ಬಿಸಿಲ ತೀವ್ರತೆಗೆ ಕ್ವಾರಿ ಸ್ಫೋಟಕ ವಸ್ತುಗಳು ಸ್ಫೋಟ :15ಕ್ಕೂ ಅಧಿಕ ಮನೆಗಳಿಗೆ ಹಾನಿ

KannadaprabhaNewsNetwork |  
Published : Mar 05, 2025, 12:31 AM IST
ವಿಟ್ಲ ಮಾಡತ್ತಡ್ಕದಲ್ಲಿ ಭಾರೀ ಸ್ಫೋಟ – ಸ್ಫೋಟದ ರಭಸಕ್ಕೆ 15ಕ್ಕೂ ಅಧಿಕ ಮನೆಗಳಿಗೆ ಹಾನಿ | Kannada Prabha

ಸಾರಾಂಶ

ಕ್ವಾರಿಯಲ್ಲಿ ಕಲ್ಲು ಒಡೆಯುವುದಕ್ಕಾಗಿ ತಂದ ಸ್ಫೋಟಕಗಳು ಬಿಸಿಲಿನ ತೀವ್ರತೆಗೆ ಏಕಾಏಕಿ ಸ್ಫೋಟಗೊಂಡಿದ್ದು, ಬಂಟ್ವಾಳ ತಾಲೂಕು ವಿಟ್ಲ ಪೇಟೆ ಸೇರಿ ಆಸುಪಾಸಿನ 5 ಗ್ರಾಮಗಳ ಜನರನ್ನು ಬೆಚ್ಚಿಬೀಳಿಸಿದ ಘಟನೆ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ. ಸುಮಾರು 4 ಕಿ.ಮೀ. ವ್ಯಾಪ್ತಿಯ ಮನೆಗಳಿಗೆ ಹಾನಿಯಾಗಿವೆ.

ಕನ್ನಡಪ್ರಭ ವಾರ್ತೆ ಬಂಟ್ವಾಳ

ತಾಲೂಕಿನ ವಿಟ್ಲಮುಡ್ನೂರು ಗ್ರಾಮದ ಮಾಡತ್ತಡ್ಕದ ಕ್ವಾರಿಯಲ್ಲಿ ಕಲ್ಲು ಒಡೆಯುವುದಕ್ಕಾಗಿ ತಂದ ಸ್ಫೋಟಕಗಳು ಬಿಸಿಲಿನ ತೀವ್ರತೆಗೆ ಏಕಾಏಕಿ ಸ್ಫೋಟಗೊಂಡಿದ್ದು, ವಿಟ್ಲ ಪೇಟೆ ಸೇರಿ ಆಸುಪಾಸಿನ 5 ಗ್ರಾಮಗಳ ಜನರನ್ನು ಬೆಚ್ಚಿಬೀಳಿಸಿದ ಘಟನೆ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ. ಸುಮಾರು 4 ಕಿ.ಮೀ. ವ್ಯಾಪ್ತಿಯ ಮನೆಗಳಿಗೆ ಹಾನಿಯಾಗಿದ್ದು, ನೂರು ಮೀಟರು ದೂರದಲ್ಲಿರುವ ಎರಡು ಮನೆಗಳ ಛಾವಣಿ, ಕಿಟಕಿ ಸೇರಿ ಹಲವು ವಸ್ತುಗಳು ಜಖಂಗೊಂಡಿವೆ.

ಮಾಡತ್ತಡ್ಕ ಖಾಸಗಿ ಕ್ರಶರ್‌ಗೆ ಸೇರಿದ ಕ್ವಾರಿಯ ಸಮೀಪದಲ್ಲೇ ಘಟನೆ ನಡೆದಿದ್ದು, ಕಲ್ಲಿನ ರಾಶಿಯ ನಡುವಿನಲ್ಲಿ ಒಂದು ಬಾಕ್ಸ್ ಡೆಟೋನೇಟರ್ಸ್ ಹಾಗೂ 200 ಜೆಲಿಟಿನ್ ಕಡ್ಡಿಗಳನ್ನು ಒಟ್ಟಿಗೇ ಅಸುರಕ್ಷಿತವಾಗಿ, ಮುಂಜಾಗ್ರತೆ ವಹಿಸದೆ ಇಡಲಾಗಿತ್ತೆನ್ನಲಾಗಿದೆ. ಸುಮಾರ್ 1.30ರ ಸುಮಾರಿಗೆ ಏಕಾಏಕಿ ಸ್ಪೋಟಗೊಂಡಿದೆ. ಸ್ಪೋಟ ನಡೆದ ಸ್ಥಳದಿಂದ ಸುಮಾರು 100 ಮೀಟರ್ ದೂರದಲ್ಲಿದ್ದ ಈಶ್ವರ ನಾಯ್ಕ ಹಾಗೂ ಅವರ ಪುತ್ರ ವಸಂತ ಮೋಹನ್ ಅವರಿಗೆ ಸೇರಿದ ಮನೆಗಳಿಗೆ ಹಾನಿಯಾಗಿದೆ. ಜೊತೆಗೆ 1 ಕಿ. ಮೀ. ಆಸುಪಾಸಿನ ಸುಮಾರು 15ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ. ಮನೆಗಳಲ್ಲಿನ ವಸ್ತುಗಳು ಎಲ್ಲೆಂದರಲ್ಲಿ ಬಿದ್ದು, ಹೆಂಚಿನ ಚಾವಣಿಯ ಕಟ್ಟಡಗಳಲ್ಲಿ ಹೆಂಚು ಸ್ಥಾನಪಲ್ಲಟವಾಗಿದೆ. ಕಿಟಕಿಯ ಗಾಜು ಪುಡಿಯಾಗಿದ್ದು, ಛಾವಣಿಗೆ ಹಾಸಿದ ಸಿಮೆಂಟ್ ಶೀಟ್ ಚೆಲ್ಲಾಪಿಲ್ಲಿಯಾಗಿದೆ. ಸೀಲಿಂಗ್ ಗೆ ಹಾಸು ತುಂಡಾಗಿ ಕೇಳಗೆ ಬಿದ್ದಿದೆ. ಗೋಡೆ ಗಡಿಯಾರ ಕೆಲಸ ನಿಲ್ಲಿಸಿದೆ. ಕೆಲವು ಮನೆಯ ಟಿವಿ ಕೆಲಸ ಮಾಡುತ್ತಿಲ್ಲ. ಮನೆಗಳ ಕಿಟಕಿ ಫ್ರೇಂ ತುಂಡಾಗಿ ಬಿದ್ದಿದೆ. ವಿಟ್ಲ ಪೇಟೆಯ ಹಲವು ಕಡೆಯಲ್ಲಿ ವಸ್ತುಗಳು ಕಪಾಟುಗಳಿಂದ ನೆಲಕ್ಕುರುಳಿದೆ. ಮನೆಯ ಪಿಲ್ಲರ್ ಗಳು ಬಿರುಕು ಬಿಟ್ಟಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಯಾರಿಗೂ ಕಾಣದಂತೆ ದಾಸ್ತಾನು:

ಕ್ವಾರಿ ಸಮೀಪದ ನಿರ್ಜನ ಪ್ರದೇಶದಲ್ಲಿ ಕಲ್ಲಿನ ರಾಶಿಯಿದ್ದು, ಇದರ ತಪ್ಪಲು ಪ್ರದೇಶದಲ್ಲಿ ಯಾರಿಗೂ ಕಾಣದ ರೀತಿಯಲ್ಲಿ ದಾಸ್ತಾನು ಇರಿಸಲಾಗಿದ್ದು, ಇದರ ಸ್ಫೋಟಕ್ಕೆ ಅಕ್ಕಪಕ್ಕದ ಬಯಲು ಪ್ರದೇಶದಲ್ಲಿದ್ದ ಮುಳಿ ಹುಲ್ಲು ಬೆಂಕಿಗೆ ಆಹುತಿಯಾಗಿದೆ. ದಾಸ್ತಾನು ಇಟ್ಟ ಜಾಗದಲ್ಲಿದ್ದ ಮರಗಳ ಎಲೆಗಳು ಸ್ಫೋಟದ ತೀವ್ರತೆಗೆ ನೆಲಕ್ಕುರುಳಿದೆ.

ಸ್ಥಳಕ್ಕೆ ಪೊಲೀಸ್ ಅಧೀಕ್ಷಕ ಯತೀಶ್ ಎನ್., ಬಂಟ್ವಾಳ ತಹಸೀಲ್ದಾರ್ ಅರ್ಚನಾ ಭಟ್, ಕಂದಾಯ ನಿರೀಕ್ಷಕ ರವಿ ಎಂ.ಎನ್., ಸಹಾಯಕ ಗಿರೀಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಜಯ ಕೆ., ಗಣಿ ಇಲಾಖೆಯ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ಮಾಡಿದರು...............20 ಮೀಟರ್‌ನಲ್ಲಿ ಗಣಿ ಇದೆ!ವಸತಿ ಪರಿಸರದಿಂದ ಸುಮಾರು 20 ಮೀಟರ್ ನಲ್ಲಿ ಗಣಿಗಾರಿಕೆ ನಡೆಸಲಾಗುತ್ತಿದೆ. ಹಲವು ಸಲ ದೂರು ನೀಡಿದರೂ, ಅಧಿಕಾರಿಗಳು ಸಂಬಂಧವೇ ಇಲ್ಲದಂತೆ ಇದ್ದಾರೆ. ದೂರು ನೀಡಿದರೆ ನಮಗೆ ಸೇರಿದ್ದಲ್ಲ ಎಂದು ಪೊಲೀಸರು ಜಾರಿಕೊಳ್ಳುತ್ತಾರೆ ಎಂದು ಸ್ಥಳೀಯರು ಆರೋಪಿಸಿದರು. ಈ ಸಂದರ್ಭ ಪೊಲೀಸ್ ಅಧೀಕ್ಷಕ ಯತೀಶ್ ಅವರು ೨೦ ಮೀಟರ್ ದೂರದಲ್ಲಿರುವ ಗಣಿಯ ಮಾಹಿತಿ ಪಡೆದುಕೊಂಡು ವರದಿ ನೀಡಿ ಎಂದು ವಿಟ್ಲ ಪೊಲೀಸ್ ನಿರೀಕ್ಷಕರಿಗೆ ಆದೇಶಿದ್ದಾರೆ. ವರದಿ ಜಿಲ್ಲಾಧಿಕಾರಿಗೆ ಕಳುಹಿಸಿ ಅಗತ್ಯ ಕ್ರಮಕ್ಕೆ ಶಿಫಾರಸು ಮಾಡುತ್ತೇವೆ ಎಂದರು.--------------------------------------------------ಕ್ವಾರಿಯಲ್ಲಿ ಕಲ್ಲು ಸ್ಪೋಟಿಸುವುದಕ್ಕೆ ತಂದಿದ್ದ ಸ್ಫೋಟಕಗಳನ್ನು ಇಟ್ಟು ಊಟಕ್ಕೆ ತೆರಳಿದ ಸಂದರ್ಭದಲ್ಲಿ ಬಿಸಿಲಿನ ತೀವ್ರತೆಗೆ ಸ್ಫೋಟಗೊಂಡಿದೆ. ಅಕ್ಕಮಕ್ಕದ ಮನೆಗಳಿಗೆ ಹಾನಿಯಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಫೋಟಕಗಳನ್ನು ತಂದು ಬೇಜವಾಬ್ದಾರಿ ತನದಿಂದ ಇಟ್ಟು ಹೋದವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರಗಿಸುತ್ತೇವೆ.

-ಯತೀಶ್ ಎನ್., ದ.ಕ.ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ