ಕನ್ನಡಪ್ರಭವಾರ್ತೆ ಶಿವಮೊಗ್ಗ
ಅಪಾರ ಸಂಖ್ಯೆಯ ಬೆಂಬಲಿಗರು, ಕಾರ್ಯಕರ್ತರೊಂದಿಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಬಿ.ವೈ.ರಾಘವೇಂದ್ರ ಗುರುವಾರ ನಾಮಪತ್ರ ಸಲ್ಲಿಸಿದರು.ನಗರದ ರಾಮಣ್ಣ ಶ್ರೇಷ್ಠಿ ಪಾರ್ಕ್‍ನ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಆರಂಭಗೊಂಡ ಬೃಹತ್ ಮೆರವಣಿಯಲ್ಲಿ ಸುಮಾರು 50 ಸಾವಿರ ಕಾರ್ಯಕರ್ತರು, ಬೆಂಬಲಿಗರು ಭಾಗವಹಿಸಿ ಮೋದಿ, ಬಿಜೆಪಿ, ಯಡಿಯೂರಪ್ಪ, ಕುಮಾರಸ್ವಾಮಿ, ರಾಘವೇಂದ್ರ ಪರ ಘೋಷಣೆ ಕೂಗಿದರು. ಕೇಸರಿ ಧ್ವಜಗಳು, ಬಿಜೆಪಿ, ಜೆಡಿಎಸ್ ಬಾವುಟಗಳು ರಾರಾಜಿಸಿದವು. ಮೆರವಣಿಗೆಗೆ ಜಾನಪದ ಕಲಾತಂಡಗಳು ಮೆರುಗು ನೀಡಿದವು.
ಋಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬೈಂದೂರು ಸೇರಿ ಎಲ್ಲಾ ತಾಲೂಕು, ಹೋಬಳಿ, ಗ್ರಾಮ ಮಟ್ಟದಿಂದ ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ನೂರಾರು ಬಸ್ ಗಳಲ್ಲಿ ಆಗಮಿಸಿದ್ದರು. ಬಿರು ಬಿಸಿಲನ್ನೂ ಲೆಕ್ಕಿಸದೇ ಜನ ಮೆರವಣಿಗೆಯಲ್ಲಿ ಸಾಗಿ ಬಂದರು. ಅಲ್ಲಲ್ಲಿ ಮಜ್ಜಿಗೆ, ನೀರಿನ ವ್ಯವಸ್ಥೆ ಮಾಡಲಾಗಿತ್ತು. ಗೋಪಿ ವೃತ್ತದ ಬಳಿ ಇರುವ ಕಸ್ತೂರಾ ಬಾ ಕಾಲೇಜು ಮುಂಭಾಗದಲ್ಲಿ ಶಾಮಿಯಾನದ ಮೂಲಕ ನೆರಳಿನ ವ್ಯವಸ್ಥೆ ಮಾಡಲಾಗಿತ್ತು. ಮಾಜಿ ಸಿಎಂಗಳ ಮೆರುಗು: ಮೆರವಣಿಗೆಯಲ್ಲಿ ಒಂದೇ ವಾಹನದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ, ಜೊತೆ ಕುಮಾರಸ್ವಾಮಿ ಭಾಗಿಯಾಗಿದ್ದರು. ಇವರೊಂದಿಗೆ ಸಿ.ಟಿ.ರವಿ, ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಆರಗ ಜ್ಞಾನೇಂದ್ರ, ಎಸ್.ಎನ್. ಚನ್ನಬಸಪ್ಪ, ಶಾರದಾ ಪೂರ್ಯಾನಾಯ್ಕ್, ಕುಮಾರ್ ಬಂಗಾರಪ್ಪ, ಹರತಾಳು ಹಾಲಪ್ಪ, ಎಸ್.ರುದ್ರೇಗೌಡ ಮತ್ತಿತರರು ಇದ್ದರು.ರಾಘವೇಂದ್ರ ಅವರು ಒಂದೇ ದಿನ ಎರಡು ಬಾರಿ ನಾಮಪತ್ರ ಸಲ್ಲಿಸಿದರು. ಮೊದಲಬಾರಿ ನಾಮಪತ್ರ ಸಲ್ಲಿಕೆ ಸಂದರ್ಭ ಅವರೊಂದಿಗೆ ಜೆಡಿಎಸ್ ಶಾಸಕಿ ಶಾರದಾ ಪೂರ್ಯಾನಾಯ್ಕ್, ಭಾನುಪ್ರಕಾಶ್, ಎಚ್. ಹಾಲಪ್ಪ ಇದ್ದರು. ಎರಡನೇ ಬಾರಿ ನಾಮಪತ್ರ ಸಲ್ಲಿಕೆ ಮಾಡುವ ಸಂದರ್ಭ ಬಿ.ವೈ ರಾಘವೇಂದ್ರರೊಂದಿಗೆ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ, ಶಾಸಕ ಗುರುರಾಜ ಗಂಟಿಹೊಳಿ, ಮಾಜಿ ಶಾಸಕ ಅಶೋಕ್ ನಾಯ್ಕ , ವಿಧಾನ ಪರಿಷತ್ ಸದಸ್ಯ ರುದ್ರೇಗೌಡ ಜೊತೆಗೂಡಿದ್ದರು.ಜನರಿಂದ ಶಿವಮೊಗ್ಗ ಕ್ಷೇತ್ರವನ್ನ ಮೋದಿಗೆ ಅರ್ಪಿಸುವ ಸಂದೇಶ: ಬಿ.ವೈ.ಆರ್.ಉದ್ಘೋಷಶಿವಮೊಗ್ಗ: ನಾಮಪತ್ರ ಸಲ್ಲಿಸಲು ಬಂದ ಜನಸ್ತೋಮ ನೋಡಿದರೆ, ಶಿವಮೊಗ್ಗ ಲೋಕಸಭಾ ಕ್ಷೇತ್ರವನ್ನು ಮೋದಿ ಅವರಿಗೆ ಅರ್ಪಣೆ ಮಾಡುವ ಸಂದೇಶ ನೀಡಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಹೇಳಿದರು.
ಗುರುವಾರ ನಾಮಪತ್ರ ಸಲ್ಲಿಕೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಸಹಕಾರದಿಂದ ಬಿಜೆಪಿ ಅಭ್ಯರ್ಥಿಯಾಗಿ ಎರಡು ಪ್ರತಿ ನಾಮಪತ್ರ ಸಲ್ಲಿಸಿದ್ದೇನೆ. ಮಾಜಿ ಸಚಿವ ಹರತಾಳ ಹಾಲಪ್ಪ, ಆರಗ ಜ್ಞಾನೇಂದ್ರ, ಶಾರದಾ ಪೂರ್ಯಾ ನಾಯ್ಕ ಮೊದಲಾದವರು ಪಾಲ್ಗೊಂಡಿದ್ದಾರೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರನ್ನು ಒಂದೇ ವೇದಿಕೆಯಲ್ಲಿ ನೋಡುವ ಸೌಭಾಗ್ಯ ಸಿಕ್ಕಿದೆ. ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಪರಸ್ಪರ ಹೊಂದಾಣಿಕೆ ಮತ್ತು ಭಾವನೆಗಳು ಒಂದುಗೂಡಿದೆ. ಕಳೆದ ಬಾರಿಗಿಂತ ಹೆಚ್ಚಿನ ಬಹುಮತದಿಂದ ಗೆಲುವು ಸಾಧಿಸುವ ನಿರೀಕ್ಷೆ ಇದೆ ಎಂದರು.ಜೈ ಶ್ರೀರಾಮ್ ಘೋಷಣೆ ಕೂಗಿದ ಯುವಕನ ಮೇಲೆ ಹಲ್ಲೆ ನಡೆದಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇಂಥ ಘಟನೆಗಳು ಹೆಚ್ಚಾಗುತ್ತವೆ. ವಿರೋಧ ಪಕ್ಷಗಳಿಗೆ ಪ್ರಚಾರವೆಂದರೆ ನನ್ನ ಬಗ್ಗೆ ಅಪಪ್ರಚಾರ ಮಾಡುವುದಾಗಿದೆ. ಜಿಲ್ಲೆಯ ಜನರು ಅಪಪ್ರಚಾರಗಳಿಗೆ ಮತದಾನದ ಮೂಲಕ ಉತ್ತರ ನೀಡಲಿ ದ್ದಾರೆ. ಶಿಕಾರಿಪುರದಲ್ಲಿ ಮಹೇಶ್ ಹುಲ್ಮಾರ್, ಸಾಗರದಲ್ಲಿ ಮಲ್ಲಿಕಾರ್ಜುನ್ ಹಕ್ರೆ ಮೊದಲಾದ ಕಾಂಗ್ರೆಸ್ ನಾಯಕರು ಬಿಜೆಪಿ ಸೇರ್ಪಡೆಯಾಗಿ ಪಕ್ಷಕ್ಕೆ ಹೆಚ್ಚಿನ ಬಲ ಬಂದಿದೆ ಎಂದರು.ಕಾಂಗ್ರೆಸ್ ಅಭ್ಯರ್ಥಿ ರಾಘವೇಂದ್ರ ಬಳಿ 73.71 ಕೋಟಿ ರು.ಆಸ್ತಿ
ಶಿವಮೊಗ್ಗ: ಬಿಜೆಪಿಯಿಂದ ಲೋಕಸಭಾ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಹಾಲಿ ಸಂಸದ ಬಿ.ವೈ.ರಾಘವೇಂದ್ರ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ನಾಮ ಪತ್ರದ ಜೊತೆಗೆ ಒಟ್ಟು 73.71 ಕೋಟಿ ರು. ಮೌಲ್ಯದ ಆಸ್ತಿ ವಿವರ ಸಲ್ಲಿಸಿದ್ದಾರೆರಾಘವೇಂದ್ರ 55.85 ಕೋಟಿ ರು. ಮತ್ತು ಪತ್ನಿ ತೇಜಸ್ವಿನಿಯವರ ಹೆಸರಿನಲ್ಲಿ 17.86 ಕೋಟಿ ರು. ಆಸ್ತಿ ಇದೆ ಎಂದು ತಮ್ಮ ಅಫಿಡೆವಿಟ್ ನಲ್ಲಿ ಘೋಷಿಸಿ ಕೊಂಡಿ ದ್ದಾರೆ. ರಾಘವೇಂದ್ರ ಅವರ ಬಳಿ 31.09 ಕೋಟಿ ರು. ಚರಾಸ್ತಿ, 24.76 ಕೋಟಿ ರು.ಸ್ಥಿರಾಸ್ತಿ ಹಾಗೂ ತಮ್ಮ ಪತ್ನಿ ತೇಜಸ್ವಿನಿಯವರ ಬಳಿ 2.95 ಕೋಟಿ ರು. ಚರಾಸ್ತಿ ಮತ್ತು 14.90 ಕೋಟಿ ರು. ಸ್ಥಿರಾಸ್ತಿ ಇದೆ ಎಂದು ಹೇಳಿದ್ದಾರೆ.ರಾಘವೇಂದ್ರ ಅವರು ವಿವಿಧ ಕಂಪನಿ, ಬಾಂಡ್, ಜೀವವಿಮೆ ಸೇರಿದಂತೆ ಹಲವು ಕಡೆ ಒಟ್ಟು 7.71 ಕೋಟಿ ರು. ಹಾಗೂ ಇವರ ಪತ್ನಿ ತೇಜಸ್ವಿನಿಯವರು 7 ಕೋಟಿ ರು. ಹೂಡಿಕೆ ಮಾಡಿದ್ದಾರೆ. ರಾಘವೇಂದ್ರ ಅವರ ಬಳಿ 1988 ರ ಮಾಡೆಲ್ ನ ಒಂದು ಅಂಬಾಸಿಡರ್, ಟೊಯೋಟಾ ಫಾರ್ಚೂನರ್, ಫರ್ಗ್ಯೂಸನ್ ವಾಹನಗಳಿದ್ದು, ಇವುಗಳ ಒಟ್ಟು ಮೌಲ್ಯ 44.77 ಲಕ್ಷ ರು.ಗಳಾಗಿದೆ.ರಾಘವೇಂದ್ರ ವಿವಿಧ ಬ್ಯಾಂಕ್‌ಗಳಲ್ಲಿ 13 ಉಳಿತಾಯ ಖಾತೆಗಳಲ್ಲಿ 98,01,123 ರು. ಠೇವಣಿ ಹೊಂದಿದ್ದಾರೆ. ಪತ್ನಿ ತೇಜಸ್ವಿನಿ ಹೆಸರಿನಲ್ಲಿ ವಿವಿಧ ಬ್ಯಾಂಕ್‌ಗಳಲ್ಲಿ 8 ಖಾತೆಗಳಿದ್ದು, ಇವುಗಳಲ್ಲಿ 25,65,577 ರು. ಹಣವಿದೆ. ರಾಘವೇಂದ್ರ 15 ಕಂಪನಿಗಳಲ್ಲಿ 7.68 ಕೋಟಿ ರು. ಹೂಡಿಕೆ ಮಾಡಿದ್ದಾರೆ. ತೇಜಸ್ವಿನಿ ಆರು ಕಂಪನಿಗಳಲ್ಲಿ 1.22 ಕೋಟಿ ರು. ಹೂಡಿಕೆ ಮಾಡಿದ್ದಾರೆ. ಮ್ಯೂಚುವಲ್ ಫಂಡ್ಸ್, ಬಾಂಡ್‌ಗಳಲ್ಲಿ ರಾಘವೇಂದ್ರ 2.22 ಕೋಟಿ ರು., ತೇಜಸ್ವಿನಿ 30 ಸಾವಿರ ರು. ಹೂಡಿಕೆ ಮಾಡಿದ್ದಾರೆ.ರಾಘವೇಂದ್ರ ಬಳಿ 98.33 ಲಕ್ಷ ರು. ಮೌಲ್ಯದ 1021.50 ಗ್ರಾಂ ಚಿನ್ನ, 114.26 ಕ್ಯಾರೆಟ್ ವಜ್ರ, 8.6 ಕೆ.ಜಿ ಬೆಳ್ಳಿ ಮತ್ತು 42 ಬೆಲೆಬಾಳುವ ಹರಳು ಇದೆ. ಪತ್ನಿ ತೇಜಸ್ವಿನಿ ಬಳಿ 1.13 ಕೋಟಿ ರು. ಮೌಲ್ಯದ 1395.92 ಗ್ರಾಂ ಚಿನ್ನ, 96.022 ಕ್ಯಾರೆಟ್ ವಜ್ರ, 5.1 ಕೆ.ಜಿ ಬೆಳ್ಳಿ ಇದೆ. ರಾಘವೇಂದ್ರ ಹೆಸರಿನಲ್ಲಿ 1.32 ಕೋಟಿ ರು. ಮೌಲ್ಯದ 11.33 ಎಕರೆ ಕೃಷಿ ಜಮೀನು, ವಿವಿಧೆಡೆ 18 ಕೋಟಿ ರು. ಮೌಲ್ಯದ ಕೃಷಿಯೇತರ ಭೂಮಿ ಇದೆ. ಪತ್ನಿ ಹೆಸರಿನಲ್ಲಿ 8.07 ಕೋಟಿ ರು. ಮೌಲ್ಯದ ಕೃಷಿ ಯೇತರ ಭೂಮಿ ಇದೆ. ರಾಘವೇಂದ್ರ ಹೆಸರಿನಲ್ಲಿ 1.24 ಕೋಟಿ ರು. ಮೌಲ್ಯದ ವಾಣಿಜ್ಯ ಕಟ್ಟಡ, 4.18 ಕೋಟಿ ರು. ಮೌಲ್ಯದ ವಸತಿ ಕಟ್ಟಡಗಳಿವೆ. ಪತ್ನಿ ತೇಜಸ್ವಿನಿ ಹೆಸರಿನಲ್ಲಿ 6.82 ಕೋಟಿ ರು. ಮೌಲ್ಯದ ವಾಸದ ಮನೆಗಳಿವೆ.ರಾಘವೇಂದ್ರ ಅವರು ಸೋದರ ವಿಜಯೇಂದ್ರ, ಪತ್ನಿ ತೇಜಸ್ವಿನಿ, ಪುತ್ರರಿಗೆ ಹಾಗೂ ವಿವಿಧ ಸಂಸ್ಥೆಗಳಿಗೆ 20.39 ಕೋಟಿ ರು. ಸಾಲ ನೀಡಿದ್ದಾರೆ. ಇವರ ಪತ್ನಿ ತೇಜಸ್ವಿನಿ 2.50 ಲಕ್ಷ ರು. ಸಾಲ ನೀಡಿದ್ದಾರೆ. ಬಿ.ವೈ.ರಾಘವೇಂದ್ರ ವಿರುದ್ಧ ನಾಲ್ಕು ಪ್ರಕರಣಗಳಿವೆ ಎಂದು ಅಫಿಡವಿಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಮತ್ಯಾರೂ ನಿಲ್ಲೊ ಧೈರ್ಯ ಮಾಡದಂತೆ ರಾಘಣ್ಣನ ಗೆಲ್ಲಿಸಿ: ಮಾಜಿ ಸಿಎಂ ಬಿ.ಎಸ್.ವೈ ಕರೆಶಿವಮೊಗ್ಗ: ಇತರರು ಚುನಾವಣೆಗೆ ನಿಲ್ಲುವ ಧೈರ್ಯ ಮಾಡಬಾರದು ಹಾಗೆ ಸಂಸದ ರಾಘವೇಂದ್ರರನ್ನು ಗೆಲ್ಲಿಸಿಕೊಡಬೇಕು ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಶಿವಮೊಗ್ಗದಲ್ಲಿ ಕರೆ ನೀಡಿದರು.
ನಗರದಲ್ಲಿ ಸೀನಪ್ಪ ಶೆಟ್ಟಿ (ಗೋಪಿವೃತ್ತ) ವೃತ್ತದಲ್ಲಿ ಗುರುವಾರ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿ, ದೇವೇಗೌಡರು ಹಾಗೂ ಮೋದಿಯವರು ರಾಜ್ಯಾದಾದ್ಯಂತ ಓಡಾಟ ಮಾಡುತ್ತಾರೆ. ಕಾರ್ಯಕರ್ತರು ಮೈಮರಿಯಬೇಡಿ, ಯಾರೊಬ್ಬರೂ ಶಿವಮೊಗ್ಗದಲ್ಲಿ ಇನ್ನು ಮುಂದೆ ಚುನಾವಣೆಯಲ್ಲಿ ನಿಲ್ಲುವ ಧೈರ್ಯ ಮಾಡಬಾರದು ಹಾಗೆ ರಾಘವೇಂದ್ರ ಅವರನ್ನು ಗೆಲ್ಲಿಸಿ ಎಂದು ಕರೆ ನೀಡಿದರು.ಈ ಮೆರವಣಿಗೆ ನೋಡಿದ ಮೇಲೆ ಬಿ.ವೈ.ರಾಘವೇಂದ್ರ 3 ಲಕ್ಷ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ. ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗಾಗಿದೆ. ದೇಶದ ಪ್ರಧಾನಿ ಅಭ್ಯರ್ಥಿ ಕಾಂಗ್ರೆಸ್ ಬಳಿ ಇಲ್ಲ. ಬಿಜೆಪಿ ಬಳಿ ಶಕ್ತಿ ಶಾಲಿ ವಿಶ್ವನಾಯಕ ಮೋದಿ ಇದ್ದಾರೆ. 28 ಸ್ಥಾನ ಬಿಜೆಪಿ ಮೈತ್ರಿ ಗೆಲ್ಲುತ್ತದೆ ಎಂದರು.ತಂದೆಗೆ ತಕ್ಕ ಮಗ: ಬಸವರಾಜ ಬೊಮ್ಮಾಯಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರು ತಂದೆಗೆ ತಕ್ಕ ಮಗ, ಜಗ ಮೆಚ್ಚಿದ ಮಗ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.ಕಾಂಗ್ರೆಸ್ ನವರು ಹೊಸ ಗ್ಯಾರೆಂಟಿಗಳನ್ನು ಘೊಷಣೆ ಮಾಡಿದ್ದಾರೆ. ಪ್ರತಿ ಮನೆ ಮಹಿಳೆಯರಿಗೆ ಒಂದು ಲಕ್ಷ ರು. ಕೊಡುವುದಾಗಿ ಹೇಳುತ್ತಿದ್ದಾರೆ. ಲೋಕಸಭೆ ಯಲ್ಲಿ 543 ಸ್ಥಾನಗಳಿವೆ. ಸಂಸತ್ತಿನಲ್ಲಿ ಸ್ಪಷ್ಟ ಬಹುಮತ ಪಡೆಯಲು 272 ಸ್ಥಾನಗಳು ಬೇಕು. ಕಾಂಗ್ರೆಸ್ ಲೋಕಸಭೆಗೆ ಸ್ಪರ್ಧೆ ಮಾಡುವುದೇ 230 ಸ್ಥಾನಗಳಿಗೆ. ಅವರು ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಪರೀಕ್ಷೆಯಲ್ಲಿ ಪಾಸ್ ಆಗಲು ಕನಿಷ್ಠ 35 ಅಂಕಗಳು ಬೇಕು. ಆದರೆ, ಇವರು ಪರೀಕ್ಷೆ ಬರೆದಿರು ವುದೇ 20 ಅಂಕಗಳಿಗೆ ಇವರು ಪಾಸ್ ಆಗಲು ಹೇಗೆ ಸಾಧ್ಯ. ಕಾಂಗ್ರೆಸ್ ಪಕ್ಷ ಫೇಲ್ ಆಗುವ ಬೇಕಾಬಿಟ್ಟಿ ಪಕ್ಷ ಎಂದು ವಾಗ್ದಾಳಿ ನಡೆಸಿದರು.ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿ, ಮಾಜಿ ಶಾಸಕ ಸಿ.ಟಿ.ರವಿ, ನಾವು ಹಿಂದುತ್ವವನ್ನು ಬಿಟ್ಟುಕೊಟ್ಟು ರಾಜಕಾರಣ ಮಾಡು ವುದಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ಬಿಲದಲ್ಲಿದ್ದವರೆಲ್ಲ ಹೊರಗೆ ಬಂದಿದ್ದಾರೆ. ಜೈ ಶ್ರೀ ರಾಮ್ ಘೋಷಣೆ ಕೂಗಿದಕ್ಕೆ ಹಲ್ಲೆ ಮಾಡಿದ್ದಾರೆ. ಇವರೆಲ್ಲಾ ಕೊಬ್ಬಿರೋದು ಕಾಂಗ್ರೆಸ್‌ನ ಕಾರಣಕ್ಕೆ. ನಿಮ್ಮ ಒಂದೊಂದು ವೋಟು ಕೂಡ ರಾಷ್ಟ್ರದ ಹಿತಕ್ಕಾಗಿ. ಕಾಂಗ್ರೆಸ್ ನವರ ಕೊಬ್ಬು ಇಳಿಸಬೇಕಾದರೆ ನೀವು ಬಿಜೆಪಿಗೆ ಮತ ಹಾಕಬೇಕು. ದ ಶಿವಮೊಗ್ಗದಲ್ಲಿ ಮತ್ತೊಮ್ಮೆ ರಾಘಣ್ಣ ಗೆಲ್ಲುತ್ತಾರೆ. ದೇಶಕ್ಕೆ ಮೋದಿ, ಶಿವಮೊಗ್ಗಕ್ಕೆ ರಾಘಣ್ಣರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.ಮೆರವಣಿಗೆಯಲ್ಲಿ ಮಾಜಿ ಸಚಿದರಾದ ಹರತಾಳು ಹಾಲಪ್ಪ, ಕುಮಾರ ಬಂಗಾರಪ್ಪ, ಭೈರತಿ ಬಸವರಾಜ್, ಆರಗ ಜ್ಞಾನೇಂದ್ರ , ಶಾಸಕರಾದ ಚನ್ನಬಸಪ್ಪ, ಶಾರದಾಪೂರ್ಯ ನಾಯ್ಕ್, ವಿಧಾನ ಪರಿಷತ್ ಸದಸ್ಯರಾದ ರುದ್ರೇಗೌಡ, ಅರುಣ್ ಡಿಎಸ್, ಭಾರತಿ ಶೆಟ್ಟಿ , ಎಸ್.ಎಲ್. ಬೋಜೆ ಗೌಡ, ಮಾಜಿ ಶಾಸಕ ಕೆ.ಬಿ. ಪ್ರಸನ್ನ ಕುಮಾರ್. ಪ್ರಮುಖರಾದ ಎಂ.ಡಿ.ಲಕ್ಷ್ಮೀನಾರಾಯಣ್, ದತ್ತಾತ್ರಿ, ಎಂ.ಬಿ.ಭಾನುಪ್ರಕಾಶ್, ಶಾರದಾ ಅಪ್ಪಾಜಿ, ಬಿಜೆಪಿ ಜಿಲ್ಲಾಧ್ಯಕ್ಷ ಮೇಘರಾಜ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ನಾಲ್ಕೂವರೆ ಲಕ್ಷಕ್ಕಿಂತಲೂ ಅಧಿಕ ಮತಗಳಿಂದ ಗೆಲ್ಲಿಸಿ: ಎಚ್‌ಡಿಕೆ ಕರೆಯಡಿಯೂರಪ್ಪರಂತೆ ಈ ಬಾರಿ ಬಿ.ವೈ.ರಾಘವೇಂದ್ರ ಅವರನ್ನು ನಾಲ್ಕೂವರೆ ಲಕ್ಷಕ್ಕಿಂತಲೂ ಅಧಿಕ ಮತಗಳಿಂದ ಆರಿಸಿ ಕಳುಹಿಸಬೇಕು ಎಂದು ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದರು. ಆತ್ಮೀಯ ಸ್ನೇಹಿತರಾದ ಬಿ.ವೈ.ರಾಘವೇಂದ್ರ ಅವರು ನಾಲ್ಕನೇ ಬಾರಿ ನಾಮಪತ್ರ ಸಲ್ಲಿಸಿದ್ದಾರೆ. ಇವತ್ತು ಐತಿಹಾಸಿಕ ಮೆರವಣಿಗೆ ನಡೆದಿದೆ. ರೈತರ ಬಗ್ಗೆ ಕಾಳಜಿ ಇರುವ ನಾಯಕ ಯಡಿಯೂರಪ್ಪ ಇಲ್ಲೇ ಇದ್ದಾರೆ. ದೇಶಕ್ಕೆ ನರೇಂದ್ರ ಮೋದಿಯವರ ನಾಯಕತ್ವ ಅನಿವಾರ್ಯವಾಗಿದೆ. ಜಿಲ್ಲೆ ಅಭಿವೃದ್ಧಿಯಲ್ಲಿ ರಾಜ್ಯಕ್ಕೆ ಮಾದರಿಯಾಗಿದೆ ಎಂದವರು ಹೇಳಿದರು.ಮಿಡ್ಲ್ ಪಕ್ಕ..ದರ್ಶನ್ ಪ್ರಚಾರಕ್ಕೆ ಹೋದ್ರೆ ತಪ್ಪೇನಿಲ್ಲ: ಕುಮಾರಸ್ವಾಮಿಶಿವಮೊಗ್ಗ: ಪ್ರಜಾಪ್ರಭುತ್ವದಲ್ಲಿ ಯಾರು ಯಾರ ಪರ ಬೇಕಾದರೂ ಪ್ರಚಾರ ಮಾಡಬಹುದು. ನಟ ದರ್ಶನ್ ಪ್ರಚಾರಕ್ಕೆ ಹೋಗುವುದರಲ್ಲಿ ತಪ್ಪೇನಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು. ಶಿವಮೊಗ್ಗದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯದಲ್ಲಿ ದರ್ಶನ್ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಹೋಗುವುದರಲ್ಲಿ ತಪ್ಪೇನಿಲ್ಲ. ಅವರ ಕರ್ತವ್ಯ ಅವರು ಮಾಡುತ್ತಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡುವಂಥದ್ದು ಏನೂ ಇಲ್ಲ ಎಂದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿಚಾರದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ದೇವೇಗೌಡರು ಹೇಳಿದ್ದು 30 ರಿಂದ 35 ವರ್ಷದ ಕಥೆ. ಅದಕ್ಕೆ ದಾಖಲೆ ಇದೆ ಎಂದು ದೇವೇಗೌಡ್ರು ಹೇಳಿದ್ದಾರೆ. ಬಿಜೆಪಿಯಲ್ಲಿ ಭಿನ್ನಮತದ ವಿಚಾರವನ್ನು ಬಿಜೆಪಿ ಹೈಕಮಾಂಡ್ ಬಗೆಹರಿಸುತ್ತಿದೆ. ರಾಹುಲ್ ಗಾಂಧಿ ಪಾಪ ಪ್ರಚಾರ ಮಾಡಿದ್ದಾರೆ. ಅಧ್ಯಕ್ಷರು ಯಾರು, ಮುಖ್ಯಮಂತ್ರಿ ಯಾರು ಎಂಬುದು ಅವರಿಗೇ ಗೊತ್ತಿಲ್ಲ. ಇನ್ಯಾವ ರೀತಿ ಪ್ರಚಾರ ಮಾಡಿದ್ದಾರೆಂದು ನೀವೇ ತಿಳಿದುಕೊಳ್ಳಿ ಎಂದು ಕುಟುಕಿದರು.ಜೆಡಿಎಸ್, ಬಿಜೆಪಿ ಒಗ್ಗಟ್ಟಾಗಿ ಹೊಂದಾಣಿಕೆಯಿಂದ ಕೆಲಸ ಮಾಡುತ್ತಿದ್ದೇವೆ. ಶಿವಮೊಗ್ಗ ಕ್ಷೇತ್ರದಲ್ಲಿ ಉತ್ತಮವಾಗಿ ಹೊಂದಾಣಿಕೆ ನಡೆದಿದೆ. ಬಿಜೆಪಿ ಅಭ್ಯರ್ಥಿ ಹೆಚ್ಚಿನ ಅಂತರದಿಂದ ಗೆಲುವು ಸಾಧಿಸಬೇಕು. ರಾಜ್ಯದಲ್ಲಿ ಎಲ್ಲಾ 28 ಕ್ಷೇತ್ರಗಳಲ್ಲಿ ಮೈತ್ರಿಕೂಟ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಭವಿಷ್ಯ ನುಡಿದರು.
.