ಜಿಲ್ಲಾ ಮೊಬೈಲ್ ಫೊರೆನ್ಸಿಕ್ ವಾಹನವು ಜಿಲ್ಲಾ ಸಶಸ್ತ್ರ ಮೀಸಲು ಪಡೆ ಹಾಗೂ ಸೀನ್ ಆಫ್ ಕ್ರೈಂ ಅಧಿಕಾರಿಗಳ ಅಧೀನದಲ್ಲಿ ಕಾರ್ಯ ನಿರ್ವಹಿಸಲಿದೆ.
ಕನ್ನಡಪ್ರಭ ವಾರ್ತೆ ಮೈಸೂರು
ನಗರ ಮತ್ತು ಜಿಲ್ಲಾ ಪೊಲೀಸರಿಗೆ ತಲಾ ಒಂದು ಅತ್ಯಾಧುನಿಕ ಮೊಬೈಲ್ ಫೊರೆನ್ಸಿಕ್ ಸೈನ್ಸ್ ಲ್ಯಾಬೊರೇಟರಿ ವಾಹನವನ್ನು ಒದಗಿಸಲಾಗಿದೆ.ರಾಜ್ಯಾದ್ಯಂತ ಪೊಲೀಸ್ ಹಾಗೂ ಫೊರೆನ್ಸಿಕ್ ಸೇವೆಗಳನ್ನು ಬಲಪಡಿಸುವ ಯೋಜನೆಯ ಭಾಗವಾಗಿ ಮೈಸೂರಿಗೆ ಎರಡು ಮೊಬೈಲ್ ಫೊರೆನ್ಸಿಕ್ ವಾಹನಗಳು ಲಭಿಸಿವೆ. ಅಪರಾಧ ಸ್ಥಳದಲ್ಲಿ ಗುಣಮಟ್ಟದ ಸಾಕ್ಷ್ಯಗಳನ್ನು ತ್ವರಿತವಾಗಿ ಸಂಗ್ರಹಿಸಿ, ಸಂರಕ್ಷಿಸುವಲ್ಲಿ ಈ ವಾಹನವು ಮಹತ್ವದ ಪಾತ್ರ ವಹಿಸಲಿವೆ. ಮೊಬೈಲ್ ಫೊರೆನ್ಸಿಕ್ ಪ್ರಯೋಗಾಲಯಗಳು ಅಪರಾಧ ಸ್ಥಳದ ವೈಜ್ಞಾನಿಕ ಪರಿಶೀಲನೆ, ಸೂಕ್ತ ದಾಖಲೀಕರಣ, ಸಾಕ್ಷ್ಯಗಳ ಸಂರಕ್ಷಣೆ ಹಾಗೂ ಸುರಕ್ಷಿತ ಸಾಗಣೆಯನ್ನು ಸುಲಭಗೊಳಿಸಲಿವೆ. ಜಿಲ್ಲಾ ಮೊಬೈಲ್ ಫೊರೆನ್ಸಿಕ್ ವಾಹನವು ಜಿಲ್ಲಾ ಸಶಸ್ತ್ರ ಮೀಸಲು ಪಡೆ ಹಾಗೂ ಸೀನ್ ಆಫ್ ಕ್ರೈಂ ಅಧಿಕಾರಿಗಳ ಅಧೀನದಲ್ಲಿ ಕಾರ್ಯ ನಿರ್ವಹಿಸಲಿದೆ. ಸಾಕ್ಷ್ಯಾಧಾರಿತ ತನಿಖೆಗೆ ಇದು ಹೆಚ್ಚಿನ ಬಲ ನೀಡಲಿದ್ದು, ಅಪರಾಧ ಪ್ರಕರಣಗಳ ಶಿಕ್ಷೆ ಪ್ರಮಾಣವನ್ನು ಹೆಚ್ಚಿಸಲು ಸಹಕಾರಿಯಾಗಲಿದೆ.ಈ ಹಿಂದೆ ಕೊಲೆ, ದರೋಡೆ, ಪೋಕ್ಸೋ ಸೇರಿದಂತೆ ವಿವಿಧ ಪ್ರಕರಣಗಳಿಗೆ ಪ್ರತ್ಯೇಕ ಫೊರೆನ್ಸಿಕ್ ಕಿಟ್ ಗಳನ್ನು ಕೊಂಡೊಯ್ಯಬೇಕಾಗುತ್ತಿತ್ತು. ಆದರೆ, ಈ ಮೊಬೈಲ್ ಪ್ರಯೋಗಾಲಯದಲ್ಲಿ ವಿವಿಧ ರೀತಿಯ ಸಾಕ್ಷ್ಯ ಸಂಗ್ರಹ ಮತ್ತು ಪ್ರಾಥಮಿಕ ಪರೀಕ್ಷೆಗೆ ಪ್ರತ್ಯೇಕ ವಿಭಾಗಗಳನ್ನು ಕಲ್ಪಿಸಿರುವುದರಿಂದ ಒಂದೇ ವಾಹನದ ಮೂಲಕ ಸಂಪೂರ್ಣ ಅಪರಾಧ ಸ್ಥಳದ ಪರಿಶೀಲನೆ ನಡೆಸಲು ಸಾಧ್ಯವಾಗಲಿದೆ.ಈ ವಾಹನಗಳಲ್ಲಿ ರಕ್ತ, ಡಿಎನ್‌ಎ ಸೇರಿದಂತೆ ಜೈವಿಕ ಮಾದರಿಗಳನ್ನು ಸುರಕ್ಷಿತವಾಗಿ ಸಂರಕ್ಷಿಸಲು ಶೀತಲೀಕರಣ ವ್ಯವಸ್ಥೆ ಅಳವಡಿಸಲಾಗಿದೆ. ಅಲ್ಲದೆ, ಲ್ಯಾಪ್ ಟಾಪ್, ಡಿಜಿಟಲ್ ಫೊರೆನ್ಸಿಕ್ ಉಪಕರಣಗಳು, ಸ್ಥಳದಲ್ಲೇ ಪ್ರಾಥಮಿಕ ವಿಶ್ಲೇಷಣೆ ನಡೆಸಲು ಟಿವಿ ಮಾನಿಟರ್ ಗಳು, ಅಪರಾಧ ಸ್ಥಳದ ಸುತ್ತಮುತ್ತಲಿನ ಪ್ರದೇಶವನ್ನು ದಾಖಲಿಸಲು ರೂಫ್ ಟಾಪ್ ನಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಬೆರಳಚ್ಚು ಪರೀಕ್ಷೆ, ಬ್ಯಾಲಿಸ್ಟಿಕ್ಸ್, ಸ್ಫೋಟಕ ಹಾಗೂ ಮಾದಕ ವಸ್ತುಗಳ ಪತ್ತೆಗೆ ಅಗತ್ಯವಾದ ವಿಶೇಷ ಉಪಕರಣಗಳ ಜೊತೆಗೆ ತನಿಖೆಯ ಸಂದರ್ಭ ಅಗತ್ಯವಿದ್ದಲ್ಲಿ ಪೊಲೀಸ್ ಶ್ವಾನವನ್ನು ಸಾಗಿಸಲು ಪ್ರತ್ಯೇಕ ವ್ಯವಸ್ಥೆಯನ್ನು ಈ ವಾಹನಗಳಲ್ಲಿ ಕಲ್ಪಿಸಲಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.