ಕೆಡಿಪಿ ಸಭೆಯಲ್ಲಿ ಜಲಸಂಪನ್ಮೂಲ ಸಚಿವ ರಾಮಲಿಂಗರೆಡ್ಡಿ ಹೇಳಿಕೆ। ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗದಿರಲು ಸೂಚನೆ
ಮಳೆ ಕೊರತೆಯಿಂದ ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಕೋಲಾರ ಜಿಲ್ಲೆಯಲ್ಲಿ ತುರ್ತು ಸಂದರ್ಭದಲ್ಲಿ ನಿಯಮಾವಳಿಗಳಿಗಿಂತ ಜನರ ದಾಹ ತೀರಿಸುವುದು ಮುಖ್ಯವಾಗಿದ್ದು, ಈ ಕುರಿತು ತಕ್ಷಣವೇ ಕ್ರಿಯಾ ಯೋಜನೆ ರೂಪಿಸಿ ನೀರು ಪೂರೈಸಲು ಜಲಸಂಪನ್ಮೂಲ ಸಚಿವ ರಾಮಲಿಂಗರೆಡ್ಡಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದ ಜಿಪಂ ಸಭಾಂಗಣದಲ್ಲಿ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರಸಕ್ತ ಸಾಲಿನ ಪ್ರಥಮ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಕುಡಿಯುವ ನೀರು, ಕೃಷಿ, ಎತ್ತಿನಹೊಳೆ ಯೋಜನೆ ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು. ಯಾವುದೇ ಕಾರಣಕ್ಕೂ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಎಚ್ಚರವಹಿಸಬೇಕು ಹಾಗೂ ಜನಪ್ರತಿನಿಧಿಗಳ ದೂರುಗಳಿಗೆ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸಬೇಕು ಎಂದು ಸಚಿವರು ಎಚ್ಚರಿಕೆ ನೀಡಿದರು.ನಿಯಮದ ಪ್ರಕಾರ ಪ್ರತಿಯೊಬ್ಬರಿಗೆ ಕನಿಷ್ಟ ೫೫ ಎಲ್.ಪಿ.ಸಿ.ಡಿ ನೀರು ಒದಗಿಸುವುದು ಕಡ್ಡಾಯವಾಗಿದೆ. ಆದರೆ ಜಿಲ್ಲೆಯಲ್ಲಿ ಶೇ.೪೭ ರಷ್ಟು ಮಳೆ ಕೊರತೆಯಾಗಿರುವುದರಿಂದ ೧೩೦ ಹಳ್ಳಿಗಳಲ್ಲಿ ತೀವ್ರ ಸಮಸ್ಯೆಯಿದೆ. ಪರಿಸ್ಥಿತಿ ನಿಭಾಯಿಸಲು ಸರ್ಕಾರದಿಂದ ಟಾಸ್ಕ್ ಫೋರ್ಸ್‌ಗೆ ೪ ಕೋಟಿ ರು. ಅನುದಾನ ಬಿಡುಗಡೆಯಾಗಿದ್ದು, ತುರ್ತು ಅಗತ್ಯವಿರುವ ಕಡೆ ಟ್ಯಾಂಕರ್‌ಗಳು ಹಾಗೂ ಖಾಸಗಿ ಬೋರ್‌ವೆಲ್‌ಗಳನ್ನು ಬಳಸಿಕೊಳ್ಳಲು ಸಚಿವರು ಸೂಚಿಸಿದರು.
ಬೃಹತ್ ಕುಡಿಯುವ ನೀರಿನ ಯೋಜನೆಗಳ ಕುರಿತು ಮಾತನಾಡಿದ ಜನಪ್ರತಿನಿಧಿಗಳು, ೪೫ ಕೋಟಿ ರು. ವೆಚ್ಚದ ಮಾಕಂಡೇಯ ಜಲಾಶಯ ಯೋಜನೆಯಡಿ ಮಾಲೂರು ಮತ್ತು ಬಂಗಾರಪೇಟೆ ತಾಲೂಕಿನ ೧೮೬ ಹಳ್ಳಿಗಳಿಗೆ ನೀರು ಪೂರೈಸುವ ಯೋಜನೆ ರೂಪಿಸಿದ್ದರೂ, ಪಂಪ್ ಹಾಗೂ ಟ್ರಾನ್ಸ್ಫಾರ್ಮರ್ ಸುಟ್ಟುಹೋಗಿರುವ ಕಾರಣ ಕೇವಲ ೨೬ ಹಳ್ಳಿಗಳಿಗೆ ಮಾತ್ರ ನೀರು ತಲುಪುತ್ತಿದ್ದು, ತ್ವರಿತವಾಗಿ ಸರಿಪಡಿಸುವಂತೆ ಆಗ್ರಹಿಸಿದರು.
ಎತ್ತಿನಹೊಳೆ ಯೋಜನೆಯ ಪ್ರಗತಿ ಕುರಿತು ಸಚಿವರು ಮಾಹಿತಿ ನೀಡಿ, ೫.೮ ಕಿ.ಮೀ. ಕಾಮಗಾರಿಗಾಗಿ ಜಿಲ್ಲಾಧಿಕಾರಿ ಖಾತೆಯಲ್ಲಿ ೨೯ ಕೋಟಿ ರು. ಇರಿಸಲಾಗಿದ್ದು, ಗುಬ್ಬಿ ಬಳಿಯ ೧.೮ ಎಕರೆ ಅರಣ್ಯ ಭೂಮಿ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಂಡು ಮರ ಕುಡಿಯುವ ಕಾರ್ಯ ಮುಗಿದಿದೆ. ಇನ್ನೆರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಂಡು ಭೈರಗೊಂಡ್ಲುವರೆಗೂ ನೀರು ಹರಿಯಲಿದೆ ಎಂದು ಭರವಸೆ ನೀಡಿದರು.
ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಅನು?ನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಎಸ್.ಆರ್.ಮೆಹರುಜ್ ಖಾನ್, ಜಿಲ್ಲಾಧ್ಯಕ್ಷ ವೈ.ಶಿವಕುಮಾರ್, ಶಾಸಕರಾದ ಕೊತ್ತೂರು ಜಿ.ಮಂಜುನಾಥ್, ಕೆ.ವೈ. ನಂಜೇಗೌಡ, ಎಸ್.ಎನ್.ನಾರಾಯಣಸ್ವಾಮಿ, ಡಾ.ರೂಪಕಲಾ ಶಶಿಧರ್, ಸಮೃದ್ಧಿ ಮಂಜುನಾಥ್, ಎಂಎಲ್ಸಿಗಳಾದ ಎಂ.ಎಲ್.ಅನಿಲ್ ಕುಮಾರ್, ಡಿ.ಟಿ.ಶ್ರೀನಿವಾಸ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮದ್ ಹನೀಫ್, ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್, ಜಿ.ಪಂ. ಸಿಇಒ ಡಾ. ಪ್ರವೀಣ್ ಪಿ.ಬಾಗೇವಾಡಿ, ಕೋಲಾರ ಎಸ್ಪಿ ಕನ್ನಿಕಾ ಸಿಕ್ರಿವಾಲ್, ಕೆಜಿಎಫ್ ಎಸ್ಪಿ ಶಿವಾಂಶು ರಜಪೂತ, ಡಿಸಿಎಫ್ ಸರೀನಾ ಸಿಕ್ಕಲಿಗಾರ್, ಉಪಕಾರ್ಯದರ್ಶಿ ಟಿ.ಕೆ.ರಮೇಶ್, ಉಪವಿಭಾಗಾಧಿಕಾರಿ ಜಂಬಗಿ ರೇಣುಕಾ ಪ್ರಸಾದ್ ದಿಲೀಪ್ ಇದ್ದರು.