ಚವಡಾಪುರ: ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಕಲಬುರಗಿ ಮತಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಮನಿ ಅವರು ಗೆಲುವು ದಾಖಲಿಸಿದ್ದರಿಂದ ಅಫಜಲ್ಪುರ ಪಟ್ಟಣದಲ್ಲಿ ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಜೆ.ಎಂ. ಕೊರಬು ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಲಾಯಿತು.
ಸುಳ್ಳು ಭರವಸೆಗಳಿಂದಲೇ 10 ವರ್ಷ ಅಧಿಕಾರ ಅನುಭವಿಸಿದ ನರೇಂದ್ರ ಮೋದಿ ಅವರ ದುರಾಡಳಿತಕ್ಕೆ ಮತದಾರ ಪ್ರಭು ತಕ್ಕ ಪಾಠ ಕಲಿಸಿದ್ದಾರೆ. ಈಗ ಕೇಂದ್ರದಲ್ಲಿ ಇಂಡಿಯಾ ಒಕ್ಕೂಟವೇ ಸರ್ಕಾರ ರಚನೆ ಮಾಡಲಿದೆ ಎನ್ನುವ ವಿಶ್ವಾಸವಿದೆ ಎಂದ ಅವರು ಕಲಬುರಗಿ ಲೋಕಸಭೆ ಚುನಾವಣೆ ಬಹಳ ಜಿದ್ದಾ ಜಿದ್ದಿನಿಂದ ಕೂಡಿತ್ತು. ಕೊನೆಗೂ ನಮ್ಮ ಅಭ್ಯರ್ಥಿ ರಾಧಾಕೃಷ್ಣ ಅವರ ಗೆಲುವಾಗಿದ್ದು ನಮಗೆಲ್ಲ ಖುಷಿ ಹೆಚ್ಚಿಸಿದೆ. ರಾಜ್ಯದಲ್ಲಿ ಇನ್ನೊಂದಿಷ್ಟು ಸ್ಥಾನಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆಂಬ ನಿರೀಕ್ಷೆ ಇತ್ತು. ನಿರೀಕ್ಷೆ ತಕ್ಕಂತೆ ಗೆಲ್ಲಲು ಸಾಧ್ಯವಾಗಲಿಲ್ಲ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಸೋಹೇಲ ಪಟೇಲ, ರಾಜಕುಮಾರ ಪಾಟೀಲ, ಶಿವಪುತ್ರ ಜಿಡ್ಡಗಿ, ರಾಜಕುಮಾರ ಬಬಲಾದ, ರಾಮಣ್ಣ ನಾಯ್ಕೋಡಿ, ವಿಶ್ವನಾಥ ಮಲಘಾಣ, ವಿಠೋಬಾ ಹಿರೇಕುರಬರ, ಮಕ್ಬೂಲ್ ಶೇಖ್, ರವಿ ಗೌರ, ದುಂಡಪ್ಪ ಜಮಾದಾರ, ತಿಪ್ಪಣ್ಣ ಗಾಡಿವಡ್ಡರ, ದುಂಡು ಗೌಡಗಾಂವ, ರೋಹಿದಾಸ ರಾಠೋಡ, ಗುರುಶಾಂತಯ್ಯ ಝಳಕಿಮಠ, ಯಲ್ಲಾಲಿಂಗ ಅವಟಿ, ಅಂಬಣ್ಣ ಕುದರಿ ಸೇರಿದಂತೆ ಅನೇಕರು ಇದ್ದರು.