ಬೆಂಗಳೂರು : ಗುರು ರಾಘವೇಂದ್ರ ಹಾಗೂ ವಸಿಷ್ಠ ಸಹಕಾರಿ ಬ್ಯಾಂಕ್ ಹಗರಣದಿಂದ ಲಕ್ಷಾಂತರ ಮಂದಿ ಠೇವಣಿದಾರರು ಬೀದಿಗೆ ಬಿದ್ದಿದ್ದು, 300 ಮಂದಿ ಸಾವನ್ನಪ್ಪಿದ್ದಾರೆ. ಅವರಿಗೆ ನ್ಯಾಯ ಒದಗಿಸಲು ಲೋಕಸಭೆ ಚುನಾವಣೆ ಬಳಿಕ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ ಮಾಡಿ ತನಿಖೆ ನಡೆಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಠೇವಣಿದಾರರ ಅಹವಾಲು ಆಲಿಸಿದ್ದಾರೆ. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯ ಸರ್ಕಾರದಿಂದಲೇ ಅವರಿಗೆ ನ್ಯಾಯ ಒದಗಿಸುವಂತೆ ಸೂಚನೆ ನೀಡಿದ್ದು, ಲೋಕಸಭೆ ಚುನಾವಣೆ ಬಳಿಕ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ. ಹೀಗಾಗಿ ಯಾರೂ ಧೃತಿಗೆಡಬೇಡಿ ಎಂದು ಭರವಸೆ ನೀಡಿದರು.
ಕೆಪಿಸಿಸಿ ಕಚೇರಿಯಲ್ಲಿ ಕೆ.ಪಿ.ನಂಜುಂಡಿ ಪಕ್ಷ ಸೇರ್ಪಡೆ ವೇಳೆ ಮಾತನಾಡಿದ ಅವರು, ಪ್ರಿಯಾಂಕ ಗಾಂಧಿ ಅವರು ಕೇರಳಕ್ಕೆ ತೆರಳುವ ಮುನ್ನ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ನೊಂದ ಜನರು ಅವರನ್ನು ಭೇಟಿ ಮಾಡಿದ್ದರು. ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್, ವಸಿಷ್ಠ ಸಹಕಾರಿ ಬ್ಯಾಂಕ್ ಗಳಲ್ಲಿನ 3 ಲಕ್ಷ ಠೇವಣಿದಾರರು ಮೋಸಹೋಗಿದ್ದು, ಇದರಲ್ಲಿ 300ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಬಿಜೆಪಿ ಸರ್ಕಾರ ಇದ್ದಾಗ ಈ ವಿಚಾರವಾಗಿ ಹೋರಾಟ ಮಾಡಿದ್ದರು. ಆಗ ಈ ಪ್ರಕರಣವನ್ನು ಸಿಬಿಐಗೆ ವಹಿಸುವುದಾಗಿ ಭರವಸೆ ನೀಡಿದರಾದರೂ ಸಿಬಿಐ ತನಿಖೆಗೆ ಆದೇಶ ನೀಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆದರೆ ಕಾಂಗ್ರೆಸ್ ಸರ್ಕಾರ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ತೀರ್ಮಾನಿಸಿದೆ. ಕೆಲವು ಮಾರ್ಗಸೂಚಿಗಳ ನಂತರ ಬ್ಯಾಂಕ್‌ಗಳ ಪ್ರಕರಣವನ್ನು ಸಿಬಿಐನಿಂದಲೇ ತನಿಖೆಯಾಗಬೇಕಿದೆ. ಈ ಹಗರಣದಲ್ಲಿ ಬಿಜೆಪಿ ನಾಯಕರ ಕೈವಾಡವಿರುವ ಕಾರಣ ಸಿಬಿಐ ಅಧಿಕಾರಿಗಳು ಬಿಜೆಪಿ ನಾಯಕರ ವಿರುದ್ಧ ಪ್ರಕರಣ ದಾಖಲಿಸಿಲ್ಲ. ಹೀಗಾಗಿ ಈಗಲೂ ಬಿಜೆಪಿಯಿಂದ ನ್ಯಾಯ ದೊರಕುವ ಭರವಸೆಯಿಲ್ಲ ಎಂದು ದೂರಿದರು.
ರಾಜ್ಯ ಸರ್ಕಾರದಿಂದಲೇ ಎಸ್‌ಐಟಿ ತನಿಖೆ:
ಚುನಾವಣೆ ಸಮಯದಲ್ಲಿ ಈ ಸಂತ್ರಸ್ತರು ಸಂಸದ ತೇಜಸ್ವಿ ಸೂರ್ಯ ಅವರ ವಿರುದ್ಧ ರೊಚ್ಚಿಗೆದ್ದಿರುವ ವಿಡಿಯೋ ನೋಡಿದೆ. ಸಿಬಿಐ ಈ ಸಂತ್ರಸ್ತರಿಗೆ ನ್ಯಾಯ ಒದಗಿಸಿಕೊಡದಿದ್ದರೆ ರಾಜ್ಯ ಸರ್ಕಾರವೇ ವಿಶೇಷ ತನಿಖಾ ತಂಡವನ್ನು ರಚಿಸಿ ಇವರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಪ್ರಿಯಾಂಕಾ ಗಾಂಧಿ ಅವರು ನಮ್ಮ ಮುಖ್ಯಮಂತ್ರಿಗಳಿಗೆ ಸೂಚಿಸಿದ್ದಾರೆ. ಈ ವಿಚಾರವಾಗಿ ನನಗೂ ನಿರ್ದೇಶನ ನೀಡಿದ್ದು, ಚುನಾವಣೆ ನಂತರ ಈ ಬಗ್ಗೆ ತೀರ್ಮಾನ ಮಾಡಿ ಸಂತ್ರಸ್ತರಿಗೆ ನ್ಯಾಯ ಒದಗಿಸಲಾಗುವುದು ಎಂದು ಭರವಸೆ ನೀಡಿದರು.--
ಠೇವಣಿದಾರರಿಂದ ಪ್ರಿಯಾಂಕಾ ಭೇಟಿ
ಶ್ರೀ ಗುರುರಾಘವೇಂದ್ರ ಸಹಕಾರಿ ಬ್ಯಾಂಕ್ ಠೇವಣಿದಾರರು ಬೆಂಗಳೂರು ದಕ್ಷಿಣ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾರೆಡ್ಡಿ ನೇತೃತ್ವದಲ್ಲಿ ಬುಧವಾರ ಬೆಳಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಭೇಟಿಯಾಗಿ ತಮಗಾಗಿರುವ ಅನ್ಯಾಯದ ಬಗ್ಗೆ ರಾಷ್ಟ್ರಮಟ್ಟದಲ್ಲಿ ಧ್ವನಿ ಎತ್ತುವಂತೆ ಮನವಿ ಮಾಡಿದರು. ಶ್ರೀ ಗುರು ರಾಘವೇಂದ್ರ ಬ್ಯಾಂಕ್ ಸಹಕಾರಿ ಬ್ಯಾಂಕ್ ಹಗರಣದಿಂದ ಠೇವಣಿದಾರರು ಲಕ್ಷಾಂತರರ ರು. ಕಳೆದುಕೊಂಡಿದ್ದಾರೆ.
ಕೆಲ ಜನಪ್ರತಿನಿಧಿಗಳೇ ಈ ಹಗರಣದಲ್ಲಿ ಶಾಮೀಲಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಂಡು ಠೇವಣಿದಾರರ ಹಣ ಮರಳಿಸುವಂತಾಗಬೇಕು. ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ವಹಿಸಿದ್ದರೂ, ಪ್ರಕರಣದ ತನಿಖೆ ನಿಧಾನಗತಿಯಲ್ಲಿ ಸಾಗಿದೆ. ಹೀಗಾಗಿ ಸಿಬಿಐ ತನಿಖೆಗೆ ವೇಗ ದೊರೆಯುವಂತೆ ಮಾಡಲು ಕೇಂದ್ರ ಮಟ್ಟದಲ್ಲಿ ಒತ್ತಡ ತರುವಂತೆ ಕೋರಿದರು. ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಪ್ರಿಯಾಂಕಾ ಗಾಂಧಿ, ಈ ಬಗ್ಗೆ ಕೇಂದ್ರದಲ್ಲಿ ಧ್ವನಿ ಎತ್ತಲಾಗುವುದು ಎಂದು ತಿಳಿಸಿದರು. ಕಾಂಗ್ರೆಸ್ ಮುಖಂಡ ಡಾ। ಶಂಕರ್ ಗುಹಾ ಇದ್ದರು.