ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ
ನರಸಿಂಹರಾಜಪುರ ಪಟ್ಟಣದ ಅಂಬೇಡ್ಕರ್ ವೃತ್ತ, ನಾಗಲಾಪುರ ಗ್ರಾಮದ ಮುಂಡೊಳ್ಳಿ, ಹೊಸಕೆರೆ, ಹೊನ್ನೇಕೊಡಿಗೆ ಗ್ರಾಮ ಪಂಚಾಯಿತಿಯ ವರ್ಕಾಟೆ, ಹಂತುವಾನಿ ಮುಂತಾದ ಕಡೆ ಬಿಜೆಪಿ ಯುವ ಮೋರ್ಚಾದ ತಾಲೂಕು ಅಧ್ಯಕ್ಷ ಪ್ರೀತಂ ನೇತೃತ್ವದಲ್ಲಿ ಬಿಜೆಪಿ ನಗರ ಅಧ್ಯಕ್ಷ ಸುರಭಿ ರಾಜೇಂದ್ರ, ಬಿಜೆಪಿ ಮುಖಂಡರಾದ ಕೆ.ಟಿ.ಮಂಜುನಾಥ್, ದ್ವಾರಮಕ್ಕಿ ಅಶ್ವನ್, ಯುವ ಮೋರ್ಚಾದ ಪ್ರಸಾದ್ ಸೇರಿದಂತೆ 15ಕ್ಕೂ ಹೆಚ್ಚು ಬಿಜೆಪಿ, ಬಜರಂಗದಳದ ಮುಖಂಡರು, ಕಾರ್ಯಕರ್ತರು ಸೇರಿ ಕಾರ್ಯಾಚರಣೆ ನಡೆಸಿ ಒಟ್ಟು 23 ದನಗಳಿಗೆ ಕಾಲರ್ ಅಳವಡಿಸಿದರು.
ಈ ಸಂದರ್ಭದಲ್ಲಿ ತಾಲೂಕು ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಪ್ರೀತಂ ಸುದ್ದಿಗಾರರೊಂದಿಗೆ ಮಾಹಿತಿ ನೀಡಿ, ರಾತ್ರಿ ಸಮಯದಲ್ಲಿ ವಾಹನ ಓಡಿಸುವಾಗ ಹಸುಗಳು ಕಾಣದೆ ಅಪಘಾತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಾಜಿ ಶಾಸಕ ಡಿ.ಎನ್.ಜೀವರಾಜ್ ಹಾಗೂ ತಾಲೂಕು ಬಿಜೆಪಿ ಅಧ್ಯಕ್ಷರ ಸೂಚನೆಯಂತೆ ಹಸುಗಳಿಗೆ ರೇಡಿಯಂ ಕಾಲರ್ ಅಳವಡಿಸಿದ್ದೇವೆ. ಇದರಿಂದ ವಾಹನಗಳ ಬೆಳಕು ಬಿದ್ದಾಗ ಹಸುಗಳು ಗೋಚರವಾಗಿ ಅಪಘಾತ ತಪ್ಪಲಿದೆ. ಮುಂದಿನ ದಿನಗಳಲ್ಲಿ ಶೃಂಗೇರಿ ಕ್ಷೇತ್ರದ ಎಲ್ಲಾ ಕಡೆ ಬಿಜಿಪಿ, ಬಜರಂಗದಳ ಹಾಗೂ ಸಂಘ ಪರಿವಾರದ ಸಹಕಾರದೊಂದಿಗೆ ಹಸುಗಳಿಗೆ ರೇಡಿಯಂ ಕಾಲರ್ ಅಳಡಿಸುವ ಕಾರ್ಯಾಚರಣೆ ನಡೆಸಲಾಗುವುದು ಎಂದು ತಿಳಿಸಿದರು.