ಗುಣಮಟ್ಟದ ರಸ್ತೆ ನಿರ್ಮಾಣ ಅಗತ್ಯ: ಶಾಸಕ ಡಾ.ಮಂತರ್ ಗೌಡ

KannadaprabhaNewsNetwork |  
Published : Sep 15, 2025, 01:01 AM IST
ರಸ್ತೆ ಅಭಿವೃದ್ಧಿ ಹಾಗೂ ರಸ್ತೆ ಅಗಲೀಕರಣ ಕಾಮಗಾರಿಗೆ  ಚಾಲನೆ | Kannada Prabha

ಸಾರಾಂಶ

ಕೂಡಿಗೆ ಗ್ರಾಮದಿಂದ ಹೆಬ್ಬಾಲೆವರೆಗೆ 3.80 ಕೋಟಿ ರು. ವೆಚ್ಚದಲ್ಲಿ ಕೈಗೊಂಡಿರುವ ರಸ್ತೆ ಅಭಿವೃದ್ಧಿ ಹಾಗೂ ರಸ್ತೆ ಅಗಲೀಕರಣ ಕಾಮಗಾರಿಗೆ ಚಾಲನೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಕುಶಾಲನಗರಕುಶಾಲನಗರ ತಾಲೂಕಿನ ಹಾರಂಗಿ ಜಲಾಶಯದ ಬಾಕಿ ಉಳಿದ 7 ಕಿಲೋಮೀಟರ್ ಉದ್ದದ ಎಡದಂಡೆ ಮುಖ್ಯ ನಾಲೆಯ ಆಧುನೀಕರಣ ಕಾಮಗಾರಿ ಸದ್ಯದಲ್ಲಿಯೇ ಆರಂಭಗೊಳ್ಳಲಿದ್ದು, 50 ಕೋಟಿ ರು. ವೆಚ್ಚದಲ್ಲಿ ತೂಬುಗಳ ಅಭಿವೃದ್ಧಿ ಕಾರ್ಯ ನಡೆಯಲಿದೆ ಎಂದು ಶಾಸಕ ಡಾ.ಮಂತರ್ ಗೌಡ ಹೇಳಿದರು.ಸಮೀಪದ ಕೂಡಿಗೆ ಗ್ರಾಮದಿಂದ ಹೆಬ್ಬಾಲೆ ವರೆಗೆ 3.80 ಕೋಟಿ ರು. ವೆಚ್ಚದಲ್ಲಿ ಕೈಗೊಂಡಿರುವ ರಸ್ತೆ ಅಭಿವೃದ್ಧಿ ಹಾಗೂ ರಸ್ತೆ ಅಗಲೀಕರಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.ಮಡಿಕೇರಿ - ಹಾಸನ ಹೆದ್ದಾರಿ ರಸ್ತೆಯಲ್ಲಿ ದಿನನಿತ್ಯ ನೂರಾರು ಸಂಖ್ಯೆಯ ವಾಹನ‌ಗಳು ಓಡಾಡುತ್ತಿವೆ. ಆದ್ದರಿಂದ ಗುಣಮಟ್ಟದ ರಸ್ತೆ ನಿರ್ಮಾಣ ಅಗತ್ಯವಿದೆ ಎಂದು ಹೇಳಿದರು. ಮಳೆ ಸಂದರ್ಭ ಡಾಂಬರು ಹಾಕಬೇಡಿ, ಇತರೆ ಕೆಲಸಗಳನ್ನು ಮುಗಿಸಿ ಬಿಸಿಲಿನಲ್ಲಿ ಡಾಂಬರೀಕರಣ ಕೈಗೊಳ್ಳಬೇಕು ಎಂದರು. ಅದೇ ರೀತಿ ಕೂಡಿಗೆ ಯಿಂದ ಕುಶಾಲನಗರದ ವರೆಗೆ ರಸ್ತೆ ಸಂಪೂರ್ಣ ಹಾನಿಯಾಗಿ ಗುಂಡಿ ಬಿದ್ದಿದೆ. ಈ ರಸ್ತೆಗಳ ಗುಂಡಿ ಮುಚ್ಚುವ ಕೆಲಸ ಕೂಡ ನಡೆಯುತ್ತಿದೆ ಎಂದರು.ಅಭಿವೃದ್ಧಿಗೆ ಒತ್ತು ನೀಡುತ್ತೇನೆ:

ಮುಖ್ಯ ರಸ್ತೆ ಉತ್ತಮವಾಗಿ ಇಟ್ಟುಕೊಳ್ಳಬೇಕು. ತೀವ್ರ ಹದಗೆಟ್ಟಿರುವ ಕಣಿವೆ ಯಿಂದ ಯಲಕನೂರು ವರೆಗಿನ ರಸ್ತೆ ಅಭಿವೃದ್ದಿಗೆ 15 ಕೋಟಿ ರು. ಮಂಜೂರು ಆಗಿದೆ. ಜೊತೆಗೆ ಸೇತುವೆ ನಿರ್ಮಾಣಕ್ಕೂ 3 ಕೋಟಿ ರು. ಅನುದಾನ ಒದಗಿಸಲಾಗುತ್ತದೆ. ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳಗೋಟೆ ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೂ ಕ್ರಮ ಕೈಗೊಳ್ಳುತ್ತೇನೆ. ಇನ್ನೂ ಹೆಚ್ಚಿನ ಅನುದಾನ ತರಲು ಶ್ರಮಿಸುತ್ತೇನೆ. ಅಭಿವೃದ್ಧಿಗೆ ಒತ್ತು ನೀಡುತ್ತೇನೆ ಎಂದರು.ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನೇಕ ಸಮಸ್ಯೆಗಳು ಇವೆ. ಕಾಡಾನೆ ಹಾವಳಿ ಹಾಗೂ ತೀವ್ರ ಹದಗೆಟ್ಟ ರಸ್ತೆ ಸಮಸ್ಯೆಗಳ ಪರಿಹಾರಕ್ಕೆ ಶಾಸಕರು ಕ್ರಮ ಕೈಗೊಂಡಿದ್ದಾರೆ. ಹಳೆಕೂಡಿಗೆ ಭಾಗದಲ್ಲಿ ಕಾಂಕ್ರೀಟ್ ರಸ್ತೆ ನೆನೆಗುದ್ದಿಗೆ ಬಿದ್ದಿದೆ. ಈ ಸಾಲಿನಲ್ಲಿ ಈ ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಈ ಹಿಂದೆ ನೀರಾವರಿ ಇಲಾಖೆ ಮೂಲಕ ಕಾಲುವೆ, ಸೇತುವೆ ಹಾಗೂ ರಸ್ತೆಗಳ ಅಭಿವೃದ್ಧಿ ಮಾಡಲು ಅವಕಾಶ ಇತ್ತು. ಆದರೆ ಈಗ ನೀರಾವರಿ ಇಲಾಖೆಗೆ ಚರಂಡಿ ಹಾಗೂ ರಸ್ತೆ ಅಭಿವೃದ್ಧಿಗೆ ಅವಕಾಶ ನೀಡಿಲ್ಲ. ಇದರಿಂದ ನಾಲೆ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿಗೆ ಹಿನ್ನೆಡೆಯಾಗಿದೆ. ಆದ್ದರಿಂದ ಈ ಬಗ್ಗೆ ಶಾಸಕರು ಸರ್ಕಾರದ ಗಮನ ಸೆಳೆಯಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭ ಕೂಡಿಗೆ ಗ್ರಾಮ ಪಂಚಾಯಿತಿ ಸದಸ್ಯ ಟಿ.ಪಿ.ಹಮೀದ್, ಅರುಣ್ ರಾವ್, ಅನಂತ್, ಎಚ್.ಎಸ್.ರವಿ, ಶಿವಕುಮಾರ್, ಮೋಹಿನಿ ಮಾಜಿ ಅಧ್ಯಕ್ಷೆ ಶೋಭಾಪುಟ್ಟಪ್ಪ, ಲೋಕೋಪಯೋಗಿ ಇಲಾಖೆ ಸಹಾಯ ಕಾರ್ಯಪಾಲಕ ಎಂಜಿನಿಯರ್ ಕುಮಾರ್ ಹಾಗೂ ಕಾಂಗ್ರೆಸ್ ಮುಖಂಡರು ಪಾಲ್ಗೊಂಡಿದ್ದರು.ಬಾಬು ಜಗಜೀವನ್ ರಾಮ್ ವೃತ್ತಕ್ಕೆ ಶಂಕುಸ್ಥಾಪನೆ :

ಪಟ್ಟಣದ ಟಾಟಾ ಪೆಟ್ರೋಲ್ ಪಂಪ್ ಎದುರುಗಡೆಯ ಕಾಳಮ್ಮಕಾಲೋನಿ ಬಳಿ ಪುರಸಭೆ ವತಿಯಿಂದ 6.5 ಲಕ್ಷ ರು. ವೆಚ್ಚದಲ್ಲಿ ಕೈಗೊಂಡಿರುವ ಹಸಿರು ಕ್ರಾಂತಿಯ ಹರಿಕಾರ ಮಾಜಿ ಉಪ ಪ್ರಧಾನಿ ಬಾಬು ಜಗಜೀವನ್ ರಾಮ್ ಅವರ ಸರ್ಕಲ್ ನಿರ್ಮಾಣಕ್ಕೆ ಶಾಸಕ ಡಾ. ಮಂತರ್ ಗೌಡ ಭೂಮಿ ಪೂಜೆ ನೆರವೇರಿಸಿದರು. ಪುರಸಭೆ ಸದಸ್ಯ ಸಮುದಾಯದ ಮುಖಂಡ ಶಿವಶಂಕರ್ ನೇತೃತ್ವದಲ್ಲಿ ಶಂಕುಸ್ಥಾಪನೆ ಕಾರ್ಯ ನಡೆಯಿತು. ವಾದ್ಯಗೋಷ್ಠಿಗಳೊಂದಿಗೆ ಶಾಸಕರನ್ನು ಸ್ವಾಗತಿಸಲಾಯಿತು. ಗ್ರಾಮಸ್ಥರ ವತಿಯಿಂದ ಶಾಸಕರು ಹಾಗೂ ಪುರಸಭೆ ಅಧ್ಯಕ್ಷೆ, ಸದಸ್ಯರು, ಮುಖ್ಯಾಧಿಕಾರಿ ಹಾಗೂ ಕಾಂಗ್ರೆಸ್ ಮುಖಂಡರನ್ನು ಸನ್ಮಾನಿಸಿ ಗೌರವಿಸಿದರು.ಈ ಸಂದರ್ಭ ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿ ಚಂದ್ರು, ಉಪಾಧ್ಯಕ್ಷೆ ಪುಟ್ಟಲಕ್ಷ್ಮಿ, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಸದಸ್ಯರಾದ ಖಾಲಿಮುಲ್ಲಾ, ಬಿ.ಜೈವರ್ಧನ್, ಸುರೇಯಾಬಾನು, ನಾಮನಿರ್ದೇಶಿತ ಸದಸ್ಯ ಎಂ.ವಿ.ಹರೀಶ್, ಎಂ.ಎಂ.ಪ್ರಕಾಶ್, ಜಗದೀಶ್, ನವೀನ್ ಕುಮಾರ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಮುಖ್ಯಾಧಿಕಾರಿ ಗಿರೀಶ್, ಗುತ್ತಿಗೆದಾರ ಅಜೀಜ್ ಇತರರು ಇದ್ದರು.ಕಾಲೇಜು ಕಟ್ಟಡ ಉದ್ಘಾಟನೆ: ಕುಶಾಲನಗರ ಸರ್ಕಾರಿ ಎಂಜಿನಿಯರ್ ಕಾಲೇಜಿನಲ್ಲಿ ಕಮಾನು, ತಡೆಗೋಡೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಶಾಸಕರು ನೂತನವಾಗಿ ನಿರ್ಮಾಣಗೊಂಡಿರುವ ಸಿವಿಲ್ ವಿಭಾಗದ ಹೆಚ್ಚುವರಿ ಕಟ್ಟಡ, ಪ್ರಯೋಗಾಲಯದ ಕಟ್ಟಡವನ್ನು ಉದ್ಘಾಟಿಸಿದರು. ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

PREV

Recommended Stories

ಟಿಕೆಟ್ ಆಯ್ತು, ಮಲ್ಟಿಪ್ಲೆಕ್ಸ್‌ಗಳಲ್ಲಿ ತಿಂಡಿ ದರ ಇಳಿಸಿ : ಸಿನಿ ಪ್ರಿಯರು
ಮಂಗಳಮುಖಿಯರು, ಮಹಿಳೆಯರಿಗೆ ಸರ್ಕಾರದಿಂದಲೇ ಉಚಿತ ಆಟೋ