ದಾಬಸ್‌ಪೇಟೆ: ಉತ್ತಮ ಇಳುವರಿ ಪಡೆಯಲು ಗುಣಮಟ್ಟದ ಬೀಜೋಪಚಾರಗಳ ಬಳಕೆ ಅತಿ ಮುಖ್ಯ ಎಂದು ಸಹಾಯಕ ಕೃಷಿ ನಿರ್ದೇಶಕ ಸಿದ್ದಲಿಂಗಯ್ಯ ತಿಳಿಸಿದರು.
ರೈತರು ಎಫ್‌ಐಡಿ ಮಾಡಿಸಿ:ಸೋಂಪುರ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಪ್ರಭು ಮಾತನಾಡಿ, ಆಹಾರ ಮತ್ತು ಪೌಷ್ಟಿಕ ಭದ್ರತಾ ಯೋಜನೆಯಡಿ ಸೋಂಪುರ ಹೋಬಳಿಯ ಕುಂಟಬೊಮ್ಮನಹಳ್ಳಿ, ಬರಗೂರು, ಮದಗ ಗ್ರಾಮಗಳಲ್ಲಿ 117 ಹೆಕ್ಟೇರ್‌ನಲ್ಲಿ ರಾಗಿ ಹಾಗೂ 35 ಹೆಕ್ಟೇರ್‌ನನಲ್ಲಿ ತೊಗರಿ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಅನುಷ್ಟಾನ ಮಾಡಲಾಗುತ್ತಿದೆ. ಈ ಬಾರಿ ಮುಂಗಾರು ಮಳೆ ಉತ್ತಮವಾಗಿದ್ದು ಉತ್ತಮ ಬೆಳೆ ನಿರೀಕ್ಷೆ ಇದೆ. ರೈತರು ಕಡ್ಡಾಯವಾಗಿ ಎಫ್‌ಐಡಿ ಮಾಡಿಸಿ ಸರ್ಕಾರದ ಸೌಲಭ್ಯ ಪಡೆಯಬೇಕು ಎಂದು ಕರೆ ನೀಡಿದರು.
ಸಿಂಜೆಂಟಾ ಕಂಪನಿಯ ವಾಹಿದ್ ಮಾತನಾಡಿ, ರೈತರು ಕ್ರಿಮಿಕೀಟ ನಾಶಕ ಸಿಂಪಡಿಸುವಾಗ ಮೂಗು, ಬಾಯಿಗೆ ಮಾಸ್ಕ್ ಧರಿಸಿರಬೇಕು, ಕಣ್ಣಿಗೆ ಕನ್ನಡಕ ಹಾಗೂ ಕೈಗವಸು ಧರಿಸುವುದು ಅಗತ್ಯ. ಕನಿಷ್ಟ ಮೂರು ದಿನಗಳ ಕಾಲ ಬೆಳೆಗಳ ಒಳಗೆ ಹೋಗಬಾರದು ಎಂದು ಕೀಟನಾಶಕ ಸಿಂಪಡಿಸುವ ಪ್ರಾತ್ಯಕ್ಷಿಕೆ ಪ್ರದರ್ಶಿಸಿ ರೈತರಿಗೆ ಕಿವಿಮಾತು ಹೇಳಿದರು.ಈ ಸಂದರ್ಭದಲ್ಲಿ ರೈತ ಮುಖಂಡರಾದ ಹನುಮಂತರಾಜು, ರಂಗಣ್ಣ, ಮಾರುತಿ, ನರಸಿಂಹಯ್ಯ, ರಘು, ಸಿಂಜೆಂಟಾ ಕಂಪನಿಯ ಅಂಜನಪ್ಪ, ಕೃಷಿ ಅಧಿಕಾರಿ ಶಭಾನಾ ಡಿ ನದಾಫ್, ಜಲಾನಯನ ಸಹಾಯಕ ಕೆಂಪರಾಜು, ವೀಣಾ ಸೇರಿದಂತೆ ರೈತರು ಉಪಸ್ಥಿತರಿದ್ದರು.ಪೋಟೋ 1 : ಕುಂಟಬೊಮ್ಮನಹಳ್ಳಿಯಲ್ಲಿ ಕೃಷಿ ಇಲಾಖೆ ಆಯೋಜಿಸಿದ್ದ ಬೀಜೋಪಚಾರ ಮತ್ತು ಸುರಕ್ಷಿತ ಕೀಟನಾಶಕಗಳ ಬಳಕೆ ಕುರಿತ ತರಬೇತಿ ಕಾರ್ಯಕ್ರಮವನ್ನು ಸಹಾಯಕ ಕೃಷಿ ನಿರ್ದೇಶಕ ಸಿದ್ದಲಿಂಗಯ್ಯ ಉದ್ಘಾಟಿಸಿದರು.