ಕೊಪ್ಪಳ ಭಾಗದಲ್ಲಿ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ನಿರ್ಮಿಸುವ ಉದ್ದೇಶದಿಂದ ಸರ್ಕಾರಕ್ಕೆ ಈಗಾಗಲೇ ಅನೇಕ ಬಾರಿ ಮನವಿ ಮಾಡಿದ್ದು ಮುಂಬರುವ ಬಜೆಟ್‌ನಲ್ಲಿ ಕೊಪ್ಪಳ ಕ್ಷೇತ್ರಕ್ಕೆ ಆಸ್ಪತ್ರೆ ಘೋಷಣೆಯ ಭರವಸೆ ಇದೆ ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದ್ದಾರೆ.
ಕೊಪ್ಪಳ:
ಕ್ಷೇತ್ರದ ಪ್ರತಿಯೊಬ್ಬರಿಗೂ ಗುಣಮಟ್ಟದ ಚಿಕಿತ್ಸಾ ಸೌಲಭ್ಯ ಕಲ್ಪಿಸಲು ಕ್ರಮಕೈಗೊಳ್ಳಲಾಗುವುದು ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹೇಳಿದರು.
ತಾಲೂಕಿನ ಗಿಣಿಗೇರಾ ಜಿಪಂ ಕ್ಷೇತ್ರ ವ್ಯಾಪ್ತಿಯ ಗಬ್ಬೂರು, ಗುಳದಳ್ಳಿ ಮತ್ತು ಕೆರೆಹಳ್ಳಿ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡ ವಿವಿಧ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ ಬೆಳವಣಿಗೆ ದೃಷ್ಟಿಯಿಂದ ಕ್ಷೇತ್ರಕ್ಕೆ ಸಾವಿರಾರು ಕೋಟಿ ರೂಪಾಯಿ ಅನುದಾನ ಬಿಡುಗಡೆಗೊಳಿಸಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ನಮ್ಮ ಭಾಗದಲ್ಲಿ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ನಿರ್ಮಿಸುವ ಉದ್ದೇಶದಿಂದ ಸರ್ಕಾರಕ್ಕೆ ಈಗಾಗಲೇ ಅನೇಕ ಬಾರಿ ಮನವಿ ಮಾಡಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗಮನಕ್ಕೂ ತಂದಿದ್ದು, ಮುಂಬರುವ ಬಜೆಟ್‌ನಲ್ಲಿ ಕೊಪ್ಪಳ ಕ್ಷೇತ್ರಕ್ಕೆ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ಘೋಷಣೆಯ ಭರವಸೆ ನೀಡಿದ್ದಾರೆ ಎಂದರು.
ಕಳೆದ ಎರಡು ಅವಧಿಯ ಆಡಳಿತದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿದ್ದೇನೆ. ಮತ್ತೊಮ್ಮೆ ನನ್ನ ಮೇಲೆ ಭರವಸೆಯನ್ನಿಟ್ಟು ಮೂರನೇ ಬಾರಿಗೆ ಆಯ್ಕೆ ಮಾಡಿದಕ್ಕೆ ಕ್ಷೇತ್ರದ ಜನತೆಗೆ ಋಣಿಯಾಗಿರುವೆ ಎಂದ ಅವರು, ಕ್ಷೇತ್ರದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ₹ 135 ಕೋಟಿ ವೆಚ್ಚದಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣ, ₹ 192 ಕೋಟಿ ವೆಚ್ಚದಲ್ಲಿ 450 ಬೆಡ್ ಆಸ್ಪತ್ರೆ, ₹ 295 ಕೋಟಿ ಅನುದಾನದಡಿ ಕೊಪ್ಪಳ ಮತ್ತು ಯಲಬುರ್ಗಾ ತಾಲೂಕಿನ ಕೆರೆ ತುಂಬಿಸುವ ಯೋಜನೆ, ₹ 245 ಕೋಟಿ ವೆಚ್ಚದಲ್ಲಿ 104 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಯೋಜನೆಗೆ ಟೆಂಡರ್ ಕರೆಯಲಾಗಿದ್ದು, ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಶಾಸಕರು ತಿಳಿಸಿದರು.
ಕೆಕೆಆರ್‌ಡಿಬಿ ಯೋಜನೆಯಡಿ ಕ್ಷೇತ್ರಕ್ಕೆ ₹ 65 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಕ್ಷೇತ್ರದ 104 ಗ್ರಾಮಗಳಲ್ಲಿ ಸಿಸಿ ರಸ್ತೆ, ಚರಂಡಿ, ಶಾಲಾ ಕೊಠಡಿ ನಿರ್ಮಾಣ ಸೇರಿದಂತೆ ಇತರೆ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಬರುವ ದಿನಗಳಲ್ಲಿ ಕ್ಷೇತ್ರಕ್ಕೆ ಮತ್ತಷ್ಟು ಅನುದಾನ ತಂದು ಅಭಿವೃದ್ಧಿ ಮಾಡುವೆ. ಕಾಂಗ್ರೆಸ್ ಸರ್ಕಾರ ಪಂಚ ಕಲ್ಯಾಣಗಳ ಜತೆಗೆ ರಾಜ್ಯದ ಪ್ರತಿಯೊಂದು ಗ್ರಾಮಕ್ಕೂ ಅನುದಾನ ಒದಗಿಸಿ, ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸುವುದಿಲ್ಲ ಎಂದು ಇದೇ ವೇಳೆ ಶಾಸಕರು ಸ್ಪಷ್ಟಪಡಿಸಿದರು.
ಪ್ರತಿಯೊಬ್ಬರಿಗೂ ಸೂರು:
ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ಒಂದೇ ಒಂದು ಮನೆ ಕೊಡಲಿಲ್ಲ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ರಾಜ್ಯಾದ್ಯಂತ ಲಕ್ಷಾಂತರ ಬಡಜನರಿಗೆ ಸೂರು ಒದಗಿಸುವ ಕೆಲಸ ಮಾಡಿದೆ. ಕೊಪ್ಪಳ ಕ್ಷೇತ್ರದಲ್ಲಿ ಶೈಕ್ಷಣಿಕ ವರ್ಷದಲ್ಲಿ 45 ಮನೆ ನೀಡಿದ್ದು, ಬರುವ ದಿನದಲ್ಲಿ ಸೂರು ಇಲ್ಲದ ಪ್ರತಿಯೊಬ್ಬ ವ್ಯಕ್ತಿಗೂ ಸೂರು ಒದಗಿಸುವ ಕೆಲಸ ಮಾಡುವೆ ಎಂದರು.
ಕ್ಷೇತ್ರದ ಬಹುತೇಕ ಗ್ರಾಮಗಳಲ್ಲಿ ರಾಷ್ಟ್ರೀಯ ಜಲಜೀವನ ಮಿಷನ್ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ, ಹೀಗಾಗಿ ಕಳಪೆ ಕಾಮಗಾರಿ ನಡೆಸಿದ ಗುತ್ತಿಗೆದಾರರನ್ನು ಕೈಬಿಟ್ಟು, ಹೊಸಬರಿಗೆ ಗುತ್ತಿಗೆ ಕಾಮಗಾರಿ ನೀಡಿ, ಯೋಜನೆ ಪೂರ್ಣಗೊಳಿಸಲು ಸಂಬಂಧಿಸಿದ ಅಧಿಕಾರಿಗಳು ತುರ್ತು ಕ್ರಮಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.
ಈ ವೇಳೆ ಜಿಪಂ ಮಾಜಿ ಸದಸ್ಯ ಗೂಳಪ್ಪ ಹಲಿಗೇರಿ, ಗ್ಯಾರಂಟಿ ಸಮಿತಿ ತಾಲೂಕಾಧ್ಯಕ್ಷ ಬಾಲಚಂದ್ರನ್, ಗುಳದಳ್ಳಿ ಗ್ರಾಪಂ ಅಧ್ಯಕ್ಷೆ ಈರಮ್ಮ ಕಿಡದಾಳ, ಅಲಿಸಾಬ್, ಅಣ್ಣಪ್ಪ ಗಬ್ಬೂರು, ಗುಡದಪ್ಪ ಗುಡದಳ್ಳಿ, ಲಕ್ಷ್ಮಣ ಗುಡದಳ್ಳಿ, ರಮೇಶ ಹೊಳೆಯಾಚಿ, ಪರಸಪ್ಪ ಕೆರೆಹಳ್ಳಿ, ಸುರೇಶ ಕೆರೆಹಳ್ಳಿ, ಸೋಮಲಿಂಗಪ್ಪ ಹುಡೇದ, ಕರಿಯಪ್ಪ ಕಂಬಳಿ, ತಾಪಂ ಇಒ ದುಂಡೇಶ ತುರಾದಿ ಸೇರಿದಂತೆ ಇತರರು ಉಪಸ್ಥಿತರಿದ್ದರು.6ಕೆಪಿಎಲ್23ಕೊಪ್ಪಳ ತಾಲೂಕಿನ ಕೆರೆಹಳ್ಳಿ ಗ್ರಾಮದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಶುಕ್ರವಾರ ಭೂಮಿಪೂಜೆ ನೆರವೇರಿಸಿ, ಚಾಲನೆ ನೀಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.