ಸರ್ಕಾರಿ ಶಾಲೆಗಳಿಗೆ ಕ್ಷೇತ್ರದಿಂದ ಎಲ್ಲ ರೀತಿಯಲ್ಲಿ ಅನುಕೂಲಗಳನ್ನು ಮಾಡಿಕೊಡಲಾಗುತ್ತಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.ಅವರು ಮಂಗಳವಾರ ಧರ್ಮಸ್ಥಳದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಉಜಿರೆಯ ಸಮಗ್ರ ಘನತ್ಯಾಜ್ಯ ನಿರ್ವಹಣಾ ಕೇಂದ್ರಕ್ಕೆ ಸಾಗಾಟವಾಹನ ಮತ್ತು ಯಂತ್ರೋಪಕರಣಗಳ ವಿತರಣೆ ಮತ್ತು 507 ಶಾಲೆಗಳಿಗೆ 4, 044 ಜೊತೆ ಡೆಸ್ಕ್-ಬೆಂಚುಗಳ ವಿತರಣಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸರ್ಕಾರಿ ಶಾಲೆಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಎಲ್ಲ ಮೂಲಭೂತ ಸೌಕರ್ಯಗಳೊಂದಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಆದುದರಿಂದ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಿ ಅಲ್ಲಿ ಸಿಗುವ ಅವಕಾಶಗಳ ಸದುಪಯೋಗ ಪಡೆದು ಮಕ್ಕಳು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಸರ್ಕಾರ ಭರ್ತಿ ಮಾಡಬೇಕು ಎಂದು ಅವರು ಸಲಹೆ ನೀಡಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನೀಡಿದ ಪೀಠೋಪಕರಣಗಳು, ಶಾಲಾಕೊಠಡಿ ನಿರ್ಮಾಣ, ಕ್ರೀಡಾಂಗಣ, ಆಟದಸಾಮಾಗ್ರಿಗಳು ಹಾಗೂ ಬೋಧನೋಪಕರಣಗಳನ್ನು ವಿದ್ಯಾರ್ಥಿಗಳು ಸದುಪಯೋಗ ಮಾಡಿ ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು.ಸ್ವಚ್ಛತೆ ಕಾಪಾಡುವ ಬಗ್ಗೆ ಸಾರ್ವಜನಿಕರು ಹೆಚ್ಚಿನ ಆಸಕ್ತಿ, ಕಾಳಜಿ ಮತ್ತು ಸಾಮಾಜಿಕ ಪ್ರಜ್ಞೆ ಮೈಗೂಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್, ಎಸ್.ಎಸ್., ಗ್ರಾಮೀಣ ಪ್ರದೇಶದ ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಈ ವರ್ಷ 1030 ಅತಿಥಿ ಶಿಕ್ಷಕರನ್ನು ಸರ್ಕಾರಿ ಶಾಲೆಗಳಲ್ಲಿ ನೇಮಿಸಲಾಗಿದೆ ಎಂದರು.ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಆನಂದ ಕೆ. ಮಾತನಾಡಿ, ಸ್ವಚ್ಛತೆ ನಿರ್ವಹಣೆ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಧರ್ಮಸ್ಥಳದ ಸೇವೆಯನ್ನು ಶ್ಲಾಘಿಸಿ ಅಭಿನಂದಿಸಿದರು.ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ದ.ಕ. ಜಿಲ್ಲಾ ಉಪನಿರ್ದೇಶಕ ವೆಂಕಟೇಶ್ ಸುಬ್ರಾಯ ಪಟಗಾರ್ ಮಾತನಾಡಿ, ಧರ್ಮಸ್ಥಳದ ಕೊಡುಗೆಯಿಂದಾಗಿ ಜಿಲ್ಲೆಯಲ್ಲಿ ಉತ್ತಮ ಶೈಕ್ಷಣಿಕ ಸಾಧನೆ ಮಾಡಲು ಸಾಧ್ಯವಾಗಿದ್ದು, ಶಿಕ್ಷಣ ಇಲಾಖೆ ವತಿಯಿಂದ ಕೃತಜ್ಞತೆ ವ್ಯಕ್ತಪಡಿಸಿದರು.ಹೇಮಾವತಿ ವೀ. ಹೆಗ್ಗಡೆ, ಬೆಳ್ತಂಗಡಿ ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್, ಪ್ರಭಾರ ಕ್ಷೇತ್ರಶಿಕ್ಷಣಾಧಿಕಾರಿ ವೆಂಕಟೇಶ ತುಳುಪುಳೆ, ಧರ್ಮಸ್ಥಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಮಲಾ ಉಪಸ್ಥಿತರಿದ್ದರು.ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಸ್ವಾಗತಿಸಿದರು. ಶಿವಾನಂದ ಆಚಾರ್ಯ ಧನ್ಯವಾದವಿತ್ತರು.ಇದಕ್ಕೂ ಮೊದಲು ಉಜಿರೆಯಲ್ಲಿ ನಿರ್ಮಾಣವಾಗುತ್ತಿರುವ ಬೆಳ್ತಂಗಡಿ ತಾಲೂಕಿನ ಸಮಗ್ರ ಘನತ್ಯಾಜ್ಯ ನಿರ್ವಹಣಾ ಕೇಂದ್ರಕ್ಕೆ ಯೋಜನೆಯ ವತಿಯಿಂದ 46. 65 ಲಕ್ಷ ರು. ಮೌಲ್ಯದ ಸಾಗಾಟ ವಾಹನ ಮತ್ತು ಯಂತ್ರೋಪಕರಣಗಳನ್ನು ಡಾ. ಹೆಗ್ಗಡೆಯವರು ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿಯವರಿಗೆ ಹಸ್ತಾಂತರಿಸಿದರು.
• 2.75 ಕೋಟಿ ರು. ವೆಚ್ಚದಲ್ಲಿ ದಕ್ಷಿಣ ಕನ್ನಡ, ಉಡುಪಿ, ಕೊಡಗು ಮತ್ತು ಕಾಸರಗೋಡು ಜಿಲ್ಲೆಯ 507 ಶಾಲೆಗಳಿಗೆ 4044 ಜೊತೆ ಡೆಸ್ಕ್-ಬೆಂಚುಗಳನ್ನು ವಿತರಿಸಲಾಯಿತು.• ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು 38.01 ಕೋಟಿ ರು. ವಿನಿಯೋಗಿಸಲಾಗಿದೆ.• ರಾಜ್ಯದ 11, 000 ಶಾಲೆಗಳಿಗೆ 26 ಕೋಟಿ ರು. ವೆಚ್ಚದಲ್ಲಿ 72, 000 ಜೊತೆ ಬೆಂಚು-ಡೆಸ್ಕ್ಗಳನ್ನು ಈ ವರೆಗೆ ವಿತರಿಸಲಾಗಿದೆ.