ಹಾವೇರಿ: ಪಂಚ ಗ್ಯಾರಂಟಿ ಯೋಜನೆಗಳಲ್ಲಿನ ಎಲ್ಲ ಸಮಸ್ಯೆಗಳನ್ನು ಶೀಘ್ರದಲ್ಲೇ ಪರಿಹರಿಸಲಾಗುವುದು ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್. ಪಾಟೀಲ ತಿಳಿಸಿದರು.
ಬೆಳಗಾವಿ ಕಂದಾಯ ವಿಭಾಗದ 7 ಜಿಲ್ಲೆಗಳಲ್ಲಿ ಗ್ಯಾರಂಟಿ ಯೋಜನೆಗಳು ಪರಿಣಾಮಕಾರಿಯಾಗಿ ಜಾರಿಯಾಗುತ್ತಿವೆ ಎಂದರು.
ಶಕ್ತಿ ಯೋಜನೆಯನ್ನು ಮಹಿಳೆಯರು ಸಮರ್ಪಕವಾಗಿ ಬಳಸಿಕೊಂಡಿರುವುದು ಅಂಕಿ- ಅಂಶಗಳಿಂದ ಸ್ಪಷ್ಟವಾಗಿದೆ. ಯೋಜನೆ ಜಾರಿಯಾದ ನಂತರ ಬಸ್‌ಗಳ ಸಂಖ್ಯೆ ಹೆಚ್ಚಿಸಲಾಗಿದೆ. ಬಸ್ ಸಂಖ್ಯೆಗೆ ಅನುಗುಣವಾಗಿ ಚಾಲಕ- ನಿರ್ವಾಹಕ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಶಕ್ತಿ ಯೋಜನೆಯಿಂದಾಗಿ ಸಾರಿಗೆ ನಿಗಮಗಳ ಆದಾಯ ಹೆಚ್ಚಾಗಿದೆ ಎಂದರು.ಶಕ್ತಿ ಯೋಜನೆ ಜಾರಿಯಾಗಿ ಮಹಿಳೆಯರು ಉಚಿತವಾಗಿ ಸಂಚರಿಸುತ್ತಿದ್ದರೂ ಸಾರಿಗೆ ಸಂಸ್ಥೆಗೆ ಯಾವುದೇ ಹಾನಿಯಾಗಿಲ್ಲ. ಸಂಸ್ಥೆಯ ಆದಾಯವೂ ಹೆಚ್ಚಾಗಿದೆ. ಶಕ್ತಿ ಯೋಜನೆ ಜಾರಿಯಾದ ನಂತರ ಬೆಳಗಾವಿ ಕಂದಾಯ ವಿಭಾಗದ ವ್ಯಾಪ್ತಿಯ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಶೇ. 40ರಷ್ಟು ಹೆಚ್ಚಾಗಿದೆ. ಇದರಿಂದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಕಳೆದ ಒಂದೂವರೆ ವರ್ಷಗಳಲ್ಲಿ ₹3,900 ಕೋಟಿ ಆದಾಯ ಲಭಿಸಿದೆ ಎಂದರು.
ಶಕ್ತಿ ಯೋಜನೆ ಪ್ರಾರಂಭದಿಂದ 2024ರ ಡಿಸೆಂಬರ್ ಅಂತ್ಯಕ್ಕೆ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ 84.10 ಕೋಟಿ ಮಹಿಳೆಯರು ಪ್ರಮಾಣ ಮಾಡಿದ್ದಾರೆ. ಟಿಕೆಟ್ ಮೊತ್ತ ₹2,158 ಕೋಟಿಗಳಾಗಿದೆ. ಜನವರಿ ತಿಂಗಳ ಅಂತ್ಯಕ್ಕೆ ₹1,819 ಕೋಟಿಗಳನ್ನು ರಾಜ್ಯ ಸರ್ಕಾರ ಸಂಸ್ಥೆಗೆ ಮರುಪಾವತಿ ಮಾಡಿದೆ ಎಂದರು.
ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಎಂ. ಹಿರೇಮಠ, ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಎಂ. ಮೈದೂರ, ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ ಉಪಸ್ಥಿತರಿದ್ದರು.