ಅಂಶಿ ಪ್ರಸನ್ನಕುಮಾರ್
ಸಂಸತ್‌ನಲ್ಲಿ ರಾಜ್ಯಸಭೆಯನ್ನು ಮೇಲ್ಮನೆ, ಲೋಕಸಭೆಯನ್ನು ಕೆಳಮನೆ ಎಂದು ಕರೆಯಲಾಗುತ್ತದೆ. ಅದೇ ರೀತಿ ರಾಜ್ಯದಲ್ಲಿ ವಿಧಾನ ಪರಿಷತ್ ಮೇಲ್ಮನೆಯಾದರೆ, ವಿಧಾನಸಭೆ ಕೆಳಮನೆ. ಮೈಸೂರು, ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಈವರೆಗೆ ಆಯ್ಕೆಯಾಗಿರುವ ಹದಿನಾರು ಮಂದಿ ಪೈಕಿ ಕೆಲವರು ಮೂರು ಮನೆ, ಕೆಲವರು ಎರಡು ಮನೆ, ಕೆಲವರು ಒಂದೇ ಮನೆ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಕೆಲವರು ನೇರವಾಗಿ ಲೋಕಸಭೆಗೆ ಹೋದರೆ ಮತ್ತೆ ಕೆಲವರು ಅಲ್ಲಿಂದ ವಿಧಾನಸಭೆ, ವಿಧಾನ ಪರಿಷತ್ಗೆ ಬಂದಿದ್ದಾರೆ. ಮತ್ತೆ ಕೆಲವರು ವಿಧಾನಸಭೆಯಿಂದ ಲೋಕಸಭೆಗೆ ಹೋಗಿದ್ದಾರೆ. ಕೆಲವರು ನಂತರ ರಾಜ್ಯಸಭಾ ಸದಸ್ಯರಾಗಿದ್ದಾರೆ.ಮೂರು ಮನೆ: ಎನ್. ರಾಚಯ್ಯ ಅವರು ಮೈಸೂರಿನಿಂದ ಒಮ್ಮೆ ಲೋಕಸಭೆ, ಹುಣಸೂರಿನಿಂದ ಒಮ್ಮೆ ವಿಧಾನಸಭೆ, ನಂತರ ವಿಧಾನ ಪರಿಷತ್ ಸದಸ್ಯರಾಗಿದ್ದರು. ಡಿ. ದೇವರಾಜ ಅರಸು ಅವರ ಸಂಪುಟದಲ್ಲಿ ಸಚಿವರಾಗಿದ್ದರು.
ಸಿ.ಎಚ್. ವಿಜಯಶಂಕರ್ ಅವರು ಒಂದು ಸಲ ವಿಧಾನಸಭೆ, ಎರಡು ಸಲ ಲೋಕಸಭೆ, ಒಂದು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದರು. ರಾಜ್ಯದಲ್ಲಿ ಮಂತ್ರಿಯಾಗಿ ಕೆಲಸ ಮಾಡಿದ್ದಾರೆ.
ಎರಡು ಮನೆ:
ಎಂ. ಶಂಕರಯ್ಯ ಅವರು ಮೈಸೂರಿನಿಂದ ಎರಡು ಬಾರಿ ಲೋಕಸಭೆ ನಂತರ ವಿಧಾನ ಪರಿಷತ್ ಸದಸ್ಯರಾಗಿದ್ದರು.
ವಿ. ಶ್ರೀನಿವಾಸಪ್ರಸಾದ್ ಅವರು ಚಾಮರಾಜನಗರದಿಂದ ಆರು ಬಾರಿ ಲೋಕಸಭೆ, ನಂಜನಗೂಡಿನಿಂದ ಎರಡು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದರು. ಕೇಂದ್ರ ಹಾಗೂ ರಾಜ್ಯದಲ್ಲಿ ಸಚಿವರಾಗಿದ್ದರು.
ಒಂದೇ ಮನೆ:
ಎಚ್.ಡಿ.ತುಳಸಿದಾಸ್ ಅವರು ಸತತ ಮೂರು ಬಾರಿ ಮೈಸೂರಿನಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ನೇರವಾಗಿ ಲೋಕಸಭೆ ಪ್ರವೇಶಿಸಿದವರು. ನಾಲ್ಕು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. ಜಿಪಂ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಎ. ಸಿದ್ದರಾಜು ಎರಡು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. ಕಾಗಲವಾಡಿ ಎಂ. ಶಿವಣ್ಣ ಒಂದು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು.
ಪ್ರತಾಪ್ ಸಿಂಹ ನೇರವಾಗಿ ಲೋಕಸಭೆ ಪ್ರವೇಶಿಸಿದವರು. ಎರಡು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು.