ರೇಡಿಯೋ ತಲೆಮಾರುಗಳ ನಡುವಿನ ಸೇತುವೆಯಿದ್ದಂತೆ

KannadaprabhaNewsNetwork |  
Published : Oct 11, 2025, 12:02 AM IST
ಬಬಬ | Kannada Prabha

ಸಾರಾಂಶ

ರೇಡಿಯೋ ನಮ್ಮ ಬದುಕಿನ ಒಂದು ಭಾಗ. ಅದಕ್ಕೆ ತಲೆಮಾರುಗಳನ್ನು ಜೋಡಿಸುವ ಶಕ್ತಿಯಿದೆ.ಆದರೆ ಮೊಬೈಲ್ ಹಾವಳಿಯಿಂದಾಗಿ ರೇಡಿಯೋ ಸಂಸ್ಕೃತಿ ಕ್ಷೀಣಿಸಿದೆ ಎಂದು ತುಮಕೂರು ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ, ತುಮಕೂರುರೇಡಿಯೋ ನಮ್ಮ ಬದುಕಿನ ಒಂದು ಭಾಗ. ಅದಕ್ಕೆ ತಲೆಮಾರುಗಳನ್ನು ಜೋಡಿಸುವ ಶಕ್ತಿಯಿದೆ.ಆದರೆ ಮೊಬೈಲ್ ಹಾವಳಿಯಿಂದಾಗಿ ರೇಡಿಯೋ ಸಂಸ್ಕೃತಿ ಕ್ಷೀಣಿಸಿದೆ ಎಂದು ತುಮಕೂರು ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಅಭಿಪ್ರಾಯಪಟ್ಟರು.ತುಮಕೂರು ವಿವಿ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ವಿವಿ ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಹಾಗೂ ಪುಣೆಯ ಟೈಮ್‌ ಕ್ಯಾಪ್‌ ಡಾಕ್ಯುಮೆಂಟರೀಸ್ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ‘ಮೈ ರೇಡಿಯೋ ಮೈ ಲೈಫ್’ ಸಾಕ್ಷ್ಯಚಿತ್ರದ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.ದಶಕಗಳ ಹಿಂದೆ ‘ಮೈ ರೇಡಿಯೋ ಮೈ ಲೈಫ್’ ಆಗಿತ್ತು.ಈಗ ‘ಮೈ ಮೊಬೈಲ್ ಮೈ ಲೈಫ್’ ಎಂಬಂತಾಗಿದೆ. ಜನರು ಮೊಬೈಲ್‌ಗಳಲ್ಲಿ ಬದುಕಿನ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದಾರೆ. ಸೂಕ್ಷ್ಮ ಸಂವೇದನೆಗಳಿಂದ ದೂರವಾಗುತ್ತಿದ್ದಾರೆ ಎಂದು ವಿಷಾದಿಸಿದರು.ರೇಡಿಯೊದ ಸುವರ್ಣಯುಗವನ್ನು ಸ್ಮರಿಸಿದ ಅವರು, 1950-60 ರ ದಶಕದಲ್ಲಿ ರೇಡಿಯೋ ಹೆಮ್ಮೆ ಮತ್ತು ಸಾಮಾಜಿಕ ಸ್ಥಾನಮಾನದ ಸಂಕೇತವಾಗಿತ್ತು. ಜನರು ರೇಡಿಯೊವನ್ನು ಕೇಳಲು ಉತ್ಸುಕರಾಗಿದ್ದರು. ಅದು ಭೂತ ಮತ್ತು ವರ್ತಮಾನದ ಬಗ್ಗೆ ಅವರಿಗೆ ಮಾಹಿತಿ ನೀಡುತ್ತಿತ್ತು. ಕೇಳುಗರು ಕ್ರಿಕೆಟ್ ನೇರಪ್ರಸಾರದ ವರದಿಗಳಿಗೆ ಹಾಗೂ ಚಿತ್ರಗೀತೆಗಳಿಗೆ ಕಾದು ಕೂರುತ್ತಿದ್ದರು ಎಂದರು.ರೇಡಿಯೋ ಜನರ ಕಲ್ಪನೆ ಹಾಗೂ ಸಂವಹನವನ್ನು ಹೆಚ್ಚು ಪರಿಣಾಮಕಾರಿಯನ್ನಾಗಿಸಿತು. ಈಗ ಮನರಂಜನೆ ಎಲ್ಲೆಡೆ ದೊರೆಯುತ್ತಿರುವುದರಿಂದ ಜನರು ರೇಡಿಯೋದಿಂದ ವಿಮುಖರಾಗಿದ್ದಾರೆ. ಆದರೆ ರೇಡಿಯೋ ಕೊಡುವ ತೃಪ್ತಿಯನ್ನು ಬೇರೆ ಮಾಧ್ಯಮಗಳು ಕೊಡಲಾರವು ಎಂದರು.ಸಾಕ್ಷ್ಯಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕ ಪೂನಾದ ಕೆಮಿಕಲ್‌ ಎಂಜಿನಿಯರ್ ಮಕರಂದ್ ವಾಯ್ಕರ್ ಮಾತನಾಡಿ, ರೇಡಿಯೋ ನಿರಂತರವಾಗಿ ನಾವೀನ್ಯತೆಗೆ ಹೊಂದಿಕೊಳ್ಳುವ ಮಾಧ್ಯಮ. ದೊಡ್ಡಗಾತ್ರದ ರೇಡಿಯೊಗಳಿಂದ ಪಾಕೆಟ್ ಸಾಧನಗಳವರೆಗೆ ಅದು ಕಾಲದೊಂದಿಗೆ ವಿಕಸನಗೊಂಡಿದೆ. ರೇಡಿಯೋದಲ್ಲಿ ಒಂದು ಬಗೆಯ ಮಾಂತ್ರಿಕತೆಯಿದೆ ಎಂದರು.ತನ್ನ ಪ್ರಯೋಗಗಳಿಂದಾಗಿ ಆಕಾಶವಾಣಿಯು ದೇಶದ ಅತಿ ದೊಡ್ಡ ಸಂವಹನ ಮಾಧ್ಯಮಗಳಲ್ಲಿ ಒಂದಾಗಿ ಬೆಳೆದಿದೆ. ಸಣ್ಣ ಪಟ್ಟಣಗಳಿಂದ ದೊಡ್ಡ ನಗರಗಳವರೆಗೆ, ರೇಡಿಯೋ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದೆ. ಒಮ್ಮೆ ಪೆಟ್ಟಿಗೆಯ ಆಕಾರದ ಸಾಧನಕ್ಕೆ ಸೀಮಿತವಾಗಿದ್ದ ಅದು ಈಗ ಡಿಜಿಟಲ್ ರೂಪಗಳಾಗಿ ವಿಕಸನಗೊಂಡಿದೆ, ವೆಬ್‌ಸೈಟ್‌ಗಳ ಮೂಲಕ ಪ್ರಸಾರವಾಗುತ್ತಿದೆ. ಸಾಕ್ಷ್ಯಚಿತ್ರವು ಈ ರೂಪಾಂತರವನ್ನು ಸೆರೆಹಿಡಿಯುತ್ತದೆ ಮತ್ತು ಇಂದಿನ ಪೀಳಿಗೆ ನೋಡದ ಇತಿಹಾಸವನ್ನು ವಿವರಿಸುತ್ತದೆ ಎಂದು ವಿವರಿಸಿದರು.ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಪ್ರಾಂಶುಪಾಲರಾದಡಾ.ಜಿ. ದಾಕ್ಷಾಯಿಣಿ, ರೇಡಿಯೋ ಸುನಾಮಿಯ ಕಾಲದಲ್ಲಿ ವಿಶ್ವಾಸಾರ್ಹ ಮಾಧ್ಯಮವಾಗಿ ಕೆಲಸ ಮಾಡಿತು.ಅದು ನಿರಂತರವಾಗಿ ತನ್ನ ಪ್ರಸ್ತುತತೆಯನ್ನು ಕಾಯ್ದುಕೊಂಡು ಬಂದಿದೆ.ಪ್ರಸ್ತುತ ಸಾಕ್ಷ್ಯಚಿತ್ರವು 36 ದೇಶಗಳಲ್ಲಿ ಪ್ರದರ್ಶನಗೊಂಡು 80 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪ್ರದರ್ಶನಗಳಿಗೆ ಆಯ್ಕೆಯಾಗಿರುವುದು ಅಭಿನಂದನೀಯ ಎಂದರು.ಸಾಕ್ಷ್ಯಚಿತ್ರದ ಕ್ರಿಯೇಟಿವ್ ಪ್ರೊಡ್ಯೂಸರ್ ಸೀಮಂತಿನಿ ಭಾಗ್ವತ್, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥಡಾ.ಸಿಬಂತಿ ಪದ್ಮನಾಭ ಕೆ. ವಿ. ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣಕ್ಕೆ ಸಿದ್ಧಗಂಗಾ ಮಠದ ಕೊಡುಗೆ ಅನನ್ಯ
ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರ ಹಿತ ಕಾಪಾಡಿ