ಗುತ್ತಿಗೆದಾರರ ಸಂಘದಿಂದ ಹೃದಯಸ್ಪರ್ಶಿ ಅಭಿನಂದನೆ । ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಭಾಗಿಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಎಸ್.ಜಿ.ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಶಾಸಕರಾದ ಟಿ.ರಘುಮೂರ್ತಿ, ವೀರೇಂದ್ರ ಪಪ್ಪಿ, ಕೆ.ಎಸ್.ನವೀನ್, ಮಾಜಿ ಸಚಿವ ಎಚ್.ಆಂಜನೇಯ ಸೇರಿ ಹಲವರು ಕಾರ್ಯಕ್ರಮ ಸಾಕ್ಷೀಕರಿಸಿ ಮಂಜುನಾಥ್ ಗೆ ಶುಭ ಹಾರೈಸಿದರು.
ಮಂಜುನಾಥ್ ಗೆ ಮೈಸೂರು ಪೇಟ, ಹಾರ ಹಾಕಿ ಸನ್ಮಾನಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ರಾಜ್ಯದಲ್ಲಿ ಗುತ್ತಿಗೆದಾರರಿಗೆ ಅನೇಕ ಸಮಸ್ಯೆಗಳಿದೆ. ಎಲ್ಲವನ್ನು ಸರ್ಕಾರದ ಗಮನಕ್ಕೆ ತಂದು ಪರಿಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.ಬಿಜೆಪಿ ಸರ್ಕಾರ ಅಧಿಕಾರ ಬಿಟ್ಟು ಹೋಗುವಾಗ 2 ಲಕ್ಷ ಕೋಟಿ ರು. ಬಿಲ್ ಬಾಕಿ ಉಳಿಸಿತ್ತು. ಇದರಿಂದಾಗಿ ಗುತ್ತಿಗೆದಾರರು ಸಂಕಷ್ಟದಲ್ಲಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಂತ ಹಂತವಾಗಿ ಗುತ್ತಿಗೆದಾರರ ಬಿಲ್ ಪಾವತಿಸುತ್ತಿದೆ. ರಾಜ್ಯಾದ್ಯಂತ ಗುತ್ತಿಗೆದಾರರ ಹಿತ ಕಾಯುವತ್ತ ನೂತನ ರಾಜ್ಯಾಧ್ಯಕ್ಷ ಆರ್.ಮಂಜುನಾಥ್ ಗಮನ ಕೊಡಬೇಕೆಂದು ಸುಧಾಕರ್ ಮನವಿ ಮಾಡಿದರು.
ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ಕಾಮಗಾರಿಗಳಿಗೆ ಕೈಯಿಂದ ಬಂಡವಾಳ ಹೂಡಿ ಗುತ್ತಿಗೆದಾರರು ಸಂಕಷ್ಟದಲ್ಲಿದ್ದಾರೆ. ಗುತ್ತಿಗೆದಾರರು ನಡೆಸುವ ಕಾಮಗಾರಿಗಳು ಸರ್ಕಾರ ಮತ್ತು ಸಮಾಜಕ್ಕೆ ಉಪಯೋಗವಾಗುತ್ತದೆ. 2013 ರಿಂದ 18 ರವರೆಗೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಗುತ್ತಿಗೆದಾರರಿಗೆ ಸುವರ್ಣ ಯುಗವಾಗಿತ್ತು. ಗುತ್ತಿಗೆದಾರರಲ್ಲಿಯೂ ಪೈಪೋಟಿಯಿರುವುದರಿಂದ ಟೆಂಡರ್ ಕರೆಯುವ ಮುನ್ನವೇ ಗುತ್ತಿಗೆದಾರರು ಸಂಬಂಧಪಟ್ಟವರನ್ನು ಕಾಣುವಂತ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ಆರ್.ಮಂಜುನಾಥ್‍ಗೆ ಗುತ್ತಿಗೆದಾರರ ಸಮಸ್ಯೆಗಳನ್ನು ಬಗೆಹರಿಸುವ ಜವಾಬ್ದಾರಿ ಸಿಕ್ಕಿರುವುದು ಸಂತೋಷದ ಸಂಗತಿ. ರಾಜ್ಯಾದ್ಯಂತ ಗುತ್ತಿಗೆದಾರರ ಹಿತ ಕಾಪಾಡುವತ್ತ ಗಮನ ಕೊಡಬೇಕು. ದೊಡ್ಡ ಗುತ್ತಿಗೆದಾರರಿಗೆ ಸಮಸ್ಯೆಯಿಲ್ಲ. ಮಧ್ಯಮ ಮತ್ತು ಸಣ್ಣ ಗುತ್ತಿಗೆದಾರರು ತೊಂದರೆಯಲ್ಲಿದ್ದಾರೆ. ಅವರ ಪರವಾಗಿ ಗುತ್ತಿಗೆದಾರರ ಸಂಘದ ನೂತನ ರಾಜ್ಯಾಧ್ಯಕ್ಷ ಆರ್.ಮಂಜುನಾಥ್ ನಿಲ್ಲಬೇಕು. ಮಂತ್ರಿಗಳು, ಶಾಸಕರಿಂದ ಗುತ್ತಿಗೆದಾರರಿಗೆ ತೊಂದರೆಯಾಗುತ್ತಿಲ್ಲ. ಅಧಿಕಾರಿಗಳಿಂದ ಕಿರುಕುಳ ಅನುಭವಿಸುವಂತಾದಾಗ ಧ್ವನಿ ಎತ್ತಬೇಕು. ಸರ್ಕಾರಗಳು ಯಾವುದೇ ಬರಬಹುದು, ಹೋಗಬಹುದು. ಗುತ್ತಿಗೆದಾರರು ಮಾತ್ರ ನಿರಂತರವಾಗಿರುತ್ತಾರೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಆರ್.ಮಂಜುನಾಥ್, ನಾನು ರಾಜ್ಯಾಧ್ಯಕ್ಷನಾಗಲು ಜಿಲ್ಲಾ ಗುತ್ತಿಗೆದಾರರ ಸಂಘದ ಪರಿಶ್ರಮವಿದೆ. ಗುತ್ತಿಗೆದಾರರು ಸಂಕಷ್ಟದಲ್ಲಿದ್ದಾರೆ. ಮೂರ್ನಾಲ್ಕು ವರ್ಷಗಳಿಂದ ಬಿಲ್ ಬಾಕಿ ಉಳಿದಿದೆ. ಜಿಎಸ್‌ಟಿ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಹೊಳಲ್ಕೆರೆ ತಾಲೂಕಿನಲ್ಲಿ ಹೊರ ರಾಜ್ಯಗಳಿಂದ ಗುತ್ತಿಗೆದಾರರು ಬಂದು ಕಾಮಗಾರಿಗಳನ್ನು ಮಾಡುತ್ತಿದ್ದಾರೆ. ನಮ್ಮ ಜಿಲ್ಲೆಯಲ್ಲಿಯೇ ಗುಣಮಟ್ಟದ ಕೆಲಸ ಮಾಡುವ ಗುತ್ತಿಗೆದಾರರುಗಳಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು, ಮುಖ್ಯಮಂತ್ರಿ ಜೊತೆ ಗುತ್ತಿಗೆದಾರ ಸಭೆ ಕರೆದು ಸಮಸ್ಯೆಗಳನ್ನು ಕೇಳಿ ಟೆಂಡರ್ ಹಾಕಲು ಅವಕಾಶ ಕಲ್ಪಿಸಿಕೊಡಲಿ ಎಂದು ಮನವಿ ಮಾಡಿದರು.
ಸಣ್ಣ ಸಣ್ಣ ಗುತ್ತಿಗೆದಾರರ ಪರ ಕೆಲಸ ಮಾಡುತ್ತೇನೆ. ಯಾರು ಭಯ ಪಡುವ ಅವಶ್ಯಕತೆಯಿಲ್ಲ. 30 ಸಾವಿರ ಕೋಟಿ ರು. ಬಿಲ್ ಬಾಕಿಯಿದೆ. ಅದರಲ್ಲಿ 15 ಸಾವಿರ ಕೋಟಿ ರು. ಕೊಡುವುದಾಗಿ ಸಿಎಂ ಸಿದ್ದರಾಮಯ್ಯನವರು ಭರವಸೆ ಕೊಟ್ಟಿದ್ದಾರೆ. ಕೆಲವು ಸಮಸ್ಯೆಗಳನ್ನು ಹೇಳಿಕೊಳ್ಳಲು ಆಗುವುದಿಲ್ಲ. ನನಗೆ ಸಿಕ್ಕಿರುವ ಅಧಿಕಾರವನ್ನು ಸಮರ್ಥವಾಗಿ ನಿಭಾಯಿಸುತ್ತೇನೆ. ಚಿತ್ರದುರ್ಗ ಜಿಲ್ಲೆಗೆ ಕೆಟ್ಟ ಹೆಸರು ತರುವುದಿಲ್ಲವೆಂದು ಆಶ್ವಾಸನೆ ನೀಡಿದರು.