ಕನ್ನಡಪ್ರಭ ವಾರ್ತೆ, ಹನೂರು
ತಮಿಳುನಾಡು ಭಾಗದಲ್ಲಿ ಜಲಪಾತ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ಆದರೆ, ರಾಜ್ಯದ ಭಾಗದಲ್ಲಿ ಜಲಪಾತ ವೀಕ್ಷಿಸಲು ನಿರ್ಬಂಧ ಮುಂದುವರೆದಿದೆ. ಕೂಡಲೇ ಅರಣ್ಯ ಇಲಾಖೆ ಮತ್ತು ಜಿಲ್ಲಾಡಳಿತ ನಿರ್ಬಂಧ ತೆರವು ಮಾಡಬೇಕು. ಹೊಗೇನಕಲ್ ಜಲಪಾತ ವೀಕ್ಷಣೆಗೆ ಕಳೆದ 15 ದಿನಗಳಿಂದ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ. ಕಾವೇರಿ ಹೊರಹರಿವು ಈಗ ಕಡಿಮೆಯಾಗಿದ್ದು ತಮಿಳುನಾಡಿನ ಭಾಗದಲ್ಲಿ ಈಗಾಗಲೇ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ್ದು ಅದರಂತೆ ನಮ್ಮ ಭಾಗದಲ್ಲೂ ಪ್ರವಾಸಿಗರು ಜಲಪಾತ ವೀಕ್ಷಿಸಲು ಅನುವು ಮಾಡಿಕೊಡಬೇಕೆಂಬುದು ತೆಪ್ಪ ಓಡಿಸುವವರ ಒತ್ತಾಯವಾಗಿದೆ.
ಈ ಕುರಿತು ತೆಪ್ಪ ನಡೆಸುವ ಪಳನಿಸ್ವಾಮಿ ಮಾತನಾಡಿ, ರಾಜ್ಯದ ವಿವಿಧ ಭಾಗಗಳಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ಬಂದಂತ ಭಕ್ತಾದಿಗಳು ಹೊಗೇನಕಲ್ ಜಲಪಾತಕ್ಕೆ ಭೇಟಿ ನೀಡಿ ಅಲ್ಲಿನ ಜಲಪಾತದ ಕಲ್ಲು ಬಂಡೆಗಳ ನಡುವೆ ಹರಿಯುವ ಕಾವೇರಿಯ ನರ್ತನ ಕಣ್ತುಂಬಿಕೊಳ್ಳುತ್ತಿದ್ದರು. ಈ ಮೂಲಕ, 400 ಮಂದಿ ತೆಪ್ಪ ಓಡಿಸುವ ಕುಟುಂಬಕ್ಕೆ ಆದಾಯ ಸಿಗುತ್ತಿತ್ತು. ಈಗ, ಜೀವನ ನಡೆಸುವುದೇ ಕಷ್ಟವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಮಣಿ ಹಾಗೂ ಶಕ್ತಿ ವೇಲ್ ಉಪಸ್ಥಿತರಿದ್ದರು.