ಕಾಂಗ್ರೆಸ್ ಸರ್ಕಾರವನ್ನು ಅದೇ ಪಕ್ಷದ ಶಾಸಕರೇ ಕೆಡವುತ್ತಾರೆ : ಗೋವಿಂದ ಕಾರಜೋಳ ಹೇಳಿಕೆ

KannadaprabhaNewsNetwork |  
Published : Nov 23, 2024, 12:33 AM ISTUpdated : Nov 23, 2024, 01:17 PM IST
Govinda Karajola

ಸಾರಾಂಶ

ಸಿದ್ದರಾಮಯ್ಯ ತಮ್ಮ ಮೇಲೆ ಆರೋಪಗಳು ಬಂದಾಗಲೆಲ್ಲಾ ಬಿಜೆಪಿ ಕಡೆ ಬೊಟ್ಟು ಮಾಡುವಂತಹ ಕಲಾಕಾರ. ಅವರ ವಿರುದ್ಧ ಈಗ ಸ್ಪಪಕ್ಷದ ಶಾಸಕರೇ ಬಂಡಾಯವೆದ್ದಿದ್ದಾರೆ. ಕಾಂಗ್ರೆಸ್ ಸರ್ಕಾರವನ್ನು ಅದೇ ಪಕ್ಷದ ಶಾಸಕರೇ ಕೆಡವುತ್ತಾರೆ ಎಂದು ಚಿತ್ರದುರ್ಗ ಕ್ಷೇತ್ರ ಸಂಸದ ಗೋವಿಂದ ಕಾರಜೋಳ ಹೇಳಿದ್ದಾರೆ.

  ದಾವಣಗೆರೆ : ಸಿದ್ದರಾಮಯ್ಯ ತಮ್ಮ ಮೇಲೆ ಆರೋಪಗಳು ಬಂದಾಗಲೆಲ್ಲಾ ಬಿಜೆಪಿ ಕಡೆ ಬೊಟ್ಟು ಮಾಡುವಂತಹ ಕಲಾಕಾರ. ಅವರ ವಿರುದ್ಧ ಈಗ ಸ್ಪಪಕ್ಷದ ಶಾಸಕರೇ ಬಂಡಾಯವೆದ್ದಿದ್ದಾರೆ. ಕಾಂಗ್ರೆಸ್ ಸರ್ಕಾರವನ್ನು ಅದೇ ಪಕ್ಷದ ಶಾಸಕರೇ ಕೆಡವುತ್ತಾರೆ ಎಂದು ಚಿತ್ರದುರ್ಗ ಕ್ಷೇತ್ರ ಸಂಸದ ಗೋವಿಂದ ಕಾರಜೋಳ ಹೇಳಿದರು.

ನಗರದಲ್ಲಿ ಶುಕ್ರವಾರ ಬಿಜೆಪಿ ಹಮ್ಮಿಕೊಂಡಿದ್ದ ವಕ್ಫ್ ವಿರುದ್ಧ ಹೋರಾಟದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ರೇಸ್ ನಡೆದಿದೆ. ಶಾಮನೂರು ಶಿವಶಂಕರಪ್ಪ, ಮಲ್ಲಿಕಾರ್ಜುನ ಖರ್ಗೆ, ಎಂ.ಬಿ.ಪಾಟೀಲ, ಡಾ. ಜಿ.ಪರಮೇಶ್ವರ ಜೊತೆಗೆ ಇದೀಗ ಸಚಿವ ಕೆ.ಎಚ್‌.ಮುನಿಯಪ್ಪ ಹೊಸ ಸೇರ್ಪಡೆಯಾಗಿದ್ದಾರೆ. ಬಹುಶಃ ಮುನಿಯಪ್ಪ ಸೇರಿದಂತೆ ಸಿಎಂ ಸ್ಥಾನದ ಆಕಾಂಕ್ಷಿಗಳಾದ ಕಾಂಗ್ರೆಸ್ ನಾಯಕರೇ ಶಾಸಕರ ಖರೀದಿಗೆ ಕೋಟಿ ಕೋಟಿಗಟ್ಟಲೇ ಹಣ ಇಟ್ಟುಕೊಂಡಿರಬೇಕು ಎಂದು ವರು ಹೇಳಿದರು.

ಶಿಗ್ಗಾಂವಿ, ಸಂಡೂರು, ಚನ್ನಪಟ್ಟಣ ಈ ಮೂರೂ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಗಳು ಜಯ ಸಾಧಿಸಲಿದ್ದಾರೆ. ಈಚೆಗೆ ನಡೆದ ಕೆಲವು ರಾಜ್ಯಗಳ ಚುನಾವಣೆಗಳಲ್ಲಿ ಎರಡು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಎಲ್ಲ ಸಂಸ್ಥೆಗಳು ನಡೆಸಿದ ಸಮೀಕ್ಷೆಗಿಂತಲೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಜಯ ಸಾಧಿಸಲಿದೆ. ಈ ಬಗ್ಗೆ ಯಾವುದೇ ಅನುಮಾನವೂ ಬೇಡ ಎಂದು ತಿಳಿಸಿದರು.

ದಿನದಿನಕ್ಕೂ ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಸರ್ಕಾರಕ್ಕೆ ಹೊರೆಯಾಗುತ್ತಿವೆ. ಸಿದ್ದರಾಮಯ್ಯ ಆಳ್ವಿಕೆಯಲ್ಲಿ ಅನುದಾನವೇ ಇಲ್ಲದೇ, ಶಾಸಕರು ವಿಷ ಕುಡಿಯುವ ಪರಿಸ್ಥಿತಿಗೆ ಬಂದಿದ್ದಾರೆ. ಅನುದಾನ ಇಲ್ಲದ ಕಾರಣಕ್ಕೆ ಸ್ವತಃ ಕಾಂಗ್ರೆಸ್ ಶಾಸಕರೇ ಹೀಗೆಲ್ಲಾ ಮಾತನಾಡುತ್ತಿದ್ದಾರೆ. ಅದೇ ಕಾರಣಕ್ಕೆ ಬಿಪಿಎಲ್ ಕಾರ್ಡ್ ರದ್ದುಪಡಿಸಲು ಸರ್ಕಾರ ಹೊರಟಿದೆ. ಈಗಾಗಲೇ ಲಕ್ಷಾಂತರ ಬಿಪಿಎಲ್ ಕಾರ್ಡ್ ರದ್ದಾಗಿವೆ ಎಂದು ಅವರು ದೂರಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕೊಡಬೇಕು. ಯಾವುದೇ ಕಾರಣಕ್ಕೂ ಅನ್ಯಾಯ ಮಾಡಬಾರದು. ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿಯೂ ದರ ಏರಿಕೆ ಮಾಡಲಾಗಿದೆ. ಮದ್ಯ ಮತ್ತು ಇತರೆ ವಿಚಾರದಲ್ಲಿ ಈಗಾಗಲೇ ಹಣ ವಸೂಲಿ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಗೋವಿಂದ ಕಾರಜೋಳ, ವಕ್ಫ್‌ ವಿರುದ್ಧ ಶಾಸಕ ಬಸವನಗೌಡ ಪಾಟೀಲ ಯತ್ನಾಳ ನೇತೃತ್ವದ ಹೋರಾಟಕ್ಕೂ ಬೆಂಬಲ ಸೂಚಿಸಿದರು.

ಸಿಂಧಗಿಯ ಬಸವ ತತ್ವ ಮಠವೂ ವಕ್ಫ್ ಆಸ್ತಿ ಎನ್ನಲಾಗಿದೆ. ದೇವರ ಹಿಪ್ಪರಗಿ ಬಳಿ ಕೊಡಗಾನೂರು ಹಳ್ಳಿಯನ್ನೇ ವಕ್ಫ್ ಆಸ್ತಿಯೆಂದು ಮಾಡಲಾಗಿದೆ. ಸಾಕಷ್ಟು ಪ್ರಮಾಣದಲ್ಲಿ ವಕ್ಫ್ ಮಂಡಳಿ ಹೆಸರಿಗೆ ಸೇರ್ಪಡೆ ಮಾಡಲಾಗಿದೆ. ಇದು ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಘೋರ ಅನ್ಯಾಯ. ರೈತರಿಗೆ, ಜನರಿಗೆ ಸಿದ್ದರಾಮಯ್ಯ ದ್ರೋಹ ಬಗೆದಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಹೋರಾಟ ಹಮ್ಮಿಕೊಳ್ಳಲಾಗಿದೆ

- ಗೋವಿಂದ ಕಾರಜೋಳ, ಚಿತ್ರದುರ್ಗ ಸಂಸದ

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ