೆ ಬಗ್ಗೆ ಹಲವಾರು ಅಪನಂಬಿಕೆಗಳಿದ್ದವು. ಆದರೆ ಸರಕಾರ ನಿರಂತರ ಯೋಜನೆಗಳ ಅನುಷ್ಠಾನಕ್ಕೆ ಕ್ರಮಕೈಗೊಂಡಿದೆ. ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಅಕ್ಕಿಯ ಬದಲಿಗೆ ಹಣ ಕೊಡಲಾಗುತ್ತಿತ್ತು, ಇನ್ನು 10 ಕೆಜಿ ಅಕ್ಕಿ ಕೊಡುವುದರ ಬಗ್ಗೆ ಈಗಾಗಲೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯಿಸಿದ್ದಾರೆ. ಶಕ್ತಿ ಯೋಜನೆಯಿಂದಾಗಿ ರಾಜ್ಯದಲ್ಲಿ 3,900 ಕೋಟಿ ಹೆಚ್ಚಿನ ಲಾಭದಾಯಕವಾಗಿದೆ. ಯೋಜನೆ ಪೂರ್ವಕ್ಕಿಂತ ಇದೀಗ ಶೇ.20ರಷ್ಟು ಮಹಿಳೆಯರು ಹೆಚ್ಚು ಸಂಚರಿಸುತ್ತಿದ್ದಾರೆ ಎಂದು ತಿಳಿಸಿದರು.ಸಿಡಿಪಿಒ ಮಹಾದೇವ ಇಸರನಾಳ, ಆಹಾರ ನಿರೀಕ್ಷಕ ಜೆ.ಬಿ.ಅಮಾತಿ, ಹೆಸ್ಕಾಂ ಎಇಇ ಸಂತೋಷ ಆನೆಕಲ್ಲು, ಸ್ಥಳೀಯ ಸಾರಿಗೆ ಘಟಕದ ವ್ಯವಸ್ಥಾಪಕ ಶೇಖರ ನಾಯಕ, ಜಿಲ್ಲಾ ಉದ್ಯೋಗಾಧಿಕಾರಿ ಬಸವಂತ ಯೋಜನೆಗಳ ಕುರಿತು ಮಾಹಿತಿ ಒದಗಿಸಿದರು. ಸಮಿತಿ ಕಾರ್ಯದರ್ಶಿ ತಾಪಂ ಇಒ ವಿಶ್ವನಾಥ ಹೊಸಮನಿ, ಸದಸ್ಯರಾದ ವಿಶ್ವನಾಥ ಪಾಟೀಲ, ಭುವನೇಶ್ವರಿ ಕಲ್ಲಕುಟಗರ, ಗೀತಾ ನಾಡಗೌಡರ, ಜೈಲಾನಸಾಬ ವಡ್ಡಟ್ಟಿ, ಸುರೇಶ ಮಾಳಗಿಮನಿ, ಕಾಶಪ್ಪ ಹೊನ್ನೂರ, ನಿಂಗಪ್ಪ ಮಜ್ಜಿಗಿ, ಉಮೇಶ ಕಲಾಲ, ಶರಣಪ್ಪ ಮಲ್ಲಾಪೂರ, ಯೋಜನಾಧಿಕಾರಿ ವಿಜಯಕುಮಾರ ಬೆಣ್ಣಿ, ಇತರರು ಪಾಲ್ಗೊಂಡಿದ್ದರು.