ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ಅನ್ನಬ್ರಹ್ಮ ಚಾತುರ್ಮಾಸ್ಯದ ಧರ್ಮಸಭೆಯಲ್ಲಿ
ಅಶೋಕೆ: ಮನುಷ್ಯ ಸತ್ವಗುಣದ ಸೃಷ್ಟಿ, ಹುಲಿ ಬೇಟೆಯಾಡುವುದನ್ನು ಬಿಟ್ಟು ತಪಸ್ಸನ್ನು ಮಾಡಿದರೆ ಅದು ವಿಚಿತ್ರ ಎನಿಸುತ್ತದೆ. ಹಾಗೆಯೇ ಮನುಷ್ಯನು ಪ್ರಾಣಿಗಳಂತೆ ಬದುಕಬಾರದು, ಗಿಡಮರಗಳಂತೆ ನಿತ್ಯ ಜಾಢ್ಯದಿಂದ ನಿದ್ರೆಯಲ್ಲೂ ಕಳೆಯಬಾರದು. ಮನುಷ್ಯ ಅರಿವು - ಆನಂದ - ದಯೆ - ಕರುಣೆಗಳಿಂದ ಕೂಡಿದ ಬದುಕು ಬಾಳಬೇಕು ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದ್ದಾರೆ.
ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ಅನ್ನಬ್ರಹ್ಮ ಚಾತುರ್ಮಾಸ್ಯದ ಧರ್ಮಸಭೆಯಲ್ಲಿ ಗುರುವಾರ ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಆಹಾರದ ಚರಾಚರರೂಪಗಳ ಬಗ್ಗೆ ಅವರು ಪ್ರವಚನ ಅನುಗ್ರಹಿಸಿದರು.ಆಹಾರ ಪ್ರಪಂಚವನ್ನು ಹತ್ತಾರು ಬಗೆಯಲ್ಲಿ ಎರಡು ಗುಂಪುಗಳಾಗಿ ವಿಂಗಡಿಸಬಹುದು. ಆಯುರ್ವೇದದ ಆಚಾರ್ಯರು ಆಹಾರವನ್ನು ಪ್ರಮುಖವಾಗಿ ಎರಡು ವಿಧವಾಗಿ ವಿಂಗಡಿಸಿ ಸ್ಥಾವರ ಹಾಗೂ ಜಂಗಮ ಎಂದು ಕರೆದಿದ್ದಾರೆ. ಸ್ಥಾವರ ವಿಭಾಗವನ್ನು ಸಸ್ಯಜನ್ಯ ಹಾಗೂ ಜಂಗಮ ವಿಭಾಗವನ್ನು ಪ್ರಾಣಿಜನ್ಯ ಎನ್ನಬಹುದಾಗಿದೆ. ಸ್ಥಾವರವನ್ನು ಮತ್ತೆ ನಾಲ್ಕು ಬಗೆಯಲ್ಲಿ ವಿಭಾಗಿಸಿದ್ದು, ಹೂವಿಲ್ಲದೇ ಹಣ್ಣು ಬಿಡುವ ವನಸ್ಪತಿಗಳು, ಹೂವು ಬಿಟ್ಟು ಬಳಿಕ ಹಣ್ಣು ಬಿಡುವ ವೃಕ್ಷಗಳು, ಬಳ್ಳಿಗಳು, ಫಲವನ್ನು ಬಿಟ್ಟನಂತರ ತಾವಾಗಿಯೇ ಒಣಗುವ ಧಾನ್ಯಾದಿ ಗಿಡಗಳನ್ನು ಓಷಧಿಗಳು ಎಂದು ಕರೆಯಲಾಗಿದೆ. ಜಂಗಮದಲ್ಲಿಯೂ ನಾಲ್ಕು ಬಗೆಗಳಿದ್ದು, ಜರಾಯುಜ, ಅಂಡಜ, ಸ್ವೇದಜ, ಉದ್ಭಿಜ ಎಂದು ವಿಭಜಿಸಲಾಗಿದೆ ಎಂದು ಆಹಾರದ ವಿಧಗಳನ್ನು ವಿವರಿಸಿದರು
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.