ಅಧ್ಯಯನ, ಅನುಭವದಿಂದ ಉತ್ತಮ ಸಾಹಿತ್ಯ ಸೃಷ್ಟಿ ಸಾಧ್ಯ

KannadaprabhaNewsNetwork |  
Published : Sep 02, 2026, 02:15 AM IST
ಅಧ್ಯಯನ, ಅನುಭವದಿಂದ ಉತ್ತಮ ಸಾಹಿತ್ಯ ಸೃಷ್ಟಿ ಸಾಧ್ಯ: ನಾಡೋಜ ಬರಗೂರು ರಾಮಚಂದ್ರಪ್ಪ ಪಟ್ಟನಾಯಕನಹಳ್ಳಿ ಶಾಂತಿನಿಕೇತನ ಪಬ್ಲಿಕ್ ಸ್ಕೂಲ್‌ನಲ್ಲಿ ಸಾಹಿತ್ಯ ಸಂವಾದ ಕಾರ್ಯಕ್ರಮ | Kannada Prabha

ಸಾರಾಂಶ

ಅಧ್ಯಯನದಿಂದ ಮಾತ್ರ ಉತ್ತಮ ಸಾಹಿತ್ಯ ಸೃಷ್ಟಿಸಲು ಸಾಧ್ಯವಿಲ್ಲ. ಅಧ್ಯಯನದ ಜೊತೆಗೆ ಅನುಭವ ಹಾಗೂ ಅದನ್ನು ಸಮರ್ಥವಾಗಿ ಅಭಿವ್ಯಕ್ತಿಸುವ ಸಾಮರ್ಥ್ಯ ಹೊಂದಿದಾಗ ಮಾತ್ರ ಪರಿಣಾಮಕಾರಿ ಮತ್ತು ಉತ್ತಮವಾದ ಸಾಹಿತ್ಯವನ್ನು ನೀಡಲು ಸಾಧ್ಯ ಎಂದು ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಶಿರಾ

ಅಧ್ಯಯನದಿಂದ ಮಾತ್ರ ಉತ್ತಮ ಸಾಹಿತ್ಯ ಸೃಷ್ಟಿಸಲು ಸಾಧ್ಯವಿಲ್ಲ. ಅಧ್ಯಯನದ ಜೊತೆಗೆ ಅನುಭವ ಹಾಗೂ ಅದನ್ನು ಸಮರ್ಥವಾಗಿ ಅಭಿವ್ಯಕ್ತಿಸುವ ಸಾಮರ್ಥ್ಯ ಹೊಂದಿದಾಗ ಮಾತ್ರ ಪರಿಣಾಮಕಾರಿ ಮತ್ತು ಉತ್ತಮವಾದ ಸಾಹಿತ್ಯವನ್ನು ನೀಡಲು ಸಾಧ್ಯ ಎಂದು ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ಅವರು ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿಯ ಶಾಂತಿನಿಕೇತನ ಪಬ್ಲಿಕ್ ಸ್ಕೂಲ್‌ನ ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ ಸಭಾಂಗಣದಲ್ಲಿ ನಾಡೋಜ ಬರಗೂರು ಮೇಷ್ಟ್ರು ಬಳಗ ಹಾಗೂ ಶಿರಾ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಾಹಿತ್ಯ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಾಹಿತ್ಯ ಸೃಷ್ಟಿಗೆ ಕೇವಲ ಕಲ್ಪನೆ ಅಥವಾ ಭಾಷಾ ಜ್ಞಾನವಷ್ಟೇ ಸಾಕಾಗುವುದಿಲ್ಲ. ಬದುಕಿನ ಅನುಭವಗಳನ್ನು ಸೂಕ್ಷ್ಮವಾಗಿ ಗಮನಿಸುವ ಮನಸ್ಸು, ಆ ಅನುಭವಗಳ ಹಿಂದಿರುವ ಸಾಮಾಜಿಕ ವಾಸ್ತವಗಳನ್ನು ಅರಿಯುವ ಅಧ್ಯಯನ ಮತ್ತು ತನ್ನ ಆಲೋಚನೆಗಳನ್ನು ಪರಿಣಾಮಕಾರಿಯಾಗಿ ಅಭಿವ್ಯಕ್ತಿಸುವ ಸಾಮರ್ಥ್ಯ ಈ ಮೂರೂ ಒಂದಾಗಬೇಕು. ಆಗ ಮಾತ್ರ ನಿಜವಾದ ಸಾಹಿತ್ಯ ಸೃಷ್ಟಿಯಾಗಲು ಸಾಧ್ಯ ಎಂದು ಹೇಳಿದರು.

ಸಾಹಿತ್ಯಕ್ಕೆ ಸಮಾಜದಲ್ಲಿನ ಬದಲಾವಣೆಗಳು, ಜನಜೀವನ, ಸಾಮಾಜಿಕ ಸಮಸ್ಯೆಗಳು, ಸಾಂಸ್ಕೃತಿಕ ಪರಂಪರೆ ಹಾಗೂ ಸಮಕಾಲೀನ ಬೆಳವಣಿಗೆಗಳನ್ನು ಲೇಖಕರು ಅರಿತುಕೊಳ್ಳಬೇಕು. ಈ ರೀತಿಯ ಅಧ್ಯಯನ ಮತ್ತು ಅನುಭವವನ್ನು ಸೃಜನಶೀಲ ಅಭಿವ್ಯಕ್ತಿಯೊಂದಿಗೆ ಜೋಡಿಸಿದಾಗ ಸಾಹಿತ್ಯಕ್ಕೆ ಆಳ ಮತ್ತು ಅರ್ಥಪೂರ್ಣತೆ ದೊರೆಯುತ್ತದೆ ಎಂದರು.

ಕನ್ನಡ ಸಾಹಿತ್ಯ ಪರಂಪರೆ ಮತ್ತು ಸಮಕಾಲೀನ ಪ್ರಜ್ಞೆ ಎಂಬ ವಿಷಯದ ಕುರಿತು ಚಿತ್ರದುರ್ಗ ಸರ್ಕಾರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಕರಿಯಪ್ಪ ಮಾಳಿಗೆ ಮಾತನಾಡಿದರು. ಕನ್ನಡ ಸಾಹಿತ್ಯದ ಶ್ರೀಮಂತ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವುದರ ಜೊತೆಗೆ ಸಮಕಾಲೀನ ಸಮಾಜದ ಪ್ರಶ್ನೆಗಳಿಗೆ ಸ್ಪಂದಿಸುವ ಅಗತ್ಯವಿದೆ. ಸಾಹಿತ್ಯ ಪರಂಪರೆಯ ಅರಿವಿನೊಂದಿಗೆ ಇಂದಿನ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಮಾನವೀಯ ವಿಚಾರಗಳನ್ನು ಅರ್ಥೈಸಿಕೊಂಡು ಬರವಣಿಗೆ ನಡೆಸಿದಾಗ ಸಾಹಿತ್ಯ ಹೆಚ್ಚು ಪ್ರಸ್ತುತವಾಗುತ್ತದೆ ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿರಾ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಪಿ. ಪಾಂಡುರಂಗಯ್ಯ ವಹಿಸಿ ಮಾತನಾಡಿ ಸಾಹಿತಿಗಳಿಗೆ ಭಾಷಾ ಜ್ಞಾನ ಸಾಮಾಜಿಕ ಕಳಕಳಿ ಇರಬೇಕು. ಸಾಹಿತ್ಯ ಗೊಡ್ಡು ಸಂಪ್ರದಾಯಗಳಿಗೆ ಮಣಿದು ಬರೆಯುವಂತಾಗಬಾರದು. ಸಾಹಿತ್ಯ ಪರವಾಗಿರಬೇಕು. ಅನ್ಯಾಯವನ್ನು, ಶೋಷಣೆಯನ್ನು, ಜಾತಿಯನ್ನು ವಿರೋಧಿಸುವಂತಹ ಸಾಹಿತ್ಯ ಇಂದಿನ ದಿನಮಾನಗಳಲ್ಲಿ ಅಗತ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಆರ್.ಡಿ.ಪಿ.ಆರ್. ನಿವೃತ್ತ ನಿದೇಶಕ ಡಾ. ಭುವನಹಳ್ಳಿ ನಾಗರಾಜ್, ಸಾಹಿತಿಗಳಾದ ಡಾ. ಶೈಲಾ ನಾಗರಾಜ್, ಉಪನ್ಯಾಸಕರಾದ ಡಾ. ನಾಗರಾಜು ಬಗ್ಗನಡು, ಮಾಜಿ ಕಸಾಪ ಅಧ್ಯಕ್ಷ ನರೇಶ್ ಬಾಬು, ಬರಗೂರು ಮೇಷ್ಟು ಬಳಗದ ರೂಪೇಶ್ ಕೃಷ್ಣಯ್ಯ, ಹೆಂದೊರೆ ಶಿವಣ್ಣ, ಜಯರಾಮಕೃಷ್ಣ, ಶ್ರೀರಂಗ, ದ್ವಾರನಕುಂಟೆ ಲಕ್ಷ್ಮಣ್, ಸಕ್ಕರ ನಾಗರಾಜು, ಉಪನ್ಯಾಸಕ ಡಾ ಶಂಕರ್ ಸೇರಿದಂತೆ ತಾಲೂಕಿನ ಸಾಹಿತಿಗಳು, ಯುವ ಸಾಹಿತಿಗಳು, ಲೇಖಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈತರಿಗೆ ₹18 ಕೋಟಿ ಪರಿಹಾರ ಶೀಘ್ರದಲ್ಲೇ ಮಂಜೂರು: ಸಚಿವ ಪ್ರಿಯಾಂಕ್ ಖರ್ಗೆ
ದೋಬಿಘಾಟ್ ಆರೋಗ್ಯ ಕೇಂದ್ರ ಶೀಘ್ರ ಉದ್ಘಾಟನೆ