ಕುಂದು ಕೊರತೆಗಳಿಗೆ ಶೀಘ್ರ ಪರಿಹಾರ: ಮುನಿಯಪ್ಪ

KannadaprabhaNewsNetwork | Updated : Dec 29 2023, 01:31 AM IST

ಸಾರಾಂಶ

ದೊಡ್ಡಬಳ್ಳಾಪುರ: ಸಾರ್ವಜನಿಕ ಸಂಪರ್ಕ ಸಭೆಗಳನ್ನು ಏರ್ಪಡಿಸುವುದರಿಂದ ಸಾರ್ವಜನಿಕ ಸಮಸ್ಯೆಗಳನ್ನು ಆಲಿಸಿ, ಶೀಘ್ರ ಇತ್ಯರ್ಥ ಪಡಿಸಬಹುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್ ಮುನಿಯಪ್ಪ ಹೇಳಿದರು.

ದೊಡ್ಡಬಳ್ಳಾಪುರ: ಸಾರ್ವಜನಿಕ ಸಂಪರ್ಕ ಸಭೆಗಳನ್ನು ಏರ್ಪಡಿಸುವುದರಿಂದ ಸಾರ್ವಜನಿಕ ಸಮಸ್ಯೆಗಳನ್ನು ಆಲಿಸಿ, ಶೀಘ್ರ ಇತ್ಯರ್ಥ ಪಡಿಸಬಹುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್ ಮುನಿಯಪ್ಪ ಹೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಪಂ, ಮೇಲಿನಜೂಗಾನಹಳ್ಳಿ (ಎಸ್.ಎಸ್.ಘಾಟಿ) ಗ್ರಾಪಂ ಸಹಯೋಗದಲ್ಲಿ ತಾಲೂಕಿನ ಎಸ್.ಎಸ್ ಘಾಟಿಯಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಕುಂದು ಕೊರತೆ ಸಭೆಯಲ್ಲಿ ಅವರು ಮಾತನಾಡಿದರು.

ಕುಂದು ಕೊರತೆ ಸಭೆಯಲ್ಲಿ ಸಲ್ಲಿಸುವ ಅರ್ಜಿಗಳನ್ನು ಒಂದು ತಿಂಗಳೊಳಗೆ ಪರಿಹರಿಸಲಾಗುವುದು. ಎಸ್.ಎಸ್ ಘಾಟಿ ಕ್ಷೇತ್ರದಲ್ಲಿ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ, ಅನ್ನದಾಸೋಹಕ್ಕೆ ಸ್ಥಳ ನಿಗದಿ, ಪಶು ಆಸ್ಪತ್ರೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು. ತೂಬಗೆರೆ ಹೋಬಳಿಯಲ್ಲಿನ ರಸ್ತೆ ವ್ಯವಸ್ಥೆ, ಕುಡಿಯುವ ನೀರು, ಬಸ್ ವ್ಯವಸ್ಥೆ, ಹಕ್ಕು ಪತ್ರ ವಿತರಣೆ, ಸೇರಿದಂತೆ ಹಲವು ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಸಚಿವರು ಹೇಳಿದರು.

ಘಾಟಿ ಅಭಿವೃದ್ಧಿಗೆ ಕ್ರಮ:

ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಬಹಳಷ್ಟು ಪ್ರಸಿದ್ದಿ ಪಡೆದಿದೆ. ಈ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲು ಎಲ್ಲಾ ರೀತಿಯ ನೆರವು ನೀಡಲಾಗುವುದು. ತೂಬಗೆರೆ ಹೋಬಳಿಯು ದೇವನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುತ್ತದೆ. ಈ ಹೋಬಳಿಯನ್ನು ಕಡೆಗಣಿಸದೇ ಎಲ್ಲಾ ರೀತಿಯ ಸೌಲಭ್ಯಗಳೊಂದಿಗೆ ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.

ಕುಂದು ಕೊರತೆ ಸಭೆ ನಂತರ ಅಧಿಕಾರಿಗಳ ಸಭೆ ನಡೆಸಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ವಿತರಣೆ, ಬಡವರಿಗೆ ನಿವೇಶನ ಹಂಚಿಕೆ, ಹಳ್ಳಿಗಳಲ್ಲಿ ರಸ್ತೆ ದುರಸ್ತಿ, ಸ್ಮಶಾನ ಭೂಮಿ ಕೋರಿಕೆ, ಚರಂಡಿ ನಿರ್ಮಾಣ ಸೇರಿದಂತೆ ವಿವಿಧ ಮೂಲಭೂತ ಸೌಕರ್ಯಗಳನ್ನು ಶೀಘ್ರ ಇತ್ಯರ್ಥ ಪಡಿಸಲು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

61 ಅರ್ಜಿ ಸ್ವೀಕಾರ:

ಗ್ರಾಮಗಳಿಗೆ ರಸ್ತೆ ಸಂಪರ್ಕ, ಜಮೀನು ಸರ್ವೆ, ಸ್ಮಶಾನ ಜಾಗ, ಗೋಮಾಳ ಒತ್ತುವರಿ, ಹಕ್ಕು ಪತ್ರ ಹಂಚಿಕೆ, ಕೆರೆ ಕಟ್ಟೆ ಸಂರಕ್ಷಣೆ, ಪಡಿತರ ಚೀಟಿ ಹಂಚಿಕೆ, ನಿವೇಶನ ಹಂಚಿಕೆ, ಚರಂಡಿ ನಿರ್ಮಾಣ, ಕುಡಿಯುವ ನೀರು, ಶೌಚಾಲಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಒಟ್ಟು 61 ಅರ್ಜಿಗಳನ್ನು ಸಾರ್ವಜನಿಕರಿಂದ ಸ್ವೀಕರಿಸಲಾಯಿತು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಶಿವಶಂಕರ್‌, ಜಿಪಂ ಸಿಇಒ ಡಾ.ಅನುರಾಧ, ಅಪರ ಜಿಲ್ಲಾಧಿಕಾರಿ ಅಮರೇಶ್, ಅಪರ ಪೊಲೀಸ್ ವರಿಷ್ಠಾಧಿಕಾರಿ ನಾಗರಾಜ್, ತಹಶೀಲ್ದಾರ್ ವಿದ್ಯಾ ವಿಭಾ ರಾಥೋಡ್, ಇಒ ಮುನಿರಾಜು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು, ಜಿಪಂ ಮಾಜಿ ಅಧ್ಯಕ್ಷ ಚೆನ್ನಳ್ಳಿ ರಾಜಣ್ಣ, ಹಾಲಿ ಮತ್ತು ಮಾಜಿ ಚುನಾಯಿತ ಪ್ರತಿನಿಧಿಗಳು, ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು.28ಕೆಡಿಬಿಪಿ1-

ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಸಾರ್ವಜನಿಕ ಕುಂದು-ಕೊರತೆ ಸಭೆ ನಡೆಸಿದರು.

Share this article