ಮೀನುಗಾರರ ಹಿತರಕ್ಷಣೆಗೆ ಸಿಎಂ ಬಳಿ ಶೀಘ್ರ ನಿಯೋಗ

KannadaprabhaNewsNetwork | Published : Apr 17, 2024 1:15 AM

ಸಾರಾಂಶ

ಮಂಗಳವಾರ ಕಾಸರಕೋಡು ಟೊಂಕ ಪ್ರದೇಶಕ್ಕೆ ಮಂಗಳವಾರ ಭೇಟಿ ನೀಡಿ ಮೀನುಗಾರರ ಜತೆ ಶಾಂತವೀರಭೀಷ್ಮ ಚೌಡಯ್ಯ ಸ್ವಾಮೀಜಿ ಸಮಾಲೋಚನೆ ನಡೆಸಿದರು.

ಹೊನ್ನಾವರ: ವಿವಾದಿತ ಕಾಸರಕೋಡು ವಾಣಿಜ್ಯ ಬಂದರು ನಿರ್ಮಾಣದಿಂದಾಗಿ ಅತಂತ್ರರಾಗುವ ಮೀನುಗಾರರ ಅಹವಾಲುಗಳನ್ನು ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವರಿಕೆ ಮಾಡಲಾಗುವುದು. ಅಲ್ಲದೇ ಚುನಾವಣೆ ಮುಗಿದ ಬಳಿಕ ಮುಖ್ಯಮಂತ್ರಿಗಳ ಬಳಿ ನಿಯೋಗ ಕರೆದುಕೊಂಡು ಹೋಗಲು ನೇತೃತ್ವ ವಹಿಸುವುದಾಗಿ ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಚೌಡಯ್ಯದಾನಪುರದ ಶಾಂತವೀರಭೀಷ್ಮ ಚೌಡಯ್ಯ ಸ್ವಾಮೀಜಿ ತಿಳಿಸಿದರು.

ಮಂಗಳವಾರ ಕಾಸರಕೋಡು ಟೊಂಕ ಪ್ರದೇಶಕ್ಕೆ ಮಂಗಳವಾರ ಭೇಟಿ ನೀಡಿ ಮೀನುಗಾರರ ಜತೆ ಸಮಾಲೋಚನೆ ನಡೆಸಿದರು.

ಮೀನುಗಾರರ ಹಿತರಕ್ಷಣೆಗೆ ಸದಾಕಾಲವೂ ಬದ್ಧರಾಗಿರುತ್ತೇನೆ ಎಂದು ತಿಳಿಸಿದ ಶ್ರೀಗಳು, ಕೊಂಕಣಿ ಖಾರ್ವಿ ಸಮಾಜದ ಜತೆಗೆ ನಿರಂತರವಾಗಿ ನಿಕಟ ಸಂಪರ್ಕದಲ್ಲಿ ಇರುವುದಾಗಿ ಭರವಸೆ ನೀಡಿದರು.ಟೊಂಕದಲ್ಲಿ ಬಲವಂತವಾಗಿ ರಸ್ತೆ ನಿರ್ಮಾಣ ಮಾಡುವ ಸಂದರ್ಭದಲ್ಲಿ ಮೀನುಗಾರರು ಮತ್ತು ಮಹಿಳೆಯರ ಮೇಲೆ ನಡೆದ ಪೊಲೀಸ್ ದೌರ್ಜನ್ಯ ಮತ್ತು ಸುಳ್ಳು ಪ್ರಕರಣ ದಾಖಲಿಸಿ ಜೈಲಿಗೆ ತಳ್ಳಿದ ಘಟನೆಯನ್ನು ಶ್ರೀಗಳು ಖಂಡಿಸಿದರು.

ಈ ವೇಳೆ ಉದ್ದೇಶಿತ ಕಾಸರಕೋಡು ಟೊಂಕ ಖಾಸಗಿ ವಾಣಿಜ್ಯ ಬಂದರು ನಿರ್ಮಾಣ ಕಾಮಗಾರಿಯಿಂದ ಮೀನುಗಾರರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಮೀನುಗಾರರು ಸ್ವಾಮೀಜಿಗೆ ಎಳೆಎಳೆಯಾಗಿ ವಿವರಿಸಿದರು.

ಖಾಸಗಿ ವಾಣಿಜ್ಯ ಬಂದರು ನಿರ್ಮಾಣದಿಂದ ಇಲ್ಲಿನ ಮೀನುಗಾರರು ತಮ್ಮ ಮನೆ ಬದುಕು ಕಳೆದುಕೊಳ್ಳುವ ಆತಂಕದಲ್ಲಿರುವುದನ್ನು ಶ್ರೀಗಳು ಪ್ರತ್ಯಕ್ಷವಾಗಿ ನೋಡಿದರು.

ವಿವಾದಿತ ಖಾಸಗಿ ವಾಣಿಜ್ಯ ಬಂದರು ನಿರ್ಮಾಣ ಪ್ರದೇಶದ ಅವಲೋಕನ ನಡೆಸಿದ ಶ್ರೀಗಳು, ಕಡಲಾಮೆಗಳು ಮೊಟ್ಟೆ ಇಡುವ ತಾಣವನ್ನು ವೀಕ್ಷಣೆ ಮಾಡಿ ಕಡಲಾಮೆಗಳನ್ನು ರಕ್ಷಣೆ ಮಾಡುತ್ತಿರುವ ಕೊಂಕಣಿ ಖಾರ್ವಿ ಸಮಾಜದವರನ್ನು ಶ್ಲಾಘಿಸಿದರು.

ಸ್ಥಳೀಯ ಜೈನ ಜಟ್ಟಿಗೇಶ್ವರ ದೇವಸ್ಥಾನದ ವಠಾರದಲ್ಲಿ ಶ್ರೀಗಳನ್ನು ಮೀನುಗಾರರು ಆತ್ಮೀಯವಾಗಿ ಬರಮಾಡಿಕೊಂಡು ಸನ್ಮಾನಿಸಿದರು.

ಮೀನುಗಾರ ಹೋರಾಟಗಾರರಾದ ರಾಜೇಶ್ ತಾಂಡೇಲ್, ರಾಜು ತಾಂಡೇಲ್, ಖಾರ್ವಿ ಆನ್ಲೈನ್ ಸಂಪಾದಕ ಸುಧಾಕರ್ ಖಾರ್ವಿ, ಮೀನುಗಾರರು ಉಪಸ್ಥಿತರಿದ್ದರು.

Share this article