ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ
ಈಗಾಗಲೇ ತಂಬಾಕು ಸೇವಿಸಿ ಕ್ಯಾನ್ಸರ್ ನಿಂದ ಬಳಲುತ್ತಿರುವ ರೋಗಿಗಳನ್ನು ನೋಡಿಯಾದರೂ ತಂಬಾಕು ಉತ್ಪನ್ನ ಸೇವನೆ ತ್ಯಜಿಸಿ ಆರೋಗ್ಯವಂತ ಜೀವನ ನಡೆಸಬೇಕು ಎಂದು ಸಾರ್ವಜನಿಕ ಆಸ್ಪತ್ರೆ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಆರ್. ಕೇಶವಮೂರ್ತಿ ಸಲಹೆ ನೀಡಿದರು.ಶನಿವಾರ ಆರೋಗ್ಯ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಘಟಕ, ಪೊಲೀಸ್ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಮೂಡಬಾಗಿಲು ಹಾಗೂ ಸುತ್ತ ಮುತ್ತಲಿನ ಹಳ್ಳಿಗಳ ಅಂಗಡಿಗಳ ಮೇಲೆ ದಾಳಿ ಮಾಡಿ ತಂಬಾಕು ಉತ್ಪನ್ನ ವಶಪಡಿಕೊಂಡು 6 ಪ್ರಕರಣ ದಾಖಲು ಮಾಡಿ 2200 ರು. ದಂಡ ವಿಧಿಸಿದ ನಂತರ ಜನರಲ್ಲಿ ಜಾಗೃತಿ ಮೂಡಿಸಿ ಮಾತನಾಡಿದರು. ತಂಬಾಕು ಉತ್ಪನ್ನ ಸೇವನೆಯಿಂದ ಕ್ಯಾನ್ಸರ್ ರೋಗ ಬರುವ ಸಾಧ್ಯತೆ ಇದೆ. ತುಂಬಾಕು ಉತ್ಪನ್ನಗಳಾದ ಬೀಡಿ, ಸಿಗರೇಟು, ಪಾನ್ ಪರಾಗ್, ಗುಟ್ಕಾ ಸೇವನೆ ಮಾಡಬಾರದು ಎಂದರು.
ನರಸಿಂಹರಾಜಪುರ ಪೊಲೀಸ್ ಠಾಣೆ ಎಎಸ್ ಐ ಎಚ್.ಎ.ಶ್ರೀಧರ್ ಮಾತನಾಡಿ, ಪ್ರತಿ ಅಂಗಡಿ ಮಾಲೀಕರು ತಮ್ಮ ಅಂಗಡಿ ಮುಂದೆ ಧೂಮಪಾನ ನಿಷೇದಿಸಿದೆ. 18 ವರ್ಷದ ಒಳಗಿನ ಮಕ್ಕಳಿಗೆ ತಂಬಾಕು ಉತ್ಪನ್ನ ಮಾರಾಟ ಮಾಡುವುದಿಲ್ಲ ಎಂದು ಕಡ್ಡಾಯವಾಗಿ ನಾಮಫಲಕ ಹಾಕಿಸಬೇಕು. ಬಹಿರಂಗವಾಗಿ ತಂಬಾಕು ಉತ್ಪನ್ನ ಪ್ರದರ್ಶಿಸುವುದು, ಸೇವಿಸಲು ಉತ್ತೇಜನ ನೀಡುವ ಹಾಗೂ ಶಾಲೆಯ 100 ಮೀ. ಅಂತರದಲ್ಲಿ ಮಾರಾಟ ಮಾಡುವುದು ಕಾನೂನಿನಂತೆ ಅಪರಾಧ ಎಂದರು.ಶಿಕ್ಷಣ ಇಲಾಖೆ ಸಿಆರ್.ಪಿ ಗಿರೀಶ್ ನಾಯಕ್ ಮಾತನಾಡಿ, ತಂಬಾಕು ಉತ್ಪನ್ನಗಳ ದುಷ್ಪರಿಣಾಮದ ಬಗ್ಗೆ ಅಂಗಡಿ ಮಾಲೀಕರು ತಿಳಿದಿರಬೇಕು. ವಿದ್ಯಾರ್ಥಿಗಳಿಗೆ ತಂಬಾಕು ಉತ್ಪನ್ನ ಮಾರಾಟ ಮಾಡುವುದನ್ನು ಸರ್ಕಾರ ನಿಷೇಧಿಸಿದೆ ಎಂದರು. ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಲ್.ಎಂ.ದರ್ಶನಾಥ ಮಾತನಾಡಿ, ಪ್ರಸ್ತುತ ನಕಲಿ ತಂಬಾಕು ಉತ್ಪನ್ನಗಳು ಬರುತ್ತಿದ್ದು ಅಂಗಡಿ ಮಾಲೀಕರು ಜಾಗ್ರತೆ ವಹಿಸಬೇಕು ಎಂದರು.