ಶ್ರೀಕಾಂತ ಪೂಜಾರಿ ಮನೆಗೆ ಆರ್‌.ಅಶೋಕ ಭೇಟಿ

KannadaprabhaNewsNetwork |  
Published : Jan 04, 2024, 01:45 AM IST
ಭೇಟಿ | Kannada Prabha

ಸಾರಾಂಶ

ಬುಧವಾರ ಸಂಜೆ ವಿಧಾನ ಸಭೆ ಪ್ರತಿಪಕ್ಷದ ನಾಯಕ ಆರ್‌.ಅಶೋಕ ಶ್ರೀಕಾಂತ ಪೂಜಾರಿ ಮನೆಗೆ ಭೇಟಿ ನೀಡಿದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ರಾಮಜನ್ಮಭೂಮಿ ಹೋರಾಟದ ಬಳಿಕ ಪ್ರತಿಭಟನೆಯಲ್ಲಿ ಪಾಲ್ಗೊಂಡು ಪ್ರಕರಣ ದಾಖಲಿಸಿದ 31 ವರ್ಷದ ಬಳಿಕ ಬಂಧಿತನಾಗಿರುವ ಶ್ರೀಕಾಂತ ಪೂಜಾರಿ ಮನೆಗೆ ಬುಧವಾರ ಸಂಜೆ ವಿಧಾನ ಸಭೆ ಪ್ರತಿಪಕ್ಷದ ನಾಯಕ ಆರ್‌.ಅಶೋಕ ಭೇಟಿ ನೀಡಿದರು.

ಶಹರ ಠಾಣೆಯ ಎದುರಿಗೆ ಪ್ರತಿಭಟನೆ ಮುಗಿದ ಬಳಿಕ, ಸಂಜೆ ವೇಳೆ ಚನ್ನಪೇಟೆಯಲ್ಲಿರುವ ಪೂಜಾರಿ ಮನೆಗೆ ಭೇಟಿ ನೀಡಿ, ಕುಟುಂಬದ ಸದಸ್ಯರಿಗೆ ಧೈರ್ಯ ತುಂಬಿದರು. ಯಾವುದೇ ಕಾರಣಕ್ಕೂ ಭಯಪಡಬೇಡಿ. ನಿಮ್ಮೊಂದಿಗೆ ನಾವಿದ್ದೇವೆ ಎಂದು ಭರವಸೆ ನೀಡಿದರಲ್ಲದೇ, ಇದನ್ನು ಇಲ್ಲಿಗೆ ಬಿಡುವುದಿಲ್ಲ. ಜ.9ರಂದು ಮತ್ತೆ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ರಾಮಮಂದಿರ ಉದ್ಘಾಟನೆಗೂ ಮುನ್ನ 4 ಜನ ಹಿಂದೂಗಳನ್ನು ಜೈಲಿಗೆ ಕಳುಹಿಸಿದರೆ ಉಳಿದವರು ಬರಲ್ಲ ಎಂಬ ಭಾವನೆ ಕಾಂಗ್ರೆಸ್‌ ಸರ್ಕಾರದ್ದು. ಆದರೆ ಅದೆಲ್ಲ ಸಾಧ್ಯವಿಲ್ಲ. ಇಂಥ ಗೊಡ್ಡು ಬೆದರಿಕೆಗಳಿಗೆ ಹೆದರುವ ಪ್ರಶ್ನೆಯೇ ಇಲ್ಲ ಎಂದರು.

9ಕ್ಕೆ ಮತ್ತೆ ಹೋರಾಟ:

ಈ ಪ್ರಕರಣವನ್ನು ಇಲ್ಲಿಗೆ ಬಿಡಲ್ಲ. ಬಂಧನ ಮಾಡಿರುವ ಇನ್‌ಸ್ಪೆಕ್ಟರ್‌ ಅನ್ನು ಅಮಾನತು ಮಾಡಬೇಕು. ಇಲ್ಲದಿದ್ದಲ್ಲಿ ಮತ್ತೆ ಜ.9ರಂದು ದೊಡ್ಡ ಹೋರಾಟ ಮಾಡುತ್ತೇವೆ. ಈ ಬಗ್ಗೆ ರಾಜ್ಯಾಧ್ಯಕ್ಷ ವಿಜಯೇಂದ್ರ ಜತೆಗೆ ಮಾತನಾಡುತ್ತೇನೆ ಎಂದರು.

ಹರಿಪ್ರಸಾದಗೆ ಮತಿಭ್ರಮಣೆಯಾಗಿದೆ. ಹೀಗಾಗಿ, ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ. ಕೂಡಲೇ ಅವರನ್ನು ಬಂಧಿಸಬೇಕು ಎಂದರು.

ಸಿಎಂಗೆ ಟಾಂಗ್‌:

ಸಮಾಜ ಘಾತುಕ ಶಕ್ತಿಗಳ ಪರವಾಗಿ ಹೋರಾಟ ಮಾಡುವ ಮೂಲಕ ಬಿಜೆಪಿ ಅಗೌರವ ತೋರಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್‌ ಮಾಡಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ವಿಧಾನಸೌಧವನ್ನು ಕಾಲಲ್ಲಿ ಒದ್ದರಲ್ಲ. ಆವಾಗ ಅವರಿಗೆ ಕಾನೂನಿನ ಜ್ಞಾನ ಇರಲಿಲ್ಲವಾ? ಕಾನೂನು ಕೈಗೆ ತೆಗೆದುಕೊಂಡವರು ನೀವು ಎಂದು ಟಾಂಗ್‌ ನೀಡಿದರು.

ಇದು ಹಿಂದೂ ದೇಶ. ಇಲ್ಲಿ ಶ್ರೀರಾಮನಿಗೆ ಜೈ ಎನ್ನಬಾರದಾ? ನಾವೇನು ಪಾಕಿಸ್ತಾನದಲ್ಲಿದ್ದೇವಾ?. ಜನ ಇವರಿಗೆ ಸರಿಯಾದ ಪಾಠ ಕಲಿಸುತ್ತಾರೆ. ಕಾಂಗ್ರೆಸ್‌ ದೇಶವನ್ನು ಒಡೆಯುತ್ತಿದೆ. ರಾಮಾಯಣ ನಡೆದಿಲ್ಲ ಅಂತಾರೆ, ನಾವು ಯಾವಾಗಲೂ ಅಲ್ಲಾ, ಏಸು, ಅವರ ಬರ್ತ್‌ ಸರ್ಟಿಫಿಕೆಟ್ ಕೇಳಿಲ್ಲ ಎಂದರು.

ಈ ವೇಳೆ ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ ಸೇರಿದಂತೆ ಹಲವರಿದ್ದರು.

ಆರ್‌.ಅಶೋಕ ಅವರು ನನಗೆ ಧೈರ್ಯ ತುಂಬಿದರು. ಪತಿಯನ್ನು ಬಿಡುಗಡೆಗೊಳಿಸುವ ಭರವಸೆ ಕೊಟ್ಟಿದ್ದಾರೆ. ಜೈ ಶ್ರೀರಾಮ ಜೈ ಶ್ರೀರಾಮ ಅಂತಾ ಸ್ಥೈರ್ಯ ತುಂಬಿದ್ದಾರೆ. ರಾಮಮಂದಿರದ ಮಂತ್ರಾಕ್ಷತೆ ಕೊಟ್ಟಿದ್ದಾರೆ ಎಂದು ಬಂಧಿತನ ಪತ್ನಿ ಅಂಬಿಕಾ ಪೂಜಾರಿ ತಿಳಿಸಿದ್ದಾರೆ

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ