ರಾಮನಗರ: ರಾಜ್ಯ ಸರ್ಕಾರ ಬಿಡದಿ ಟೌನ್ ಶಿಪ್ ಯೋಜನೆಗಾಗಿ ಬಲವಂತವಾಗಿ ಭೂಮಿ ಕಸಿದುಕೊಳ್ಳಲು ಮುಂದಾದರೆ ನರಗುಂದ ರೈತ ಬಂಡಾಯದಂತಹ ಘಟನೆ ಬಿಡದಿಯಲ್ಲಿಯೂ ಮರುಕಳಿಸುತ್ತದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಆ ಘಟನೆಗೆ ಮುನ್ನುಡಿ ಬರೆಯುವ ದುಸ್ಸಾಹಸಕ್ಕೆ ಕೈ ಹಾಕಬಾರದು ಎಂದು ಕರ್ನಾಟಕ ನವ ನಿರ್ಮಾಣ ಸೇನೆ ರಾಜ್ಯಾಧ್ಯಕ್ಷ ಭೀಮಾಶಂಕರ್ ಪಾಟೀಲ್ ಒತ್ತಾಯಿಸಿದರು.
ರಾಜ್ಯ ಸರ್ಕಾರ ರೈತ ಪರ, ಕನ್ನಡಿಗರ ಪರ ಇರಬೇಕು. ರಿಯಲ್ ಎಸ್ಟೇಟ್ ಸರ್ಕಾರ ಆಗಬಾರದು. ಬಿಡದಿಯಿಂದ ಕನ್ನಡಿಗರನ್ನು ಒಕ್ಕಲಿಬ್ಬಿಸುವುದು ಬೇಡ, ಆ ಜಾಗಕ್ಕೆ ಹೊರ ರಾಜ್ಯದ ಅನ್ಯಭಾಷಿಕರನ್ನು ತಂದು ಕೂರಿಸುವುದು ಏಕೆ? ರೈತರಿಗೆ ಇದೇ ರೀತಿ ತೊಂದರೆ ನೀಡಿದರೆ ಇದು ಸರ್ಕಾರದ ಅವನತಿಗೆ ಕಾರಣವಾಗಲಿದೆ. ಮುಖ್ಯಮಂತ್ರಿಗಳು ತಮ್ಮ ತವರು ಜಿಲ್ಲೆಯಲ್ಲಿ ರಿಯಲ್ ಎಸ್ಟೇಟ್ ಲೂಟಿಗೆ ಅವಕಾಶ ಮಾಡಿಕೊಡಬಾರದು ಎಂದು ಭೀಮಾಶಂಕರ್ ಪಾಟೀಲ್ ಹೇಳಿದರು.
ದರ್ಪ, ದೌರ್ಜನ್ಯ ತೋರಿಸಿ ರೈತರ ಭೂಮಿ ಕಸಿದುಕೊಳ್ಳಲು ಹೋಗಿದ್ದ ಅಧಿಕಾರಿಗಳಿಗೆ ರೈತ ಮಹಿಳೆಯರು ಪೊರಕೆ ಸೇವೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಒನಕೆ ಸೇವೆಯನ್ನೂ ಮಾಡುತ್ತಾರೆ. ಆ ರೈತರ ಹೋರಾಟ ಆಕ್ರೋಶದ ಕಿಚ್ಚಲ್ಲ, ಸ್ವಾಭಿಮಾನದ ಕಿಚ್ಚು. ತಮ್ಮ ಭೂಮಿಯನ್ನು ಕಿತ್ತುಕೊಳ್ಳಲು ಅಧಿಕಾರಿಗಳು ಬಂದಾಗ ಸ್ವಾಭಿಮಾನದಿಂದ ಹೋರಾಟ ನಡೆಸಿರುವ ರೈತರ ಮೇಲೆ ಯಾವುದೇ ಪ್ರಕರಣಗಳನ್ನು ದಾಖಲು ಮಾಡದೆ, ರೈತರಿಗೆ ಸರ್ಕಾರ ನೈತಿಕ ದೈರ್ಯ ತುಂಬಬೇಕು ಎಂದು ಹೇಳಿದರು.ಅಭಿವೃದ್ಧಿ ಹೆಸರಲ್ಲಿ ಬಲವಂತವಾಗಿ ಭೂಮಿಯನ್ನು ಕಸಿದುಕೊಂಡು ರೈತರನ್ನು ಬೀದಿಗೆ ತಳ್ಳುವುದು ಸರಿಯಲ್ಲ. ಅಭಿವೃದ್ಧಿ ಹೆಸರಿನಲ್ಲಿ ಕೆಐಎಡಿಬಿ, ಕೆಎಚ್‌ಬಿ ವತಿಯಿಂದ ವಶಪಡಿಸಿಕೊಂಡಿರುವ ರೈತರ ಜಮೀನು ಏನಾಗಿದೆ ಎಂಬ ದಾಖಲೆ ನಮ್ಮ ಕಣ್ಣಮುಂದಿವೆ. ಬಿಡದಿ ಭಾಗದ ಸಂತ್ರಸ್ತ ರೈತರ ಪರ ಕರ್ನಾಟಕ ನವನಿರ್ಮಾಣ ಸೇನೆ ಬೆಂಬಲವಾಗಿ ನಿಲ್ಲುವ ಜತೆಗೆ ನ್ಯಾಯ ದೊರಕಿಸಲು ಕಾನೂನು ಹೋರಾಟ ಮಾಡಲಿದೆ ಎಂದು ಹೇಳಿದರು.
ರೈತರು ಪಕ್ಷಾತೀತವಾಗಿ ಹೋರಾಟ ಮಾಡಬೇಕು. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎಂದು ಬಣಗಳಾದರೆ ಅನ್ಯಾಯ ಆಗಲಿದೆ. ರಾಜಕಾರಣಿಗಳ ಪ್ರಚೋದನೆಗೆ ಒಳಪಟ್ಟು ಭೂಮಿಯನ್ನು ಭ್ರಷ್ಟ ವ್ಯವಸ್ಥೆಯ ಕೈಗೆ ಕೊಟ್ಟು ಬದುಕನ್ನು ನಾಶ ಮಾಡಿಕೊಳ್ಳಬೇಡಿ ಎಂದು ಭೀಮಾಶಂಕರ್ ಪಾಟೀಲ್ ಮನವಿ ಮಾಡಿದರು.
ಬಾಕ್ಸ್...
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನಾನು ಮಾಜಿ ಸಿಎಂ ದಿವಂಗತ ಬಂಗಾರಪ್ಪ ಅವರ ಶಿಷ್ಯ ಎಂದು ಹೇಳಿಕೊಳ್ಳುತ್ತಾರೆ. ಅವರ ಹಾದಿಯಲ್ಲಿ ಸಾಗಬೇಕಿದ್ದ ಡಿಕೆಶಿ ಇಂದು ರೈತರ ಭೂಮಿಯನ್ನು ಕಸಿದುಕೊಳ್ಳಲು ಹೊರಟಿದ್ದಾರೆ. ಈ ಹಿಂದೆ ಸಾಲ ಮರುಪಾವತಿಸಲು ಬ್ಯಾಂಕ್‌ನವರು ರೈತರಿಗೆ ಕಿರಿಕಿರಿ ಕೊಡುತ್ತಿದ್ದಾಗ ಬಂಗಾರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ಕಠಿಣ ನಿಲುವು ತೆಗೆದುಕೊಂಡಿದ್ದರು. ಬ್ಯಾಂಕ್ ನವರು ಮನೆಗೆ ಬಂದರೆ ಕೊಟ್ಟಿಗೆಯಲ್ಲಿರುವ ಗೂಟವನ್ನು ಕಿತ್ತು ಹೊಡೆಯಿರಿ ಎಂದು ಕರೆ ನೀಡಿದ್ದನ್ನು ಇಂದಿನ ಸಿಎಂ ಡಿಕೆಶಿ ಸ್ಮರಿಸಬೇಕು. ಇದನ್ನು ನೆನಪಿಸಲು ಮುಂದಿನ ದಿನಗಳಲ್ಲಿ ವಿಧಾನಸೌಧದ ಎದುರು ಗೂಟದ ಚಳವಳಿ ಹಮ್ಮಿಕೊಳ್ಳುತ್ತೇವೆ ಎಂದು ಭೀಮಾಶಂಕರ್ ಪಾಟೀಲ್ ಎಚ್ಚರಿಕೆ ನೀಡಿದರು.
ಕರ್ನಾಟಕ ನವ ನಿರ್ಮಾಣ ಸೇನೆ ರಾಜ್ಯಾಧ್ಯಕ್ಷ ಭೀಮಾಶಂಕರ್ ಪಾಟೀಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.