ಮಡಿಕೇರಿ: ನಮ್ಮ ಗಣತಿ ನಮ್ಮ ಅಭಿವೃದ್ಧಿ 2027ರ ಜನಗಣತಿ ಸಂಬಂಧ ಗಣತಿದಾರರು ಮನೆ ಮನೆಗೆ ಭೇಟಿ ನೀಡಿ ಗಣತಿ ಕಾರ್ಯ ಕೈಗೊಂಡಿದ್ದು, ಈ ತಿಂಗಳ ಅಂತ್ಯದೊಳಗೆ ಶೇಕಡಾವಾರು ಪ್ರಗತಿ ಸಾಧಿಸುವಂತೆ ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಮನೆ ಮನೆಗೆ ಭೇಟಿ ನೀಡಿ ಗಣತಿ ಕಾರ್ಯ ಪ್ರಗತಿಯಲ್ಲಿ ಕೊಡಗು ಜಿಲ್ಲೆ 15ನೇ ಸ್ಥಾನದಲ್ಲಿದ್ದು, ಆದಷ್ಟು ಶೀಘ್ರ ಗಣತಿ ಕಾರ್ಯವನ್ನು ಪೂರ್ಣಗೊಳಿಸಬೇಕು ಎಂದು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ತಹಸೀಲ್ದಾರರು, ತಾಪಂ ಇಒಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಪುರಸಭೆ ಮತ್ತು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು ಸೇರಿದಂತೆ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ತಮ್ಮ ತಮ್ಮ ವ್ಯಾಪ್ತಿಯಲ್ಲಿ ಯಾವುದೇ ಮನೆ ಬಿಟ್ಟು ಹೋಗದಂತೆ ಗಣತಿ ಕಾರ್ಯ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು. ಮನೆ ಮನೆ ಗಣತಿ ಕಾರ್ಯಕ್ಕಾಗಿ ಈಗಾಗಲೇ ಜಿಲ್ಲೆಯಲ್ಲಿ 999 ಗಣತಿದಾರರನ್ನು ನಿಯೋಜಿಸಲಾಗಿದೆ. ಮಡಿಕೇರಿ ತಾಲ್ಲೂಕಿಗೆ 187, ಮಡಿಕೇರಿ ನಗರಕ್ಕೆ 61, ಸೋಮವಾರಪೇಟೆ ತಾಲ್ಲೂಕಿಗೆ 186, ಸೋಮವಾರಪೇಟೆ ಪಟ್ಟಣ ಪಂಚಾಯಿತಿಗೆ 12, ವಿರಾಜಪೇಟೆ ತಾಲ್ಲೂಕಿಗೆ 133, ವಿರಾಜಪೇಟೆ ಪುರಸಭೆ ವ್ಯಾಪ್ತಿಗೆ 36, ಪೊನ್ನಂಪೇಟೆ ತಾಲೂಕಿನಲ್ಲಿ 161, ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 19, ಕುಶಾಲನಗರ ತಾಲ್ಲೂಕಿಗೆ 158, ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ 46, ಒಟ್ಟು 999 ಗಣತಿದಾರರನ್ನು ನಿಯೋಜಿಸಲಾಗಿದೆ. ಜೊತೆಗೆ 172 ಮಂದಿ ಗಣತಿ ಮೇಲ್ವಿಚಾರಕರಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಹಾಗೆಯೇ ಶೇ.10 ರಷ್ಟು ಗಣತಿದಾರರನ್ನು ಕಾಯ್ದಿರಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಇತರ ಜಿಲ್ಲೆಗೆ ಹೋಲಿಕೆ ಮಾಡಿದರೆ ಕೊಡಗು ಜಿಲ್ಲೆಯಲ್ಲಿ ಉತ್ತಮ ವಾತಾವರಣ ಇದ್ದು, ಸಣ್ಣ ಜಿಲ್ಲೆಯಾಗಿದೆ. ಆದ್ದರಿಂದ ಗಣತಿ ಕಾರ್ಯಕ್ಕೆ ನಿಯೋಜಿಸಲ್ಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತ್ವರಿತವಾಗಿ ಕಾರ್ಯನಿರ್ವಹಿಸುವ ಮೂಲಕ ಮುಂದಿನ ಹತ್ತು ದಿನದ ಒಳಗೆ ಜಿಲ್ಲೆಯಲ್ಲಿ ಶೇಕಡವಾರು ಪ್ರಗತಿ ಸಾಧಿಸುವಂತಾಗಬೇಕು ಎಂದು ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ತಿಳಿಸಿದರು. ಜಿಲ್ಲೆಯಲ್ಲಿ ಎಲ್ಲ ಗಣತಿದಾರರು ಹಾಗೂ ಮೇಲ್ವಿಚಾರಕರು ತಮಗೆ ಹಂಚಿಕೆಯಾಗಿರುವ ಮನೆ ಪಟ್ಟಿ ಕಾರ್ಯಾಚರಣೆ ಸರಿಯಾಗಿ ನಿರ್ವಹಿಸುತ್ತಿದ್ದಾರೆಯೇ ಎಂದು ಪ್ರಶ್ನಿಸಿದ ಜಿಲ್ಲಾಧಿಕಾರಿ ಅವರು, ಜಿಲ್ಲೆಯ ಮನೆ ಪಟ್ಟಿ ಮತ್ತು ಮನೆ ಗಣತಿ ಪ್ರಗತಿ ಕಡಿಮೆಯಾಗಿದ್ದು, ಎಲ್ಲ ವಿಭಾಗದ ಚಾರ್ಜ್ ಹಾಗೂ ಜನಗಣತಿ ಅಧಿಕಾರಿಗಳು ಶೀಘ್ರ ಕ್ರಮ ವಹಿಸಿ ಗಣತಿಯನ್ನು ತ್ವರಿತ ಗತಿಯಲ್ಲಿ ಮುಕ್ತಾಯಗೊಳಿಸಲು ಸೂಚನೆ ನೀಡಿದರು.ಅಲ್ಲದೇ ಜನಗಣತಿ ಕಾರ್ಯಕ್ಕೆ ಬಳಸಲಾಗುತ್ತಿರುವ ಆಪ್‌ನ ಕಾರ್ಯವಿಧಾನ, ಅದರಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಅವುಗಳನ್ನು ತ್ವರಿತವಾಗಿ ಬಗೆಹರಿಸುವ ಮೂಲಕ ಎಲ್ಲ ಅಧಿಕಾರಿಗಳು ತಮ್ಮ ತಮ್ಮ ಕರ್ತವ್ಯಗಳನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು. ಜೊತೆಗೆ ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.ಗಣತಿದಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜನಗಣತಿ ಕಾರ್ಯವನ್ನು ಯಾವುದೇ ಅಡಚಣೆಗಳಿಲ್ಲದೆ ಸುಗಮವಾಗಿ ನಡೆಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು. ಬಿಇಒ ಹಾಗೂ ಇಒಗಳು ಸ್ಥಳಕ್ಕೆ ಖುದ್ದು ಭೇಟಿ ನೀಡಿ ಗಣತಿದಾರರ ಕರ್ತವ್ಯ ಪರಿಶೀಲಿಸಬೇಕು. ಅತ್ಯಂತ ಕಡಿಮೆ ಅಂಕಿ ಅಂಶ ಹೊಂದಿರುವ ವ್ಯಾಪ್ತಿಯಲ್ಲಿ ಅಧಿಕಾರಿಗಳು ಗಮನ ಹರಿಸಿ ಶೀಘ್ರ ಗಣತಿ ಕಾರ್ಯ ನಡೆಸುವಂತೆ ನೋಡಿಕೊಳ್ಳಬೇಕು ಎಂದರು. ಅಧಿಕಾರಿಗಳು ಸಮರ್ಪಕವಾಗಿ ಕೆಲಸ ನಿರ್ವಹಿಸದಿದ್ದಲ್ಲಿ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ, ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕರಾದ ಬಿ.ಬಸಪ್ಪ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಬಸವರಾಜು, ತಹಸಿಲ್ದಾರರಾದ ಪ್ರವೀಣ್ ಕುಮಾರ್ (ವಿರಾಜಪೇಟೆ), ಶ್ರೀಧರ (ಮಡಿಕೇರಿ), ಕೃಷ್ಣಮೂರ್ತಿ (ಸೋಮವಾರಪೇಟೆ), ಕಿರಣ್ ಗೌರಯ್ಯ (ಕುಶಾಲನಗರ), ಸಂಜನಾ (ಪೊನ್ನಂಪೇಟೆ), ತಾಪಂ ಇಒಗಳಾದ ಶೇಖರ್ (ಮಡಿಕೇರಿ), ಪರಮೇಶ್ (ಸೋಮವಾರಪೇಟೆ), ಅಪ್ಪಣ್ಣ (ವಿರಾಜಪೇಟೆ), ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಹೇಶ್ (ಮಡಿಕೇರಿ), ಕೃಷ್ಣಪ್ಪ (ಸೋಮವಾರಪೇಟೆ), ಆನಂದ್ (ವಿರಾಜಪೇಟೆ), ಪುರಸಭೆ ಮುಖ್ಯಾಧಿಕಾರಿ ಗಿರೀಶ್ (ಕುಶಾಲನಗರ), ನಾಚಪ್ಪ (ವಿರಾಜಪೇಟೆ), ಕೃಷ್ಣ ಪ್ರಸಾದ್ (ಸೋಮವಾರಪೇಟೆ), ಎಸ್. ಗೋಪಿ (ಪೊನ್ನಂಪೇಟೆ) ಅವರು ತಮ್ಮ ವ್ಯಾಪ್ತಿಯ ಪ್ರಗತಿ ಬಗ್ಗೆ ಮಾಹಿತಿ ನೀಡಿದರು.