ಕಲ್ಲುಗಣಿಗಾರಿಕೆ: ಕೋಳಘಟ್ಟದಲ್ಲಿ ಅಹೋರಾತ್ರಿ ಪ್ರತಿಭಟನೆ

KannadaprabhaNewsNetwork |  
Published : May 10, 2025, 01:02 AM IST
9 ಟಿವಿಕೆ 3 - ತುರುವೇಕೆರೆ ತಾಲೂಕಿನ ಕೋಳಘಟ್ಟ ಗ್ರಾಮದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ವಿರುದ್ದ ಗ್ರಾಮಸ್ಥರು ನಡೆಸುತ್ತಿರುವ ಆಹೋ ರಾತ್ರಿ ಪ್ರತಿಭಟನೆಯಲ್ಲಿ ರೈತ ಮುಖಂಡರು ಭಾಗವಹಿಸಿದ್ದರು. | Kannada Prabha

ಸಾರಾಂಶ

ಅಕ್ರಮ ಕಲ್ಲುಗಣಿಗಾರಿಕೆ ನಡೆಸುತ್ತಿರುವ ಕ್ರಷರ್ ಮಾಲೀಕರ ವಿರುದ್ದ ಜಿಲ್ಲಾ, ತಾಲೂಕು ಆಡಳಿತ ಕೂಡಲೇ ಕ್ರಮ ಕೈಗೊಂಡು ಕ್ರಷರ್ ಯಂತ್ರ ತೆರವುಗೊಳಿಸದಿದ್ದರೆ ರೈತರೇ ತೆರವುಗೊಳಿಸಲು ಮುಂದಾಗಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಧನಂಜಯ ಆರಾಧ್ಯ ಎಚ್ಚರಿಕೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ತುರುವೇಕೆರೆ

ಅಕ್ರಮ ಕಲ್ಲುಗಣಿಗಾರಿಕೆ ನಡೆಸುತ್ತಿರುವ ಕ್ರಷರ್ ಮಾಲೀಕರ ವಿರುದ್ದ ಜಿಲ್ಲಾ, ತಾಲೂಕು ಆಡಳಿತ ಕೂಡಲೇ ಕ್ರಮ ಕೈಗೊಂಡು ಕ್ರಷರ್ ಯಂತ್ರ ತೆರವುಗೊಳಿಸದಿದ್ದರೆ ರೈತರೇ ತೆರವುಗೊಳಿಸಲು ಮುಂದಾಗಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಧನಂಜಯ ಆರಾಧ್ಯ ಎಚ್ಚರಿಕೆ ನೀಡಿದ್ದಾರೆ. ತಾಲೂಕಿನ ಕೋಳಘಟ್ಟ ಗ್ರಾಮದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ವಿರುದ್ದ ಗ್ರಾಮಸ್ಥರು ನಡೆಸುತ್ತಿರುವ ಆಹೋ ರಾತ್ರಿ ಪ್ರತಿಭಟನೆ ಹೋರಾಟದಲ್ಲಿ ಶುಕ್ರವಾರ ಭಾಗವಹಿಸಿ ಮಾತನಾಡಿದ ಅವರು, ಈ ಭಾಗದ ರೈತರಿಗೆ ಮಾರಕವಾಗಿರುವ ಕಲ್ಲು ಕ್ರಷರ್ ಸ್ಥಗಿತಗೊಳಿಸುವಂತೆ ಸುಮಾರು ದಿನಗಳಿಂದ ಕೋಳಘಟ್ಟ ಭಾಗದ ಗ್ರಾಮದ ರೈತರು ಹೋರಾಟ ಮಾಡುತ್ತಿದ್ದರೂ ಸಹ ಜಿಲ್ಲಾ ಹಾಗೂ ತಾಲೂಕು ಆಡಳಿತ, ದಂಡಿನಶಿವರ ಪೊಲೀಸರು ಮತ್ತು ಗಣಿಗಾರಿಕೆ ಇಲಾಖಾ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಎಲ್ಲ ಅಧಿಕಾರಿಗಳು ಯಾವುದೋ ಆಮಿಷಕ್ಕೆ ಒಳಗಾಗಿದ್ದಾರೆ ಎಂಬ ಅನುಮಾನ ಮೂಡುತ್ತಿದೆ. ಕ್ರಷರ್ ಮಾಲೀಕ ಸರ್ಕಾರಿ ಗೋಮಾಳದಲ್ಲಿ ಕ್ರಷರ್ ಯಂತ್ರ ಹಾಗೂ ತೂಕದ ಯಂತ್ರಗಳನ್ನು ಅಳವಡಿಸಿಕೊಂಡಿದ್ದರೂ ಸಹ ಅಧಿಕಾರಿಗಳು ತೆರವುಗೊಳಿಸುವ ನಾಟಕವಾಡುತ್ತಿದ್ದಾರೆ. ಜಿಲ್ಲಾಧಿಕಾರಿಗಳಿಗೂ ಈ ಅಕ್ರಮ ಕ್ರಷರ್ ಬಗ್ಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದರ ಹಿನ್ನಲೆ ಏನು ಎಂಬುದು ಅರ್ಥವಾಗುತ್ತಿಲ್ಲ. ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳದಿದ್ದರೆ ಸಾವಿರಾರು ರೈತರೇ ಸ್ವಯಂ ಪ್ರೇರಿತರಾಗಿ ಕ್ರಷರ್ ಗೆ ಮುತ್ತಿಗೆ ಹಾಕಿ ಅಕ್ರಮವಾಗಿರುವ ಕ್ರಷರ್ ಯಂತ್ರಗಳನ್ನು ಕಿತ್ತು ಹಾಕುವರು ಎಂದು ಎಚ್ಚರಿಸಿರುವ ಅವರು ಮುಂದಿನ ಎಲ್ಲಾ ಅನಾಹುತಕ್ಕೆ ಜಿಲ್ಲಾಡಳಿತವೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು. ಕ್ರಷರ್ ಮಾಲೀಕ ಪುಡಿ ರೌಡಿಗಳನ್ನು ಬಿಟ್ಟು ಗ್ರಾಮಸ್ಥರು ಹಾಗೂ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿ ಸುಳ್ಳು ದೂರು ನೀಡಿ ರೈತರ ಮೇಲೆ ಕೇಸ್ ಗಳನ್ನು ದಾಖಲಿಸುತ್ತಿದ್ದಾರೆ. ದಂಡಿನಶಿವರ ಪೊಲೀಸರು ರೈತರು ನೀಡಿದ ದೂರುಗಳನ್ನು ತೆಗೆದುಕೊಳ್ಳದೇ ಕ್ರಷರ್ ಮಾಲೀಕನ ದೂರುಗಳನ್ನು ತೆಗೆದುಕೊಂಡು ಪಕ್ಷಪಾತ ಅನುಸರಿಸುತ್ತಿದ್ದಾರೆ. ರೈತರಿಗೆ ರಕ್ಷಣೆ ನೀಡದ ಪೊಲೀಸರು ಕ್ರಷರ್ ಮಾಲೀಕರಿಗೆ ರಕ್ಷಣೆ ನೀಡಿ ಗಣಿ ನಡೆಸಲು ಅನುವು ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದರು. ಕೂಡಲೇ ರೈತರ ಮೇಲೆ ದಾಖಲಾಗಿರುವ ಎಲ್ಲ ಕೇಸ್ ಗಳನ್ನು ಮುಕ್ತಾಯಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಧನಂಜಯ ಆರಾಧ್ಯ ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಚಿಕ್ಕನಾಯಕನಹಳ್ಳಿ ತಾಲೂಕು ರೈತ ಸಂಘದ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ್, ಗೌರವಾಧ್ಯಕ್ಷ ಮಾರಿ ಮುತ್ತಣ್ಣ, ಪ್ರಧಾನ ಕಾರ್ಯದರ್ಶಿ ತೋಂಟಾರಾಧ್ಯ, ತುರುವೇಕೆರೆ ತಾಲೂಕು ಅಧ್ಯಕ್ಷ ಗಂಗಾಧರಯ್ಯ, ಉಪಾಧ್ಯಕ್ಷ ಉಮೇಶ್, ಶಿರಾ ತಾಲೂಕು ಬುಕ್ಕಾಪಟ್ಟಣ ಹೋಬಳಿ ಅಧ್ಯಕ್ಷ ರಾಜಣ್ಣ, ತಾಲೂಕು ಸಂಚಾಲಕ ಚನ್ನಕೇಶವ, ಕೋಳಘಟ್ಟ ಗ್ರಾಮದ ಮುಖಂಡರಾದ ಶಿವಶಂಕರ್, ಶಶಿಶೇಖರ್, ಕೇಶವ್, ಮಹಾಲಿಂಗಯ್ಯ, ರಾಜೀವ್, ಉಮೇಶ್, ಶಿಲ್ಪ, ಶಾರದಮ್ಮ, ಶಿವಮ್ಮ, ರೇಖಾ, ನಾಗಮಣಿ, ಕಮಲ, ಪುಷ್ಪಾವತಿ, ರಮ್ಯ, ಶ್ವೇತ ಸೇರಿದಂತೆ ಹಲವಾರು ರೈತರು, ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಇದ್ದರು.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ