ಕಾಫಿ ಬೆಳೆ ಹಾನಿ ಬಗ್ಗೆ ಸದನದಲ್ಲಿ ಪ್ರಸ್ತಾಪಿಸುವೆ

KannadaprabhaNewsNetwork | Published : Jul 22, 2024 1:25 AM

ಸಾರಾಂಶ

ರಾಜ್ಯ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್‌ ಸಕಲೇಶಪುರಕ್ಕೆ ಭೇಟಿ ನೀಡಿ, ಅತಿಯಾದ ಮಳೆಗೆ ಹಾನಿಗೀಡಾಗಿರುವ ಕಾಫಿ ತೋಟಗಳನ್ನು ಪರಿಶೀಲನೆ ನಡೆಸಿದರು. ಕಳೆದ ಒಂದು ತಿಂಗಳ ನಿರಂತರ ಮಳೆ ಹಾಗೂ ಗಾಳಿಯಿಂದ ಕಾಫಿ, ಮೆಣಸಿನ ಬೆಳೆ ಸಾಕಷ್ಟು ಹಾನಿಗೊಂಡಿದೆ. ಈ ಬಗ್ಗೆ ಸದನದಲ್ಲಿ ಪ್ರಸ್ತಾಪಿಸುವ ಮೂಲಕ ಬೆಳೆಗಾರರ ನೆರವಿಗೆ ಧಾವಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಕಾಫಿ ಬೆಳೆಗಾರರ ಹಿತ ಕಾಯಲು ಸದಾ ಬದ್ಧನಾಗಿದ್ದೇನೆ ಎಂದು ರಾಜ್ಯ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್‌ ಹೇಳಿದರು.

ಭಾನುವಾರ ಶಿರಾಡಿಘಾಟ್‌ನ ದೊಡ್ಡತಪ್ಪಲೆ ಗ್ರಾಮದ ಸಮೀಪ ಭೂ ಕುಸಿತಗೊಂಡಿರುವ ಪ್ರದೇಶಕ್ಕೆ ಭೇಟಿ ನೀಡಿದ ನಂತರ ಅತಿಯಾದ ಮಳೆಗೆ ಹಾನಿಗೀಡಾಗಿರುವ ಕಾಫಿ ತೋಟಗಳನ್ನು ಪರಿಶೀಲನೆ ನಡೆಸಿ ಹಾಸನ ಬೆಳೆಗಾರರ ಸಂಘದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಕಳೆದ ಒಂದು ತಿಂಗಳ ನಿರಂತರ ಮಳೆ ಹಾಗೂ ಗಾಳಿಯಿಂದ ಕಾಫಿ, ಮೆಣಸಿನ ಬೆಳೆ ಸಾಕಷ್ಟು ಹಾನಿಗೊಂಡಿದೆ. ಈ ಬಗ್ಗೆ ಸದನದಲ್ಲಿ ಪ್ರಸ್ತಾಪಿಸುವ ಮೂಲಕ ಬೆಳೆಗಾರರ ನೆರವಿಗೆ ಧಾವಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ತಿಳಿಸಿದರು.

ಕಳೆದ ಬಿಜೆಪಿ ಸರ್ಕಾರದಲ್ಲಿ ಕಂದಾಯ ಮಂತ್ರಿಯಾಗಿದ್ದ ವೇಳೆ ಬೆಳೆಗಾರರಿಗೆ ಅಂಟಿದ್ದ ಭೂಗಳ್ಳರ ಪಟ್ಟವನ್ನು ತೆಗೆದಿದ್ದು ನಾನು. ನಮ್ಮ ಸರ್ಕಾರದ ಅವಧಿಯಲ್ಲಿ ಒತ್ತುವರಿ ಜಮೀನು ಗುತ್ತಿಗೆ ನೀಡುವ ಸಂಬಂಧ ಆರಂಭಿಸಿದ್ದ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಕೃಷಿ ಮಂತ್ರಿಯೊಂದಿಗೆ ಈ ಸಂಬಂಧ ಶೀಘ್ರವೆ ಚರ್ಚಿಸಿ ಜಾರಿಗೊಳಿಸುವಂತೆ ಒತ್ತಾಯಿಸಲಾಗುವುದು ಎಂದರು.

ಫಸಲ್ ಭಿಮಾ ಯೋಜನೆಗೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಿಸುವಂತೆ ಸರ್ಕಾರಕ್ಕೆ ಒತ್ತಡ ಹೇರಲಾಗುವುದು ಎಂದರು. ಇನ್ನು ಕಾಡಾನೆ ಸಮಸ್ಯೆ ಸಂಕೀರ್ಣವಾಗಿದ್ದು ಸಂಪೂರ್ಣ ಸ್ಥಳಾಂತರವೇ ಇದಕ್ಕೆ ಮದ್ದು ಎಂಬುದು ಎಲ್ಲರಿಗೂ ತಿಳಿದಿರುವ ವಾಸ್ತವವಾದರೂ, ಈ ಪ್ರಕ್ರಿಯೆ ತೀರ ಪ್ರಯಾಸಕರವಾಗಿದೆ. ಆದ್ದರಿಂದ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡುವುದು ಸೂಕ್ತವಾಗಿದ್ದು ಈ ಯೋಜನೆಯನ್ನು ಹೆಚ್ಚು ಜಾರಿಗೊಳಿಸುವಂತೆ ಒತ್ತಾಯ ಮಾಡಲಾಗುವುದು ಎಂದರು. ಚತುಷ್ಪಥ ರಸ್ತೆ ನಿರ್ಮಾಣ ತೀರ ವಿಳಂಬವಾಗಿದ್ದು, ಕಾರಣ ಕೇಳಿ ನೋಟಿಸ್ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗುವುದು ಹಾಗೂ ಕಡಿದಾಗಿ ಬೆಟ್ಟಗಳನ್ನು ಕಡಿದಿರುವುದು ಭೂಕುಸಿತಕ್ಕೆ ಕಾರಣವಾಗಿದೆ. ಚತುಷ್ಪಥ ರಸ್ತೆ ಸಮಸ್ಯೆ ನಿವೇದಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದರು. ಕೌಡಳ್ಳಿ ಗ್ರಾಮದಲ್ಲಿ ಕುಸಿತಗೊಂಡಿರುವ ಮನೆ ಹಾಗೂ ಶಿರಾಡಿಘಾಟ್‌ನಲ್ಲಿ ಭೂಕುಸಿತಗೊಂಡಿರುವ ಪ್ರದೇಶ ಹಾಗೂ ರಾಮೇನಹಳ್ಳಿ ಗ್ರಾಮದಲ್ಲಿ ಹಾನಿಗೊಂಡಿರುವ ಕಾಫಿತೋಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಜಿಲ್ಲಾಧಿಕಾರಿ ಸತ್ಯಭಾಮ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್‌ ಸುಜೀತಾ, ಉಪವಿಭಾಗಾಧಿಕಾರಿ ಡಾ.ಎಂ.ಕೆ ಶೃತಿ, ತಹಸೀಲ್ದಾರ್ ಮೇಘನಾ, ತಾಲೂಕು ಬಿಜೆಪಿ ಅಧ್ಯಕ್ಷ ವಳಲಹಳ್ಳಿ ಅಶ್ವತ್ಥ್‌ ಮುಂತಾದವರಿದ್ದರು.* ಹೇಳಿಕೆ1ಒಂದು ಕಾಲದ ಶ್ರೀಮಂತ ಕಾಫಿ ಬೆಳೆಗಾರರು ಇಂದು ವಿವಿಧ ಸಮಸ್ಯೆಗಳಿಗೆ ಸಿಲುಕಿ ಯಾರಿಗೂ ಬೇಡದ ವ್ಯಕ್ತಿಯಾಗಿದ್ದಾರೆ. ಗೌರವಯುತ ಜೀವನ ನಡೆಸುವುದು ದುಸ್ತರವಾಗಿದೆ. ಆದ್ದರಿಂದ ಕಾಫಿ ಬೆಳೆಗಾರರನ್ನು ಕಾಡುತ್ತಿರುವ ಸಮಸ್ಯೆಗಳ ಬಗ್ಗೆ ಸದನದಲ್ಲಿ ಸಮಗ್ರವಾಗಿ ಚರ್ಚಿಸಿ ಪರಿಹಾರ ಕಂಡುಹಿಡಿಯಬೇಕು. ಸುರೇಶ್‌, ಬೇಲೂರು ಶಾಸಕ

* ಹೇಳಿಕೆ 2

ತಾಲೂಕಿನಲ್ಲಿ ಕಾಡಾನೆ ಸಮಸ್ಯೆಯಿಂದ ಭತ್ತದ ಬೆಳೆ ಬೆಳೆಯಲಾಗದೆ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಕೇರಳ ಮಾದರಿಯಲ್ಲಿ ಭತ್ತ ಬೆಳೆಯುವವರಿಗೆ ಪರಿಹಾರ ನೀಡುವಂತೆ ಸರ್ಕಾರವನ್ನು ಒತ್ತಾಯಿಸಬೇಕು ಹಾಗೂ ಆನೆಧಾಮ ಸ್ಥಾಪಿಸುವ ಮೂಲಕ ಸಮಸ್ಯೆ ಬಗೆಹರಿಸಬೇಕು ಎಂದು ಸದನದಲ್ಲಿ ಮಾತನಾಡಬೇಕು.

- ಸಿಮೆಂಟ್ ಮಂಜು, ಶಾಸಕ

Share this article